ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರು ತಮ್ಮ ಸರ್ಕಾರವು ಆರಂಭಿಸಿರುವ ಕೆಲಸಗಳನ್ನು ಪಟ್ಟಿ ಮಾಡಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ್ದಾರೆ. ಪ್ರಮುಖವಾಗಿ ಟೀ ತೋಟಗಳಲ್ಲಿನ ಕಾರ್ಮಿಕರ ಮಕ್ಕಳಿಗಾಗಿ ಅಸ್ಸಾಂ ಸರ್ಕಾರ ಹಮ್ಮಿಕೊಂಡಿರುವ ಶಿಕ್ಷಣ ಯೋಜನೆಯನ್ನು ಎತ್ತಿ ತೋರಿಸಿದ್ದಾರೆ.
ವಿಡಿಯೊ ತುಣುಕೊಂದನ್ನು ಹಂಚಿಕೊಂಡಿರುವ ಹಿಮಂತ ಶರ್ಮ ಅವರು, 'ನಾವು ಸದ್ದಿಲ್ಲದೆ ಕೆಲಸ ಮಾಡಲು ಬಯಸುತ್ತೇವೆ' ಎಂದು ಕೇಜ್ರಿವಾಲ್ ಅವರಿಗೆ ಟಾಂಗ್ ನೀಡಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ನಾವು ಟೀ ತೋಟದ ಕಾರ್ಮಿಕರ ಮಕ್ಕಳಿಗಾಗಿ 100 ಪ್ರೌಢಶಾಲೆಗಳನ್ನು ಸ್ಥಾಪಿಸಿದ್ದೇವೆ. ಅಸ್ಸಾಂನ ಬಹುದೂರದ ಸ್ಥಳಗಳಲ್ಲಿ ಟೀ ತೋಟಗಳು ಇವೆ ಎಂದು ಹಿಮಂತ ಹೇಳಿದ್ದಾರೆ.
ಅಸ್ಸಾಂನಲ್ಲಿ 44,521 ಸರ್ಕಾರಿ ಶಾಲೆಗಳು ಇವೆ. 65 ಲಕ್ಷ ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಒಟ್ಟು 1.18 ಲಕ್ಷ ಬಿಸಿಯೂಟ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ ಎಂದು ವಿಡಿಯೊದಲ್ಲಿ ಹೇಳಲಾಗಿದೆ.
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಟೀ ತೋಟದ ಕಾರ್ಮಿಕರ ಮಕ್ಕಳಿಗಾಗಿ 100 ಪ್ರೌಢಶಾಲೆಗಳನ್ನು ಆರಂಭಿಸಲಾಗಿದೆ. ಇನ್ನೂ 100 ಶಾಲೆಗಳು ಮತ್ತು 10 ಕಾಲೇಜುಗಳನ್ನು ತೆರೆಯಲು ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿಯೂ ವಿಡಿಯೊದಲ್ಲಿದೆ.
ನಾವು ಗುಣಮಟ್ಟಕ್ಕೆ ಮತ್ತು ಸದ್ದಿಲ್ಲದೆ ಕೆಲಸ ಮಾಡುವುದಕ್ಕೆ ಒತ್ತು ಕೊಡುತ್ತೇವೆ ಎಂಬ ಕೊನೆಯ ಸಾಲನ್ನು ವಿಡಿಯೊದಲ್ಲಿ ಸೇರಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಅಭಿವೃದ್ಧಿ ವಿಚಾರವಾಗಿ ಪರಸ್ಪರ ಮಾತಿಗೆ ಮಾತು ಬೆಳೆಸುತ್ತಿದ್ದು, ತಮ್ಮ ರಾಜ್ಯಗಳಲ್ಲಾಗಿರುವ ಅಭಿವೃದ್ಧಿ ಕೆಲಸಗಳನ್ನು ಬಂದು ನೋಡುವಂತೆ ಪರಸ್ಪರ ಪಂಥಾಹ್ವಾನಗಳನ್ನು ಕೊಟ್ಟುಕೊಳ್ಳುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.