ನವದೆಹಲಿ: ‘ಪ್ರತಿಯೊಬ್ಬರ ಕೌಶಲಕ್ಕೂ ಪ್ರತಿಫಲ ಸಿಗುವಂತಹ ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಕೊಡುಗೆಯನ್ನು ಗೌರವಿಸುವಂತಹ ವ್ಯವಸ್ಥೆಯೊಂದನ್ನು ರೂಪಿಸುವ ಅಗತ್ಯ ಇದೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
ದೀಪಾವಳಿ ಪ್ರಯುಕ್ತ, ಬಣ್ಣ ಬಳಿಯುವವರು ಹಾಗೂ ಕುಂಬಾರರ ಜೊತೆ ನಡೆಸಿದ ಮಾತುಕತೆ ವೇಳೆ ಅವರು ಈ ಮಾತು ಹೇಳಿದ್ದಾರೆ. ಈ ವೇಳೆ, ಸೋದರಳಿಯ ರೇಹಾನ್ ರಾಜೀವ್ ವಾದ್ರಾ ಅವರೊಂದಿಗೆ ನಡೆಸಿದ ಸಂವಾದದ ಒಂಬತ್ತು ನಿಮಿಷಗಳ ವಿಡಿಯೊವನ್ನು ಅವರು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿದ್ದಾರೆ.
‘ವಿಶೇಷ ಕೌಶಲ ಇರುವ ಜನರೊಂದಿಗೆ ಸ್ಮರಣೀಯ ದೀಪಾವಳಿ ಆಚರಿಸಿದ್ದೇನೆ. ಬಣ್ಣ ಹಚ್ಚುವ ಕೆಲಸ ಮಾಡುವ ಸಹೋದರರ ಜೊತೆ ಹಾಗೂ ಕುಂಬಾರಿಕೆ ಕುಟುಂಬದ ಸದಸ್ಯರೊಂದಿಗೆ ಮಣ್ಣಿನ ಹಣತೆ ತಯಾರಿಸುವ ಮೂಲಕ ನಾನು ದೀಪಾವಳಿ ಆಚರಿಸಿದೆ’ ಎಂದು ಅವರು ವಿವರಿಸಿದ್ದಾರೆ.
‘ಈ ಜನರು ಮಾಡುವ ಕೆಲಸವನ್ನು ಬಹಳ ಹತ್ತಿರದಿಂದ ನೋಡಿದೆ. ಅವರ ಕೌಶಲ ಹಾಗೂ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಿದೆ’ ಎಂದಿದ್ದಾರೆ.
‘ನಾವು ಹಬ್ಬಗಳನ್ನು ಬಹಳ ಸಂಭ್ರಮದಿಂದ ಆಚರಿಸುತ್ತೇವೆ. ಆದರೆ, ಈ ಜನರ ಮನೆಗೆ ಹೋಗುವುದಿಲ್ಲ. ಸ್ವಲ್ಪ ಹಣ ಗಳಿಸುವುದಕ್ಕಾಗಿ ಈ ಜನರು ತಮ್ಮ ಹಳ್ಳಿ, ಪಟ್ಟಣ ಹಾಗೂ ಕುಟುಂಬಗಳನ್ನು ಮರೆತು ದುಡಿಯುತ್ತಾರೆ’ ಎಂದು ಸಂವಾದದಲ್ಲಿ ಹೇಳಿದ್ದಾರೆ.
‘ಅವರು ಹಣತೆಗಳನ್ನು ತಯಾರಿಸಲು ಬಳಸುವ ಮಣ್ಣಿನೊಂದಿಗೆ ಕೆಲಸ ಮಾಡುವ ಮೂಲಕ ಸಂತೋಷ ಕಾಣುತ್ತಾರೆ. ಬೇರೆಯವರ ಹಬ್ಬಗಳಲ್ಲಿ ಬೆಳಕು ಹೊಮ್ಮುವಂತೆ ಮಾಡುವ ಅವರು, ತಮ್ಮ ಬದುಕನ್ನು ಬೆಳಗುವಂತೆ ಮಾಡಿಕೊಳ್ಳಲು ಸಮರ್ಥರಾಗಿದ್ದಾರೆಯೇ? ಇತರರ ಮನೆಗಳನ್ನು ನಿರ್ಮಾಣ ಮಾಡುವವರ ಪೈಕಿ ಅನೇಕರು ತಮ್ಮ ಮನೆಗಳ ನಿರ್ವಹಣೆಗೆ ಹೆಣಗಾಡುತ್ತಾರೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.