ನವದೆಹಲಿ: ಜನವರಿ 5ರಂದು ಜೆಎನ್‌ಯುವಿನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಶಂಕಿತರನ್ನು ಗುರುತಿಸಿದ ಪೊಲೀಸರನ್ನು ಬೆಂಬಲಿಸುವುದಾಗಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಹೇಳಿದ್ದು, ಹಿಂಸಾಚಾರವನ್ನು ತೀವ್ರವಾಗಿ ಖಂಡಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಬಿವಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಿಧಿ ತ್ರಿಪಾಠಿ, ಜನವರಿ 5ರಂದು ಜೆಎನ್‌ಯುವಿಲ್ಲಿ ನಡೆದ ಹಿಂಸಾಚಾರದ ಕುರಿತು ಸಂಪೂರ್ಣ ತನಿಖೆಯಾಗಬೇಕು ಮತ್ತು ಆರೋಪಿಗಳಿಗೆ ತಕ್ಕ ಶಾಸ್ತಿಯಾಗಬೇಕೆಂದು ನಾವು ಬಯಸುತ್ತೇವೆ. ದೆಹಲಿ ಪೊಲೀಸರು ಆರೋಪಿಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ ಮತ್ತು ಕೆಲವರು ತಾವೇ ಸಂತ್ರಸ್ತರು ಎಂದು ಆಟವಾಡುತ್ತಿದ್ದಾರೆ. ಹೀಗಾಗಿ ಹಿಂಸಾಚಾರದ ಹಿಂದಿನ ಅವರ ಹೆಸರು ಜನರಿಂದ ಮರೆಮಾಚಲ್ಪಟ್ಟಿದೆ. ದೇಶದ ಗಮನ ಬೇರೆಡೆ ಸೆಳೆಯಲು ಅವರು ಮತ್ತೆ ಕಥೆಗಳನ್ನು ಶುರುಮಾಡುತ್ತಾರೆ ಎಂದು ಹೇಳಿದರು.
ಹಿಂಸಾಚಾರದಲ್ಲಿ ಎಬಿವಿಪಿ ಸದಸ್ಯರು ಭಾಗಿಯಾಗಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಫೋಟೊಗಳು ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಅವುಗಳನ್ನು ಯಾವಾಗ ತೆಗೆಯಲಾಗಿದೆ ಮತ್ತು ಅದರ ಹಿಂದೆ ಯಾವ ಸಂದರ್ಭವಿದೆ ಎಂಬುದು ನಮಗೆ ತಿಳಿದಿಲ್ಲ. ವಾಟ್ಸಾಪ್ ಗ್ರೂಪಿನಲ್ಲಿ ಕೂಡ ಈ ಬಗ್ಗೆ ಮಾತನಾಡಲಾಗಿದೆ. ನಂತರ ಗ್ರೂಪಿನ ಅಡ್ಮಿನ್ ಲೆಫ್ಟ್ ಆಗಿದ್ದಾರೆ. ವಾಟ್ಸಾಪ್ ಗ್ರೂಪಿನಲ್ಲಿ ಮಾತನಾಡಿರುವ ಕುರಿತು ಕೂಡ ಪೊಲೀಸರು ತನಿಖೆ ಕೈಗೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ತಿಳಿಸಿದರು.
ಎಬಿವಿಪಿಯು ಪೊಲೀಸರು ಮತ್ತು ಮಾಧ್ಯಮಗಳಿಗೆ ತನ್ನ ಬೆಂಬಲವನ್ನು ಮುಂದುವರಿಸುತ್ತದೆ. ಆದಷ್ಟು ಬೇಗ ತನಿಖೆಯನ್ನು ಪೂರ್ಣಗೊಳಿಸಿ ಜೆಎನ್‌ಯು ಸಹಜ ಸ್ಥಿತಿಗೆ ಮರಳುವಂತೆ ಮಾಡಬೇಕು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಯಾವುದೇ ಸಾಕ್ಷ್ಯಗಳು ಲಭ್ಯವಾದರೆ ಅವುಗಳನ್ನು ಕೂಡ ಬಿಡುಗಡೆ ಮಾಡುವಂತೆ ಮನವಿ ಮಾಡುತ್ತೇನೆ ಎಂದರು.
ದೆಹಲಿ ಪೊಲೀಸರು ಸುದ್ದಿಗೋಷ್ಠಿ ನಡೆಸಿ, ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಆಯಿಷಿ ಘೋಷ್ ಸೇರಿದಂತೆ ಒಂಬತ್ತು ಜನರನ್ನು ಶಂಕಿತರೆಂದು ಗುರುತಿಸಿದ್ದರು. ಏಳು ಜನರು ಎಐಎಸ್‌ಎಸಂಘಟನೆಗೆ ಸೇರಿದ ಮತ್ತು ಇಬ್ಬರು ಎಬಿವಿಪಿ ಸಂಘಟನೆಗೆ ಸೇರಿದವರ ಫೋಟೊಗಳನ್ನು ಹಂಚಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.