ಪಟ್ನಾ: ಆಡಳಿತದಲ್ಲಿರುವ ಜೆಡಿಯು ಮತ್ತು ಬಿಜೆಪಿ ನಡುವಣ ಸಂಬಂಧ ಬಿಗಡಾಯಿಸಿರುವ ಬಗ್ಗೆ ವದಂತಿ ಹರಡಿರುವ ಬೆನ್ನಲ್ಲೇ, ನಾವು ಮೈತ್ರಿ ಧರ್ಮವನ್ನು ಪಾಲಿಸುತ್ತೇವೆ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಇಂದು ಜೆಡಿಯು ಶಾಸಕಾಂಗ ಸಭೆಯನ್ನು ಕರೆಯಲಾಗಿದೆ. ಎಲ್ಲ ಸಂಸದರು ಮತ್ತು ಶಾಸಕರು ಸಭೆಯಲ್ಲಿ ಹಾಜರಿರುವಂತೆ ವರಿಷ್ಠ ನಿತೀಶ್ ಕುಮಾರ್ ಸೂಚಿಸಿದ್ದಾರೆ.
ಮೈತ್ರಿ ಪಕ್ಷದೊಂದಿಗಿನ ಸಂಬಂಧದಲ್ಲಿ ಒಡಕು ಮೂಡಿರುವ ಬಗ್ಗೆ ಹೆಚ್ಚೇನು ಪ್ರತಿಕ್ರಿಯಿಸದ ನಿತೀಶ್ ಕುಮಾರ್, ಬಿಜೆಪಿ ಜೊತೆಗಿನ ಮೈತ್ರಿ ಧರ್ಮವನ್ನು ಪಾಲಿಸುತ್ತೇವೆ ಮತ್ತು ಹಾಗೆ ಮುಂದುವರಿಸಲು ಬಯಸುತ್ತೇವೆ ಎಂದಿದ್ದಾರೆ.
ನಿತೀಶ್ ಕುಮಾರ್ ಅವರ ಮುಂದಿನ ನಡೆ ಏನು ಎಂಬುದನ್ನು ಗ್ರಹಿಸಲು ಸಾಧ್ಯವಿಲ್ಲ. ನಾವು ಕಾದು ನೋಡುತ್ತೇವೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.
ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಹಾರಕ್ಕೆ ಭೇಟಿ ನೀಡಿದ್ದ ಸಂದರ್ಭ ಜೆಡಿಯು ಜೊತೆಗಿನ ಮೈತ್ರಿ ಮುಂದಿನ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ವರೆಗೂ ಮುಂದುವರಿಯಲಿದೆ ಎಂದು ಹೇಳಿದ್ದನ್ನು ಬಿಜೆಪಿ ನಾಯಕರು ಪುನರುಚ್ಛರಿಸಿದ್ದಾರೆ. ಎರಡು ಚುನಾವಣೆಗಳು ಕ್ರಮವಾಗಿ 2024 ಮತ್ತು 2025ರಲ್ಲಿ ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.