ಕೋಲ್ಕತ್ತ: ಮತ ಎಣಿಕೆಯ ಸಂದರ್ಭ ಏರ್ಪಟ್ಟ ಗೊಂದಲಗಳ ಬಳಿಕ ಪಶ್ಚಿಮ ಬಂಗಾಳದ ಜಿದ್ದಾಜಿದ್ದಿನ ಕ್ಷೇತ್ರವಾಗಿದ್ದ ನಂದಿಗ್ರಾಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಶಿಷ್ಯ ಸುವೇಂದು ಅಧಿಕಾರಿ 1,956 ಮತಗಳ ಅಂತರದಿಂದ ಜಯಶಾಲಿ ಆಗಿದ್ದಾರೆ.
ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಮಾಹಿತಿ ಪ್ರಕಾರ, ಸುವೇಂದು ಅಧಿಕಾರಿ 1,10,764 ಮತಗಳನ್ನು ಪಡೆದರೆ, ಮಮತಾ ಬ್ಯಾನರ್ಜಿ 1,08,808 ಮತಗಳನ್ನು ಪಡೆದು 1,956 ಮತಗಳ ಅಂತರದಿಂದ ಸೋತಿದ್ದಾರೆ.
ಈ ಮೊದಲು ಮತ ಎಣಿಕೆಯ ಅಂತ್ಯದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ ಗೆದ್ದಿದ್ದಾರೆ ಎಂದು ಘೋಷಿಸಲಾಗಿತ್ತು. ಬಳಿಕ, ಚುನಾವಣಾ ಆಯೋಗವು ಮಮತಾ ಸೋತಿದ್ದಾರೆ ಎಂದು ಹೇಳಿತು. ಮತ್ತಷ್ಟು ಮತ ಎಣಿಕೆ ಬಾಕಿ ಇರುವ ಬಗ್ಗೆ ವರದಿಗಳು ಬಂದಿದ್ದವು. ಅಂತಿಮವಾಗಿ ಜನರ ತೀರ್ಪು ಹೊರಬಿದ್ದಿದೆ.
ಮತ ಎಣಿಕೆಯ ಮೊದಲ ಸುತ್ತಿನಲ್ಲೇ ಸುವೇಂದು 8,000 ಮತಗಳ ಮುನ್ನಡೆ ಪಡೆದಿದ್ದರು. ಬಳಿಕ, ಮಮತಾ ಬ್ಯಾನರ್ಜಿ ಕಮ್ ಬ್ಯಾಕ್ ಮಾಡಿದರು. ಅಲ್ಪ ಅಂತರದಲ್ಲೇ ಹಾವು–ಏಣಿ ಆಟ ಮುಂದುವರೆದಿತ್ತು. ಅಂತಿಮವಾಗಿ ಗುರುವಿನ ವಿರುದ್ಧ ಶಿಷ್ಯನ ಗೆಲುವಾಗಿದೆ.
ನಂದಿಗ್ರಾಮದ ಸೋಲಿನ ಬಗ್ಗೆ ಚಿಂತಿಸಬೇಡಿ, ನಾನು ನಂದಿಗ್ರಾಮದಲ್ಲಿ ಚಳವಳಿ ನಡೆಸಿದ್ದ ಕಾರಣ ಅದಕ್ಕಾಗಿ ಸೆಣಸಿದೆ. ಪರವಾಗಿಲ್ಲ. ನಂದಿಗ್ರಾಮದ ಜನರು ತಮಗೆ ಬೇಕಾದ ಯಾವುದೇ ತೀರ್ಪು ನೀಡಲಿ, ನಾನು ಅದನ್ನು ಸ್ವೀಕರಿಸುತ್ತೇನೆ. ಈ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನಾವು 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದೇವೆ ಮತ್ತು ಬಿಜೆಪಿ ಚುನಾವಣೆಯಲ್ಲಿ ಸೋತಿದೆ ಎಂದು ಮಮತಾ ಹೇಳಿದ್ದಾರೆ.
ತನ್ನ ಪರವಾಗಿ ಮತ ಚಲಾಯಿಸಿದ್ದಕ್ಕಾಗಿ ಸುವೇಂದು ಅಧಿಕಾರಿ, ನಂದಿಗ್ರಾಮದ ಜನರಿಗೆ ಧನ್ಯವಾದ ಹೇಳಿದ್ದಾರೆ.
ಈ ಮಧ್ಯೆ, ಟಿಎಂಸಿ ಭಾನುವಾರದ ಎಣಿಕೆಯ ಸಂದರ್ಭ ಅಕ್ರಮ ನಡೆದಿದೆ ಎಂದು ಆರೋಪಿಸಿ ಮರು ಎಣಿಕೆಗೆ ಒತ್ತಾಯಿಸಿದೆ.
ಕೂಡಲೇ ಮರು ಎಣಿಕೆ ಮಾಡಬೇಕೆಂಬ ತಮ್ಮ ಮನವಿಯನ್ನು ತಳ್ಳಿ ಹಾಕಿರುವ ರಿಟರ್ನಿಂಗ್ ಆಫೀಸರ್ ನಿರ್ಧಾರ ಪ್ರಶ್ನಿಸಿ ಮುಖ್ಯ ಚುನಾವಣಾ ಆಯುಕ್ತರಿಗೆ ಟಿಎಂಸಿ ಪತ್ರ ಬರೆದಿದೆ. ತಮ್ಮ ಮನವಿ ಪರಿಗಣಿಸಲು ಸೂಚಿಸುವಂತೆ ಪತ್ರದಲ್ಲಿ ಒತ್ತಾಯಿಸಿದೆ. ಈ ಬಗ್ಗೆ ಚುನಾವಣಾ ಆಯೋಗದಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.