ADVERTISEMENT

ಬಿಜೆಪಿ ಸೋಲಿಸಲು ಒಗ್ಗೂಡುತ್ತೇವೆ: ರಾಹುಲ್‌

ಲೋಕಸಭೆ ಚುನಾವಣೆಗೆ ಮುನ್ನವೇ ಮೈತ್ರಿ: ಶರದ್‌ ಪವಾರ್‌ ಕರೆದಿದ್ದ ಸಭೆಯಲ್ಲಿ ಚಿಂತನೆ

ಪಿಟಿಐ
Published 13 ಫೆಬ್ರುವರಿ 2019, 20:26 IST
Last Updated 13 ಫೆಬ್ರುವರಿ 2019, 20:26 IST
   

ನವದೆಹಲಿ : ಲೋಕಸಭೆ ಚುನಾವಣೆಗೆ ಮುನ್ನವೇ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಪರಿಶೀಲಿಸುತ್ತಿರುವುದಾಗಿ ವಿರೋಧ ಪಕ್ಷಗಳು ತಿಳಿಸಿವೆ.

ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ರಾಹುಲ್‌ ಗಾಂಧಿ ಮತ್ತು ಅರವಿಂದ್‌ ಕೇಜ್ರಿವಾಲ್‌ ಇದೇ ಪ್ರಥಮ ಬಾರಿ ಒಟ್ಟಾಗಿ ಸಭೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ಈ ಮೂಲಕ ಕಾಂಗ್ರೆಸ್‌ ಮತ್ತು ಆಮ್‌ ಆದ್ಮಿ ಪಕ್ಷ ಮೈತ್ರಿಗೆ ಸಜ್ಜಾಗಿರುವುದನ್ನು ಸೂಚಿಸಿದೆ. ದೆಹಲಿಯಲ್ಲಿ 2015ರಲ್ಲಿ ಆಮ್‌ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಉಭಯ ಪಕ್ಷಗಳ ನಡುವೆ ವಿರಸ ಸೃಷ್ಟಿಯಾಗಿತ್ತು.

ADVERTISEMENT

ಸಭೆಯ ಬಳಿಕ ಮಾತನಾಡಿದ ರಾಹುಲ್‌,‘ಮೋದಿ ಸರ್ಕಾರವನ್ನು ಉರುಳಿಸಲು ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಸಿದ್ಧಪಡಿಸಲು ವಿರೋಧ ಪಕ್ಷಗಳ ನಾಯಕರು ಒಪ್ಪಿದ್ದಾರೆ. ನಾವು ಒಗ್ಗಟ್ಟಿನಿಂದ ಬಿಜೆಪಿ ವಿರುದ್ಧ ಹೋರಾಟ ಮಾಡುತ್ತೇವೆ’ ಎಂದರು.

‘ರಚನಾತ್ಮಕ ಮಾತುಕತೆ ನಡೆದಿದೆ’ ಎಂದು ಅರವಿಂದ್‌ ಕೇಜ್ರಿವಾಲ್‌ ಹೇಳಿದರು.

‘ಮಾತುಕತೆ ಫಲಪ್ರದವಾಗಿದೆ. ಅಗತ್ಯವಿದ್ದರೆ ಚುನಾವಣೆಗೆ ಮುನ್ನವೇ ಮೈತ್ರಿ ಮಾಡಿಕೊಳ್ಳಲು ಸಿದ್ಧ. ಮುಂದಿನ ದಿನಗಳಲ್ಲಿ ಮಾತುಕತೆಗಳು ನಿರಂತರವಾಗಿ ನಡೆಯಲಿವೆ’ ಎಂದು ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆಯೂ ಆಗಿರುವ ಮಮತಾ ಬ್ಯಾನರ್ಜಿ ತಿಳಿಸಿದರು.

‘ಭಾರತವನ್ನು ರಕ್ಷಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಎಲ್ಲರೂ ಒಗ್ಗೂಡುತ್ತಿದ್ದೇವೆ’ ಎಂದು ಚಂದ್ರಬಾಬು ನಾಯ್ಡು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.