ADVERTISEMENT

ವಿಕ್ರಮ್‌ ಲ್ಯಾಂಡರ್‌ಗೆ ಸ್ವಾಗತ ಗೆಳೆಯ.. ಎಂದ ಚಂದ್ರಯಾನ–2 ಆರ್ಬಿಟರ್‌

19ರ ಆರ್ಬಿಟರ್– 23ರ ಲ್ಯಾಂಡರ್‌ ಶುಭ ವಿನಿಮಯ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2023, 20:56 IST
Last Updated 21 ಆಗಸ್ಟ್ 2023, 20:56 IST
ಚಂದ್ರಯಾನ–2 ಆರ್ಬಿಟರ್‌–
ಚಂದ್ರಯಾನ–2 ಆರ್ಬಿಟರ್‌–    ಪ್ರಾತಿನಿಧಿಕ ಚಿತ್ರ

ಬೆಂಗಳೂರು: ‘ಸ್ವಾಗತ ಗೆಳೆಯ!’.

– ಹೀಗೆಂದು ಚಂದ್ರಮಂಡಲದಲ್ಲಿ ಚಂದ್ರಯಾನ–3ರ ‘ಲ್ಯಾಂಡರ್‌’ಗೆ ಆತ್ಮೀಯವಾಗಿ ಸ್ವಾಗತ ಕೋರಿದ್ದು, ಚಂದ್ರಯಾನ–2ರ ಕಕ್ಷೆಗಾಮಿ (ಆರ್ಬಿಟರ್‌). ಎರಡೂ ಪರಸ್ಪರ ಶುಭಾಶಯ ವಿನಿಯಮ ಮಾಡಿಕೊಂಡಿವೆ ಎಂದು ಇಸ್ರೊ ಮಾಹಿತಿ ನೀಡಿದೆ.

ಚಂದ್ರನ ಅಂಗಳ ಸ್ಪರ್ಶಕ್ಕೆ ತಾಲೀಮು ನಡೆಸುತ್ತಿರುವಾಗಲೇ ಲ್ಯಾಂಡರ್‌ ಅನ್ನು ಕಕ್ಷೆಗಾಮಿ ಆತ್ಮೀಯತೆಯಿಂದ ಸ್ವಾಗತಿಸಿರುವುದು, ಇಸ್ರೊ ವಿಜ್ಞಾನಿಗಳಲ್ಲಿ ಪುಳಕ ಉಂಟು ಮಾಡಿದೆ.

ADVERTISEMENT

ಅಲ್ಲದೇ, ಲ್ಯಾಂಡರ್‌ ಚಂದ್ರನ ಇನ್ನೊಂದು ತುದಿಯ ಒಂದಿಷ್ಟು ದೃಶ್ಯಗಳನ್ನು ಸೆರೆ ಹಿಡಿದು ಭುವಿಗೆ ಕಳುಹಿಸಿದೆ. ಇಳಿಯುವ ಸಂದರ್ಭದಲ್ಲಿ ಎದುರಾಗಬಹುದಾದ ಅಪಾಯಗಳನ್ನು ಪತ್ತೆ ಹಚ್ಚಿ ಅದನ್ನು ನಿವಾರಿಸಲೆಂದೇ ಅಳವಡಿಸಿರುವ ಕ್ಯಾಮೆರಾ (LHDAC) ಹೊಸ ಚಿತ್ರಗಳನ್ನು ಸೆರೆ ಹಿಡಿದಿದೆ. ಅದನ್ನು ಇಸ್ರೊ ‘ಎಕ್ಸ್‌’ (ಟ್ವಿಟರ್‌) ಖಾತೆಯಲ್ಲಿ ಹಂಚಿಕೊಂಡಿದೆ.

ಬುಧವಾರ ಸಂಜೆ 6.04 ಕ್ಕೆ ಲ್ಯಾಂಡರ್ ಚಂದ್ರ ನೆಲ ಸ್ಪರ್ಶಿಸಲಿದೆ.

2019 ರಲ್ಲಿ ಉಡಾವಣೆಗೊಂಡಿದ್ದ ಚಂದ್ರಯಾನ–2 ರ ಕಕ್ಷೆಗಾಮಿ ಇನ್ನೂ ಚಂದ್ರನ ಕಕ್ಷೆಯಲ್ಲಿ ಪರಿಭ್ರಮಣ ನಡೆಸುತ್ತಿದೆ. ಕಕ್ಷೆಗಾಮಿಯಂತೆ, ಚಂದ್ರಯಾನ–3 ರ ಲ್ಯಾಂಡರ್‌ ಕೂಡ ರಾಮನಗರ ಸಮೀಪದ ಬ್ಯಾಲಾಳುವಿನಲ್ಲಿರುವ ಇಂಡಿಯನ್‌ ಡೀಪ್ ಸ್ಪೇಸ್‌ ನೆಟ್‌ವರ್ಕ್‌(ಐಡಿಎಸ್‌ಎನ್‌) ಮಾಹಿತಿ ರವಾನಿಸುವ ಸಾಮರ್ಥ್ಯವನ್ನು ಹೊಂದಿದೆ. ಕಕ್ಷೆಗಾಮಿ ಮತ್ತು ಲ್ಯಾಂಡರ್‌ ಎರಡೂ ಐಡಿಎಸ್‌ಎನ್‌ಗೆ ಸಂವಹನ ನಡೆಸುತ್ತವೆ. ಬಾಹ್ಯಾಕಾಶ ನೌಕೆಗಳ ಕಾರ್ಯಾಚರಣೆ ಕೇಂದ್ರವಾದ ಟೆಲಿಮೆಟ್ರಿ, ಟ್ರ್ಯಾಕಿಂಗ್‌ ಮತ್ತು ಕಮಾಂಡ್‌ ನೆಟ್‌ವರ್ಕ್‌ ಕೂಡಾ ಇಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.