ಗ್ವಾಲಿಯರ್:‘ಕಾರ್ಯಾಚರಣೆಗೂಮೊದಲು ನಾವು ಸಾಕಷ್ಟು ಸಿಗರೇಟುಗಳನ್ನು ಸೇದುತ್ತಿದ್ದೆವು’ ಎಂದು ಫೆಬ್ರುವರಿಯಲ್ಲಿ ಪಾಕಿಸ್ತಾನದ ಬಾಲಾಕೋಟ್ ಬಳಿ ಜೈಷ್ –ಎ–ಮೊಹಮ್ಮದ್ ಭಯೋತ್ಪಾಕದ ಸಂಘಟನೆ ತರಬೇತಿ ಕೇಂದ್ರದ ಮೇಲೆ ವಾಯುದಾಳಿ(ಏರ್ ಸ್ಟ್ರೈಕ್) ನಡೆಸಿದ ತಂಡದಲ್ಲಿದ್ದ ಯುವ ಸ್ಕ್ವಾಡ್ರನ್ ಲೀಡರ್ ಹೇಳಿದ್ದಾರೆ. ‘ನಮ್ಮ ಯೋಜನೆ ಏನೆಂದು ತಿಳಿದ ಬಳಿಕ ಉದ್ವೇಗಕ್ಕೊಳಗಾಗಿದ್ದೆವು’ಎಂದೂ ತಿಳಿಸಿದ್ದಾರೆ.
1971ರ ಯುದ್ಧದ ನಂತರ ಪಾಕಿಸ್ತಾನದ ಗಡಿಯೊಳಗಿನ ಗುರಿಯ ಮೇಲೆ ಭಾರತೀಯ ವಾಯುಪಡೆ ನಡೆಸಿದ ಮೊದಲ ದಾಳಿಯಲ್ಲಿ ತಮ್ಮ ಪಾತ್ರದ ಬಗ್ಗೆ ‘ಮಿರಾಜ್–2000’ ಯುದ್ಧ ವಿಮಾನದ ಪೈಲಟ್ ಸ್ವ್ಕಾಡ್ರನ್ ಲೀಡರ್‌ಗಳ ಪೈಕಿ ಒಬ್ಬರು ಅನುಭವಗಳನ್ನು ಹಂಚಿಕೊಂಡಿದ್ದಾರೆ ಎಂದು ಎನ್‌ಡಿ ಟಿ.ವಿ ವರದಿ ಮಾಡಿದೆ.
ಈ ಕುರಿತು ಮಾತನಾಡಿದ ಇಬ್ಬರು ಪೈಲಟ್‌ಗಳು ಯಾರೊಬ್ಬರ ಹೆಸರನ್ನೂ ಬಹಿರಂಗಪಡಿಸದಂತೆ ಎನ್‌ಡಿ ಟಿ.ವಿಗೆ ಮನವಿ ಮಾಡಿದ್ದಾರೆ.
‘ಸಂಪೂರ್ಣ ಕಾರ್ಯಾಚರಣೆಗೆ ಸುಮಾರು ಎರಡೂವರೆ ಗಂಟೆ ಬೇಕಾಯಿತು’ ಎಂದು ಎರಡನೇ ಸ್ಕ್ವಾಡ್ರನ್ ಲೀಡರ್ ಹೇಳಿದ್ದಾರೆ. ಈ ಇಬ್ಬರೂ ಪೈಲಟ್‌ಗಳು ‘ಸ್ಪೈಸರ್–2000' ಬಾಂಬ್‌ಗಳನ್ನು ಸ್ಯಾಟಲೈಟ್ ನಿರ್ದೇಶಿತ ಗುರಿಯತ್ತ ಉಡಾಯಿಸಿದ್ದಾರೆ.
ಫೆಬ್ರುವರಿ 26ರಂದು ಭಾರತೀಯ ವಾಯುಪಡೆ(ಐಎಎಫ್) 12 ‘ಮಿರಾಜ್ 2000’ ಜೆಟ್‌ಗಳನ್ನು ಕಾರ್ಯಾಚರಣೆಗೆ ನಿಯೋಜಿಸಿತ್ತು. ಅವುಗಳು ಎರಡು ಪ್ರತ್ಯೇಕ ರೀತಿಯ ಇಸ್ರೇಲ್ ನಿರ್ಮಿತ ಬಾಂಬ್‘ಸ್ಪೈಸ್ 2000’ಗಳಮೂಲಕ ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಲು ಉದ್ದೇಶಿಸಲಾಗಿತ್ತು. ಈ ಸಂಬಂಧ ಭಾರತೀಯ ವಾಯುಪಡೆ ಸಾಕ್ಷ್ಯಾಧಾರದ ವಿಡಿಯೊಗಳನ್ನೂ ಬಿಡುಗಡೆ ಮಾಡಿತ್ತು. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ 40 ಯೋಧರು ಹುತಾತ್ಮರಾಗಿದ್ದರು. ಬಳಿಕ, ಪ್ರತೀಕಾರವಾಗಿ ಬಾಲಾಕೋಟ್ ಉಗ್ರರ ನೆಲೆಗಳಮೇಲೆ ವಾಯು ದಾಳಿ ನಡೆಸುವುದು ಕಾರ್ಯಾಚರಣೆಯ ಉದ್ದೇಶವಾಗಿತ್ತು.
ದಾಳಿ ವೇಳೆ ನಿಖರ ಗುರಿ ತಲುಪಿರುವ ಬಗ್ಗೆ ವಿಭಿನ್ನ ಅಭಿಪ್ರಾಯಗಳು ಕೇಳಿಬಂದ ಕುರಿತ ಪ್ರಶ್ನೆಗೆ, ‘ಸ್ಪೈಸರ್–2000' ತನ್ನ ಗುರಿಯನ್ನು ನಿಖರವಾಗಿ ತಲುಪಿದೆ ಎಂಬುದಲ್ಲಿ ನನಗೆ ಯಾವುದೇ ಸಂದೇಹವಿಲ್ಲ’ ಎಂದು ಮಿರಾಜ್ ಯುದ್ಧ ವಿಮಾನದ ಎರಡನೇ ಪೈಲಟ್ ಹೇಳಿದ್ದಾರೆ.
ದಾಳಿಯ ಬಳಿಕವೂ ಜೈಷ್ ಸಂಘಟನೆಯ ಶಿಬಿರಗಳು ಹಾಗೆಯೇ ಇದೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿತ್ತು.ಹಲವು ಅಂತರರಾಷ್ಟ್ರೀಯ ಸುದ್ದಿ ತಾಣಗಳುಲ್ಲಿ ಸ್ಯಾಟಲೈಟ್ ಚಿತ್ರಗಳನ್ನೂ ಪ್ರಕಟ ಮಾಡಿದ್ದವು.
‘ಉಪಗ್ರಹ ಚಿತ್ರಗಳಲ್ಲಿ ನಿಖರ ಗುರಿಯಲ್ಲಿ ಬಾಂಬ್‌ಗಳು ಬಿದ್ದ ಪ್ರದೇಶದ ಕೇಂದ್ರ ಬಿಂದುವನ್ನು ಎಲ್ಲಿಯೂ ಸಮೀಪದಿಂದ ತೋರಿಸಿಲ್ಲ’ ಎನ್ನುವ ಪೈಲಟ್, ‘ಸ್ಪೈಸರ್–2000' ಗುರಿ ತಪ್ಪುವ ಆಯುಧವಲ್ಲ. ಕಟ್ಟಡಗಳ ಚಾವಣಿ ಮೇಲೆ ಉಂಟಾದ ಹಾನಿಯನ್ನು ಮರೆಮಾಚುವ ಪ್ರಯತ್ನಗಳು ನಡೆದಿರಬಹುದು’ ಎನ್ನುತ್ತಾರೆ.
ಸ್ಪೈಸರ್ ಬಾಂಬ್ ಹಾಕಿದ ಸ್ಥಳಕ್ಕೆ ಸುಮಾರು ಎಂಟು ಕಿ.ಮೀ. ದೂರ ನಿಯಂತ್ರಣ ರೇಖೆಯಿಂದ ಹಾರಾಟ ನಡೆಸಿದ್ದೇವೆ ಎಂದು ಪೈಲಟ್ ಒಬ್ಬರು ಹೇಳಿದ್ದಾರೆ. ದಾಳಿ ಬಳಿಕ ಹಿಂದಿರುಗಿದಾಗ ಏನು ಮಾಡಿದಿರಿ ಎಂದು ಕೇಳಿದ ಪ್ರಶ್ನೆಗೆ, ಇಬ್ಬರು ಪೈಲಟ್‌ಗಳು ಪರಸ್ಪರ ಮುಖ ನೋಡಿಕೊಂಡು ನಕ್ಕರು. ಅವರಲ್ಲಿ ಒಬ್ಬರು ‘ನಮ್ಮಲ್ಲಿ ಇನ್ನೂ ಐದಕ್ಕಿಂತ ಹೆಚ್ಚು ಸಿಗರೇಟ್‌ಗಳು ಇದ್ದವು’ ಎಂದು ಹೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.