ಜೈಪುರ: ‘ದೇಶಕ್ಕೆ ಅತ್ಯುತ್ತಮ ವಿರೋಧ ಪಕ್ಷದ ಅಗತ್ಯವಿದೆ. ಆಗ ಮಾತ್ರ ಸರ್ಕಾರ ಸಮರ್ಪಕವಾಗಿ ಆಡಳಿತ ನಡೆಸುತ್ತದೆ’ ಎಂದು ನೊಬೆಲ್ ಪುರಸ್ಕೃತ, ಆರ್ಥಿಕ ತಜ್ಞ ಅಭಿಜಿತ್ ಬ್ಯಾನರ್ಜಿ ಪ್ರತಿಪಾದಿಸಿದರು.
ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರ ಭಾಗವಹಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ’ಬಲಿಷ್ಠವಾದ ವಿರೋಧ ಪಕ್ಷ ಪ್ರಜಾಪ್ರಭುತ್ವದ ಹೃದಯವಾಗಿರುತ್ತದೆ. ಆಡಳಿತಾರೂಢ ಪಕ್ಷ ಸಹ ಅದನ್ನು ಒಪ್ಪಿಕೊಳ್ಳಬೇಕು’ ಎಂದು ಹೇಳಿದರು.
ಭಾರತದಲ್ಲೇ ನೆಲೆಸಿದ್ದರೆ ನೊಬೆಲ್ ಪ್ರಶಸ್ತಿ ಪಡೆಯುತ್ತಿದ್ದೀರಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು. ’ನನಗೆ ಹಾಗೆ ಅನಿಸುವುದಿಲ್ಲ. ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಆದರೆ, ಪ್ರತಿಭೆಗಳನ್ನು ಗುರುತಿಸುವ ವ್ಯವಸ್ಥೆಯ ಕೊರತೆ ಇದೆ’ ಎಂದು ಅಭಿಪ್ರಾಯಪಟ್ಟರು.
‘ಭಾರತದಲ್ಲಿ ಕೆಲವರು ಶೈಕ್ಷಣಿಕವಾಗಿ ಹಿಂದುಳಿದ್ದಾರೆ. ಕೆಲವರಿಗೆ ಆರೋಗ್ಯ ಸಮಸ್ಯೆ ಇದೆ. ಕೆಲವರಿಗೆ ಬಡತನ
ಇದೆ. ಇಂತಹ ಕೊರತೆಗಳನ್ನು ನೀಗಿಸುವ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ. ಕಡುಬಡತನದಲ್ಲಿರುವವರಿಗೆ ಉಚಿತವಾಗಿ ಕೆಲವು ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದು ಸಲಹೆ ನೀಡಿದ್ದಾರೆ.
‘ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆಯನ್ನು ನಾನು ಸ್ವೀಕರಿಸುವುದಿಲ್ಲ. ಆ ಹುದ್ದೆ ಅಲಂಕರಿಸಲು ಇನ್ನೂ ಉತ್ತಮ ಆರ್ಥಿಕ ತಜ್ಞರ ಅಗತ್ಯವಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.