ನವದೆಹಲಿ: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿ ಮತ್ತು ಅದಕ್ಕೆ ಕಾನೂನು ಖಾತರಿ ಒದಗಿಸುವ ಕುರಿತು ಕೇಂದ್ರ ಸರ್ಕಾರದ ಮೇಲೆ ‘ಇಂಡಿಯಾ’ ಮೈತ್ರಿಕೂಟದ ಸದಸ್ಯರು ಒತ್ತಡ ಹೇರಲಿದ್ದಾರೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ತಮ್ಮನ್ನು ಭೇಟಿ ಮಾಡಿದ ರೈತ ಮುಖಂಡರಿಗೆ ಭರವಸೆ ನೀಡಿದರು.
ಸಂಸತ್ತಿನ ರಾಹುಲ್ ಗಾಂಧಿ ಅವರ ಕಚೇರಿಯಲ್ಲಿ ರೈತರೊಂದಿಗೆ ಬುಧವಾರ ಸಭೆ ನಡೆಯಿತು. ರಾಹುಲ್ ಅವರ ಆಹ್ವಾನದ ಮೇರೆಗೆ ಸಂಯುಕ್ತ ಕಿಸಾನ್ ಮೋರ್ಚಾದ (ರಾಜಕೀಯೇತರ) ನಿಯೋಗ ಭೇಟಿ ನೀಡಿತ್ತು. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕದ ಒಟ್ಟು 12 ರೈತ ಮುಖಂಡರು ನಿಯೋಗದಲ್ಲಿದ್ದರು.
ವಿವಿಧ ರಾಜ್ಯಗಳಲ್ಲಿ ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ರೈತರು ಈ ವೇಳೆ ಸಭೆಯಲ್ಲಿ ಚರ್ಚಿಸಿದರು. ಹರಿಯಾಣದಲ್ಲಿ ಅಲ್ಲಿನ ಸರ್ಕಾರವು ಪ್ರತಿಭಟನಾನಿರತ ರೈತರಿಗೆ ನೀಡುತ್ತಿರುವ ಕಿರುಕುಳಗಳ ಕುರಿತು ವಿವರಿಸಿದರು. ಅಲ್ಲದೆ ತಮ್ಮ ಬೇಡಿಕೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವಂತೆ ಮನವಿ ಮಾಡಿದರು.
ಈ ಸಂಬಂಧ ‘ಇಂಡಿಯಾ’ ಮೈತ್ರಿಕೂಟದ ನಾಯಕರೊಂದಿಗೆ ಚರ್ಚಿಸುತ್ತೇವೆ. ಅಲ್ಲದೆ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ ಎಂದು ರಾಹುಲ್ ಅವರು ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ರೈತ ಮುಖಂಡ ಜಗಜೀತ್ ಸಿಂಗ್ ದಲ್ಲೇವಾಲ್ ಅವರು, ‘ಎಂಎಸ್‌ಪಿ ಕಾನೂನು ಕುರಿತು ಈ ಹಿಂದೆ ‘ಇಂಡಿಯಾ’ ಮೈತ್ರಿಕೂಟ ಭರವಸೆ ನೀಡಿತ್ತು. ಈಗ ಅದನ್ನು ಜಾರಿಗೊಳಿಸುವಂತೆ ಮಾಡುವ ಹೊಣೆ ಅವರದ್ದಾಗಿದೆ’ ಎಂದು ಹೇಳಿದರು.
‘ರೈತರ ಮೇಲೆ ಗುಂಡು ಹಾರಿಸಿದ ಅಧಿಕಾರಿಯನ್ನು ಹರಿಯಾಣ ಸರ್ಕಾರ ಗೌರವಿಸಿ, ಸನ್ಮಾನಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ಈ ಕುರಿತು ರಾಹುಲ್ ಅವರ ಗಮನಕ್ಕೆ ತರಲಾಯಿತು’ ಎಂದು ರೈತ ಮುಖಂಡ ಸರವಣ ಸಿಂಗ್ ಪಂಢೇರ ತಿಳಿಸಿದರು.
ಎಂಎಸ್‌ಪಿ ಕುರಿತು ಸಂಸತ್ತಿನಲ್ಲಿ ಖಾಸಗಿ ಮಸೂದೆ ತರುವ ನಿಟ್ಟಿನಲ್ಲಿ ವಿರೋಧ ಪಕ್ಷಗಳು ಚಿಂತಿಸುತ್ತಿವೆ ಎಂದು ರೈತ ನಾಯಕರು ಪ್ರತಿಕ್ರಿಯಿಸಿದರು.
ಲಖ್ವಿಂದರ್ ಸಿಂಗ್, ಶಾಂತ ಕುಮಾರ್, ಅಭಿಮನ್ಯು, ನಲ್ಲನಾಳ ವೆಂಕಟೇಶ್ವರ ರಾವ್, ಪಾಂಡಿಯನ್ ರಾಮಲಿಂಗಂ, ತೆಜ್ವೀರ್ ಸಿಂಗ್, ಸುರ್ಜಿತ್ ಸಿಂಗ್, ರಮಣದೀಪ್ ಸಿಂಗ್ ಮಾನ್, ಅಮರ್ಜಿತ್ ಸಿಂಗ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.