ನವದೆಹಲಿ: ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಸಮಾರಂಭಕ್ಕೆಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಆಹ್ವಾನಿಸಲಾಗುವುದು ಎಂದು ಶಿವಸೇನಾ ಹೇಳಿದೆ.
ಎರಡೂ ಪಕ್ಷಗಳು ಮತ್ತು ಮಹಾರಾಷ್ಟ್ರ ರಾಜಕಾರಣದ ಸದ್ಯದ ಪರಿಸ್ಥಿತಿ ಹಿನ್ನೆಲೆಯಲ್ಲಿ ಶಿವಸೇನಾ ನಾಯಕ ಸಂಜಯ್ ರಾವುತ್ ಅವರ ಈ ಹೇಳಿಕೆಗೆ ಹಲವು ಅರ್ಥಗಳನ್ನು ಹಚ್ಚಲಾಗುತ್ತಿದೆ.
ದಶಕಗಳ ಕಾಲ ಬಿಜೆಪಿಯ ಮಿತ್ರಪಕ್ಷವಾಗಿದ್ದ ಶಿವಸೇನಾ ಇದೀಗ ಅದರಿಂದ ದೂರವಾಗಿವೆ. ಉದ್ಧವ್‌ಗೆ ಅಧಿಕಾರ ಸಿಗಬಾರದು ಎಂದೇ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬಯಸಿದ್ದರು ಎಂಬ ಮಾತುಗಳೂ ಇದೀಗಕೇಳಿ ಬರುತ್ತಿವೆ.ಈ ಹಿನ್ನೆಲೆಯಲ್ಲಿಯೇ ಉದ್ಧವ್ ಠಾಕ್ರೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಈ ಇಬ್ಬರೂ ನಾಯಕರು ಬರುವರೇ ಎಂಬ ಪ್ರಶ್ನೆಯೂ ಮಹತ್ವ ಪಡೆದುಕೊಂಡಿದೆ.
ಮುಂಬೈನ ಪ್ರತಿಷ್ಠಿತ ಶಿವಾಜಿ ಪಾರ್ಕ್‌ನಲ್ಲಿ ಉದ್ಧವ್ ಠಾಕ್ರೆ ಡಿಸೆಂಬರ್ 1ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಮಾಧ್ಯಮಗೋಷ್ಠಿಯಲ್ಲಿ ಘೋಷಿಸಿದ್ದರು. ನಂತರ ನ.28ರಂದೇ ಉದ್ಧವ್ ಪ್ರಮಾಣ ವಚನ ಸ್ವೀಕಾರ ಎಂದು ಬದಲಿ ದಿನಾಂಕಪ್ರಕಟಿಸಲಾಯಿತು.
ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆಗೆ ಶಿವಸೇನಾ ಪರವಾಗಿ ಮಾತುಕತೆ ನಡೆಸಿದ್ದ ಶಿವಸೇನಾ ನಾಯಕ ಸಂಜಯ್ ರಾವುತ್ ಅವರನ್ನು ಮಾಧ್ಯಮ ಪ್ರತಿನಿಧಿಗಳು ‘ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮೋದಿ ಅವರಿಗೆ ಆಹ್ವಾನ ನೀಡುವುದಿಲ್ಲವೇ’ ಎಂದು ಪ್ರಶ್ನಿಸಿದರು.
‘ಅಮಿತ್ ಶಾ ಸೇರಿದಂತೆ ಎಲ್ಲರನ್ನೂ ನಾವು ಆಹ್ವಾನಿಸುತ್ತೇವೆ’ ಎಂದು ರಾವುತ್ ಮಾರ್ನುಡಿದರು.
ಬಿಜೆಪಿಯೊಂದಿಗೆವಿಧಾನಸಭಾ ಚುನಾವಣೆಗೆ ಮೊದಲೇ ಮೈತ್ರಿ ಮಾಡಿಕೊಂಡಿದ್ದ ಶಿವಸೇನಾ ಸ್ಥಾನ ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ನಂತರ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಎರಡೂ ಪಕ್ಷಗಳು ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದ ಪರಿಣಾಮ ಮೈತ್ರಿ ಮುರಿದುಬಿತ್ತು. ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಶಿವಸೇನಾ ಇನ್ನೇನು ಅಧಿಕಾರ ಹಿಡಿಯಿತು ಎನ್ನುವಷ್ಟರಲ್ಲಿ ಎನ್‌ಸಿಪಿಯ ಅಜಿತ್ ಪವಾರ್ ಸಹಕಾರದೊಂದಿಗೆ ಬಿಜೆಪಿಯ ದೇವೇಂದ್ರ ಫಡಣವೀಸ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇದಾದ ನಂತರ ಬಿಜೆಪಿ ಮತ್ತು ಶಿವಸೇನಾ ಸಂಬಂಧ ಪೂರ್ಣ ಹಳಸಿತ್ತು.
ದೇವೇಂದ್ರ ಫಡಣವೀಸ್ ಶೀಘ್ರವಿಶ್ವಾಸಮತ ಯಾಚನೆಗೆ ಆದೇಶ ನೀಡಬೇಕೆಂದು ಕೋರಿ ಪ್ರತಿಪಕ್ಷಗಳುಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು. ಈ ಸಂಬಂಧ ಮಂಗಳವಾರ (ನ.26) ಆದೇಶ ನೀಡಿದ ಸುಪ್ರೀಂ ಕೋರ್ಟ್‌ಬುಧವಾರವೇ (ನ.27) ವಿಶ್ವಾಸಮತ ಯಾಚಿಸಬೇಕು ಎಂದು ಸೂಚಿಸಿದ ಹಿನ್ನೆಲೆಯಲ್ಲಿ ಮಂಗಳವಾರದೇವೇಂದ್ರ ಫಡಣವೀಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗುವುದು ಮತ್ತೊಮ್ಮೆ ಖಚಿತವಾದಂತೆ ಆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.