ADVERTISEMENT

ಸುಶಾಂತ್‌ ಸಾವು ಪ್ರಕರಣ: ಮಗನನ್ನು ಸಮರ್ಥಿಸಿಕೊಂಡ ಉದ್ಧವ್ ಠಾಕ್ರೆ

ಏಜೆನ್ಸೀಸ್
Published 26 ಅಕ್ಟೋಬರ್ 2020, 3:09 IST
Last Updated 26 ಅಕ್ಟೋಬರ್ 2020, 3:09 IST
ಉದ್ಧವ್ ಠಾಕ್ರೆ - ಆದಿತ್ಯ ಠಾಕ್ರೆ
ಉದ್ಧವ್ ಠಾಕ್ರೆ - ಆದಿತ್ಯ ಠಾಕ್ರೆ   

ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾನುವಾರ ಮಾತನಾಡಿದ್ದು, ಅಪಪ್ರಚಾರಕ್ಕೆ ಗುರಿಯಾಗಿದ್ದ ಮುಂಬೈ, ಅದರ ಪೊಲೀಸರು ಮತ್ತು ಅವರ ಮಗ ಸೇರಿದಂತೆ ಎಲ್ಲರನ್ನೂ'ಮಹಾರಾಷ್ಟ್ರದ ಪುತ್ರರು' ಎಂದು ಸಮರ್ಥಿಸಿಕೊಂಡಿದ್ದಾರೆ.

'ಆತ್ಮಹತ್ಯೆ ಮಾಡಿಕೊಂಡವರು ಈಗ ಬಿಹಾರದ ಪುತ್ರ. ಅವರ ಕಾರಣಕ್ಕಾಗಿ ನೀವು ಮಹಾರಾಷ್ಟ್ರದ ಪುತ್ರರನ್ನು ಕೆಟ್ಟದಾಗಿ ನಿಂದಿಸಿದಿರಿ. ನೀವು ನನ್ನ ಮಗ ಆದಿತ್ಯನನ್ನು ಸಹ ನಿಂದಿಸಿದ್ದೀರಿ. ಆದ್ದರಿಂದ ನೀವು ಏನನ್ನು ಹೇಳಿದರೂ ಅದನ್ನು ನೀವೇ ಇಟ್ಟುಕೊಳ್ಳಿ. ನಾವು ಸ್ವಚ್ಛವಾಗಿದ್ದೇವೆ' ಎಂದು ಶಿವಸೇನಾದ ವಾರ್ಷಿಕ ದಸರಾ ಸಮಾವೇಶದಲ್ಲಿ ಅವರು ಹೇಳಿದರು.

ನಟನ ಗೆಳತಿ ರಿಯಾ ಚಕ್ರವರ್ತಿ ಮತ್ತು ಅವರ ಪುತ್ರ ಆದಿತ್ಯ ಠಾಕ್ರೆ ಅವರನ್ನು ಗುರಿಯಾಗಿಸಿಕೊಂಡು ಸುಶಾಂತ್ ಸಿಂಗ್ ರಜಪೂತ್ ಸಾವಿನ ಸುತ್ತಲಿನ ಪಿತೂರಿಗಳ ಬಗ್ಗೆ ಇದೇ ಮೊದಲು ಮುಖ್ಯಮಂತ್ರಿ ಠಾಕ್ರೆ ಮಾತನಾಡಿದ್ದಾರೆ.

ADVERTISEMENT

ಕಂಗನಾ ರನೌತ್ ಅವರ ಹೆಸರೇಳದೆಯೇ, 'ನ್ಯಾಯಕ್ಕಾಗಿ ಅಳುವವರು' ಮುಂಬೈ ಪೊಲೀಸರು ನಿಷ್ಪ್ರಯೋಜಕರು ಎಂದು ಆರೋಪಿಸಿದರು. 'ಮುಂಬೈ ಪಿಒಕೆಯಂತೆ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ), ಮುಂಬೈನೆಲ್ಲೆಡೆ ಮಾದಕ ವ್ಯಸನಿಗಳಿದ್ದಾರೆ ಎಂದೆಲ್ಲ ಚಿತ್ರಿಸಿದ್ದರು ಎಂದು ಕಿಡಿಕಾರಿದ್ದಾರೆ.

'ನಮ್ಮ ಮನೆಯಲ್ಲಿ ನಾವು ತುಳಸಿ ಬೆಳೆಸಿದ್ದೇವೆ ಗಾಂಜಾ ಅಲ್ಲ ಎನ್ನುವುದು ಅವರಿಗೆ ಗೊತ್ತಿಲ್ಲ. ಗಾಂಜಾ ಬೆಳೆಯುವ ಕ್ಷೇತ್ರಗಳು ನಿಮ್ಮ ರಾಜ್ಯದಲ್ಲಿವೆ, ನಮ್ಮ ಮಹಾರಾಷ್ಟ್ರದಲ್ಲಿ ಅಲ್ಲ' ಎಂದು ನರೇಂದ್ರ ಮೋದಿ ಮತ್ತು ಬಿಜೆಪಿ ಬೆಂಬಲಿಗರಾಗಿ ರಾಜ್ಯಸರ್ಕಾರದ ಮೇಲೆ ನಿರಂತರ ವಾಗ್ದಾಳಿ ನಡೆಸಿದ್ದ ಹಿಮಾಚಲ ಪ್ರದೇಶದಿಂದ ಬಂದಿರುವ ಕಂಗನಾ ರನೌತ್ ವಿರುದ್ಧ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ನನ್ನ ಮುಂಬೈ ಪೊಲೀಸರ ಬಗ್ಗೆ ನನಗೆ ಹೆಮ್ಮೆ ಇದೆ. ಭಯೋತ್ಪಾದಕನನ್ನು ಜೀವಂತವಾಗಿ ಹಿಡಿದ ಏಕೈಕ ಪೊಲೀಸರು. ಇಂತಹ ಪೊಲೀಸರ ಬಗ್ಗೆ ನಾನು ಹೆಮ್ಮೆಪಡುತ್ತೇನೆ' ಎಂದು 26/11ರ ಭಯೋತ್ಪಾದಕ ದಾಳಿಯ ಅಜ್ಮಲ್ ಕಸಬ್‌ನನ್ನು ಸೆರೆಹಿಡಿದು ಮತ್ತು ವಿಚಾರಣೆ ಮಾಡಿದ್ದನ್ನು ಉಲ್ಲೇಖಿಸಿದ್ದಾರೆ.

'ಮುಂಬೈ ಪಾಕ್ ಆಕ್ರಮಿತ ಕಾಶ್ಮೀರದಂತಾಗಿದೆ ಎಂದು ಅವರು ಹೇಳುತ್ತಾರೆ. ಹಾಗಾಗಿ ಇದು ಪ್ರಧಾನಿ ಮೋದಿಯವರಿಗೂ ಅವಮಾನ ಮಾಡಿದಂತೆ. ಭಾರತಕ್ಕೆ ಮರಳಿ ಪಿಒಕೆ ತರುವುದಾಗಿ ಪ್ರಧಾನಿ ಹೇಳಿದ್ದಾರೆ. ಆದರೆ ಆರು ವರ್ಷ ಕಳೆದಿದ್ದರೂ ಇದು ಸಾಧ್ಯವಾಗಿಲ್ಲ. ಹಾಗಾಗಿ ಇದು ಕೂಡ ಅವರ ವೈಫಲ್ಯ. ಪ್ರಧಾನಿ ಮತ್ತು ಅವರ ಪಕ್ಷವು ಸ್ವಚ್ಛವಾಗಿ ಉಳಿದಿಲ್ಲ' ಎಂದು ಹೇಳಿದ್ದಾರೆ.

ಕಳೆದ ಜೂನ್‌ನಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರು ಮುಂಬೈನ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಶಾಂತ್ ಅವರ ಸಾವು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿ ಆತನ ಕುಟುಂಬ ಮತ್ತು ಸಂಬಂಧಿಗಳು ಪ್ರೇಯಸಿ ರಿಯಾ ಚಕ್ರವರ್ತಿ ಮತ್ತು ಇನ್ನಿತರರ ಮೇಲೆ ದೂರು ದಾಖಲಿಸಿದ್ದರು.

ಇದೇ ವಿಚಾರವಾಗಿ ಸಿಡಿದೆದ್ದಿದ್ದ ನಟಿ ಕಂಗನಾ ರನೌತ್ ಮುಂಬೈ ಪೋಲೀಸರು ತನಿಖೆಯನ್ನು ಸರಿಯಾಗಿ ನಡೆಸುತ್ತಿಲ್ಲ ಎಂದು ನಿರಂತರವಾಗಿ ಮಹಾರಾಷ್ಟ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಾ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಒತ್ತಾಯಿಸುತ್ತಲೇ ಬಂದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.