ADVERTISEMENT

ಬಲಪಂಥೀಯ ಭಯೋತ್ಪಾದಕರಿಂದಾಗಿ ಮಹಾತ್ಮ ಗಾಂಧಿಯನ್ನು ಕಳೆದುಕೊಂಡೆವು: ಕಾಂಗ್ರೆಸ್

ಪಿಟಿಐ
Published 15 ಜುಲೈ 2024, 6:37 IST
Last Updated 15 ಜುಲೈ 2024, 6:37 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧದ ಹಿಂಸಾಚಾರಕ್ಕೆ ರಾಹುಲ್‌ ಗಾಂಧಿ ಪ್ರಚೋದನೆ ನೀಡುತ್ತಿದ್ದಾರೆ ಎಂದು ಬಿಜೆಪಿ ಮಾಡಿದ್ದ ಆರೋಪಕ್ಕೆ ಕಾಂಗ್ರೆಸ್‌ ಸೋಮವಾರ ತಿರುಗೇಟು ನೀಡಿದೆ. ಬಲಪಂಥೀಯ ಭಯೋತ್ಪಾದಕರಿಂದ ಮಹಾತ್ಮ ಗಾಂಧಿ ಅವರನ್ನು ಕಳೆದುಕೊಂಡಿದ್ದೇವೆ ಎಂದು ಆರೋಪಿಸಿದೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಹತ್ಯೆ ಮಾಡಲು ಪೆನ್ಸಿಲ್ವೇನಿಯಾದಲ್ಲಿ ಶನಿವಾರ ಪ್ರಯತ್ನ ನಡೆದಿತ್ತು. ಆ ಪ್ರಕರಣವನ್ನು ಉಲ್ಲೇಖಿಸಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಭಾನುವಾರ ಆರೋಪ ಮಾಡಿತ್ತು.

'ಮೂರನೇ ಬಾರಿ ಚುನಾವಣೆಯಲ್ಲಿ (ಅಧಿಕಾರಕ್ಕೇರಲು) ವಿಫಲವಾಗಿರುವ ರಾಹುಲ್‌ ಗಾಂಧಿ, ಪ್ರಧಾನಿ ಮೋದಿ ಅವರ ವಿರುದ್ಧದ ಹಿಂಸಾಚಾರಕ್ಕೆ ಹಲವು ಸಲ ಪ್ರೋತ್ಸಾಹ ಮತ್ತು ಸಮರ್ಥನೆ ನೀಡಿದ್ದಾರೆ. ಪಂಜಾಬ್‌ನಲ್ಲಿ ಮೋದಿ ಅವರು ಫ್ಲೈಓವರ್‌ ಮೇಲೆ ಸಿಲುಕಿದ್ದಾಗ, ಆಗಿನ ಕಾಂಗ್ರೆಸ್ ಸರ್ಕಾರದ ಆಳ್ವಿಕೆಯಲ್ಲಿ ಪೊಲೀಸರು ಪ್ರಧಾನಿಯವರ ಭದ್ರತೆಯ ವಿಚಾರದಲ್ಲಿ ರಾಜಿ ಮಾಡಿಕೊಂಡಿದ್ದನ್ನು ದೇಶದ ಜನರು ಮರೆಯಲು ಸಾಧ್ಯವೇ?' ಎಂದು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವೀಯ ಆರೋಪಿಸಿದ್ದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌, ನಾಯಕರ ಭದ್ರತಾ ವಿಚಾರದಲ್ಲಿ ಇಂತಹ 'ಕೀಳುಮಟ್ಟದ ರಾಜಕೀಯ' ಮಾಡಬಾರದು ಎಂದು ಚಾಟಿ ಬೀಸಿದೆ.

ಕಾಂಗ್ರೆಸ್‌ ಮಾಧ್ಯಮ ಮತ್ತು ಪ್ರಸಾರ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಅವರು, 'ನಾಯಕರ ಭದ್ರತೆಯ ವಿಷಯದಲ್ಲಿ ಈ ರೀತಿಯ 'ಕೀಳು ರಾಜಕೀಯ' ಮಾಡಬಾರದು. ಕಾಂಗ್ರೆಸ್‌ ಪಕ್ಷ ಬಲಪಂಥೀಯ ಭಯೋತ್ಪಾದಕರಿಂದ ಮಹಾತ್ಮಾ ಗಾಂಧಿ ಅವರನ್ನು ಕಳೆದುಕೊಂಡಿತು. ಉಗ್ರರಿಂದ ನಮ್ಮ ಇಬ್ಬರು ಪ್ರಧಾನಿಗಳನ್ನು ಕಳೆದುಕೊಂಡೆವು. ಛತ್ತೀಸಗಢದಲ್ಲಿ ನಮ್ಮ ಸಂಪೂರ್ಣ ನಾಯಕತ್ವವನ್ನು ಬಿಜೆಪಿ ಸರ್ಕಾರದ ಕಣ್ಗಾವಲಿನಲ್ಲೇ ಎಡಪಂಥೀಯ ಭಯೋತ್ಪಾದಕರಿಂದ ಕಳೆದುಕೊಂಡಿದ್ದೇವೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಜವಾಹರಲಾಲ್‌ ನೆಹರೂ, ಇಂದಿರಾ ಗಾಂಧಿ ಮತ್ತು ಅವರ ಇಡೀ ಕುಟುಂಬದ ವಿರುದ್ಧ ಹಿಂಸಾತ್ಮಕ ಸುಳ್ಳುಗಳನ್ನು ಹರಡುತ್ತಿರುವ ಪ್ರಧಾನಿ ಮೋದಿ ಹಾಗೂ ಬಿಜೆಪಿಯವರು, ಜನರನ್ನು ಕಾಂಗ್ರೆಸ್‌ ನಾಯಕತ್ವದ ವಿರುದ್ಧ ಪ್ರೇರೇಪಿಸುತ್ತಿದ್ದಾರೆ' ಎಂದು ದೂರಿದ್ದಾರೆ.

'ಅವರಿಗೆ (ಗಾಂಧಿ ಕುಟುಂಬದವರಿಗೆ) ಇದ್ದ ವಿಶೇಷ ರಕ್ಷಣಾ ದಳ (ಎಸ್‌ಪಿಜಿ) ಭದ್ರತಾ ವ್ಯವಸ್ಥೆಯನ್ನು ಮೋದಿ ಹಿಂಪಡೆದಿದ್ದಾರೆ' ಎಂದೂ ಖೇರಾ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.