ಗುವಾಹಟಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೊ ನ್ಯಾಯ ಯಾತ್ರೆಯನ್ನು ಗುವಾಹಟಿ ನಗರ ಪ್ರವೇಶಿಸಿದಂತೆ ತಡೆಹಿಡಿಯಲಾಯಿತು. ಇದರಿಂದ ಆಕ್ರೋಶಗೊಂಡ ಪಕ್ಷದ ಕಾರ್ಯಕರ್ತರು ಬ್ಯಾರಿಕೇಡ್‌ಗಳನ್ನು ಭೇದಿಸಿ, ಘೋಷಣೆಗಳನ್ನು ಕೂಗಿದರು.
ಘಟನೆಯ ನಂತರ ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ‘ನಾವು ಬ್ಯಾರಿಕೇಡ್‌ಗಳನ್ನು ಭೇದಿಸಿದ್ದೇವೆ ಹೊರತು ಕಾನೂನನ್ನು ಉಲ್ಲಂಘಿಸಿಲ್ಲ’ ಎಂದು ಹೇಳಿದರು.
ಭಾರತ ಜೋಡೊ ನ್ಯಾಯ ಯಾತ್ರೆಯು ನಗರವನ್ನು ಪ್ರವೇಶಿಸಿದಂತೆ ಪೊಲೀಸರು ಎರಡು ಸ್ಥಳಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು. ಅಲ್ಲದೆ, ಕಾಂಗ್ರೆಸ್ ಬೆಂಬಲಿಗರನ್ನು ನಿಯಂತ್ರಿಸಲು ಪೊಲೀಸರು ಬಲ ಪ್ರಯೋಗ ನಡೆಸಿದರು.
ಕಾಂಗ್ರೆಸ್ ಕಾರ್ಯಕರ್ತರು ಯಾರಿಗೂ ಹೆದರುವುದಿಲ್ಲ. ಅಸ್ಸಾಂನಲ್ಲಿ ಬಿಜೆಪಿಯನ್ನು ಸೋಲಿಸಿ ಶೀಘ್ರದಲ್ಲೇ ಕಾಂಗ್ರೆಸ್ ಸರ್ಕಾರ ರಚಿಸುತ್ತದೆ ಎಂದು ರಾಹುಲ್ ಗಾಂಧಿ ಹೇಳಿದರು. ಪೊಲೀಸರು ತಮ್ಮ ಕೆಲಸವನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.
ಟ್ರಾಫಿಕ್ ಜಾಮ್ ತಪ್ಪಿಸಲು ಯಾತ್ರೆಗೆ ನಗರ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಈ ಹಿಂದೆ ಹೇಳಿದ್ದರು.
‘ಬ್ಯಾರಿಕೇಡ್‌ಗಳನ್ನು ಮುರಿದಿದ್ದರಿಂದ ನಾವು ಗೆದ್ದಿದ್ದೇವೆ’ ಎಂದು ಅಸ್ಸಾಂನ ಎಐಸಿಸಿ ಉಸ್ತುವಾರಿ ಜಿತೇಂದ್ರ ಸಿಂಗ್ ಹೇಳಿದ್ದಾರೆ.
ನಂತರ ರಾಹುಲ್ ಗಾಂಧಿಯವರು ರಿಂಗ್ ರಸ್ತೆಯಲ್ಲಿ ನಿಗದಿತ ಮಾರ್ಗದ ಮೂಲಕ ಯಾತ್ರೆ ಮುಂದುವರಿಸಿದರು. ಸೋಮವಾರ ಮೇಘಾಲಯವನ್ನು ಪ್ರವೇಶಿಸಿದ್ದ ಯಾತ್ರೆಯು ಗುವಾಹಟಿಯ ಮೂಲಕ ಅಸ್ಸಾಂಗೆ ಮತ್ತೆ ಪ್ರವೇಶಿಸಿತ್ತು. ಗುರುವಾರದವರೆಗೆ ಯಾತ್ರೆ ಅಸ್ಸಾಂನಲ್ಲಿ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.