ADVERTISEMENT

ಹೊರಗಿನ ಮಮತಾರನ್ನು ನಂದಿಗ್ರಾಮದಲ್ಲಿ ಸುಲಭವಾಗಿ ಸೋಲಿಸುವೆ: ಸುವೇಂದು ಅಧಿಕಾರಿ

ಪಿಟಿಐ
Published 7 ಮಾರ್ಚ್ 2021, 1:21 IST
Last Updated 7 ಮಾರ್ಚ್ 2021, 1:21 IST
ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿ (ಪಿಟಿಐ ಸಂಗ್ರಹ ಚಿತ್ರ)
ಮಮತಾ ಬ್ಯಾನರ್ಜಿ ಮತ್ತು ಸುವೇಂದು ಅಧಿಕಾರಿ (ಪಿಟಿಐ ಸಂಗ್ರಹ ಚಿತ್ರ)   

ಕೋಲ್ಕತ್ತ: ‘ನಂದಿಗ್ರಾಮ’ಕ್ಕೆ ಹೊರಗಿನವರಾದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಚುನಾವಣೆಯಲ್ಲಿ ಸೋಲಿಸುವುದು ಶೇ 200ರಷ್ಟು ಖಚಿತ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ. ಇವರು ನಂದಿಗ್ರಾಮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೂ ಹೌದು.

ಮಮತಾ ಅವರು ತಮ್ಮ ವಿಧಾನಸಭಾ ಕ್ಷೇತ್ರ ಕೋಲ್ಕತ್ತದ ಭವಾನಿಪುರ ಬಿಟ್ಟು ಈ ಬಾರಿ ನಂದಿಗ್ರಾಮದಿಂದ ಕಣಕ್ಕಿಳಿಯುತ್ತಿದ್ದಾರೆ.

‘ನೀವು ಭವಾನಿಪುರ ಕ್ಷೇತ್ರವನ್ನು ಯಾಕೆ ತೊರೆಯುತ್ತಿದ್ದೀರಿ? ನೀವ್ಯಾಕೆ ಓಡಿಹೋಗುತ್ತಿದ್ದೀರಿ? 2019ರ ಲೋಕಸಭೆ ಚುನಾವಣೆಯಲ್ಲಿ ಮಿತ್ರಾ ಇನ್‌ಸ್ಟಿಟ್ಯೂಷನ್ ಬೂತ್‌ನಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು ಎಂದೇ? ನಿಮ್ಮ ಸ್ವಂತ ಕ್ಷೇತ್ರದಲ್ಲೇ ನಿಮಗೆ ಗೆಲ್ಲಲಾಗದು’ ಎಂದು ಕೋಲ್ಕತ್ತದ ಬೆಹಲಾ ಪ್ರದೇಶದಲ್ಲಿ ನಡೆದ ರ್‍ಯಾಲಿಯಲ್ಲಿ ಅಧಿಕಾರಿ ಹೇಳಿದ್ದಾರೆ.

‘ನಂದಿಗ್ರಾಮದಲ್ಲಿ ಲಕ್ಷಣ್ ಸೇಠ್ ಅವರನ್ನು ಸೋಲಿಸಿದ್ದೇನೆ. ಈ ಬಾರಿ ಗೌರವಾನ್ವಿತರನ್ನು (ಮಮತಾ ಬ್ಯಾನರ್ಜಿ) ಸೋಲಿಸಲಿದ್ದೇನೆ. ಅವರು ನಂದಿಗ್ರಾಮಕ್ಕೆ ಹೊರಗಿನವರು, ನಾನು ಆ ಪ್ರದೇಶದ ಮಣ್ಣಿನ ಮಗ’ ಎಂದು ಅವರು ಹೇಳಿದ್ದಾರೆ.

ಬ್ಯಾನರ್ಜಿ ಕುಟುಂಬದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅಧಿಕಾರಿ, ಮುಖ್ಯಮಂತ್ರಿಗಳ ಅಳಿಯ ಅಭಿಷೇಕ್ ಬ್ಯಾನರ್ಜಿ ಮನೆ ಮುಂದೆ, ಹರೀಶ್ ಮುಖರ್ಜಿ ರಸ್ತೆಯಲ್ಲಿ ಮಾಡಿರುವ ಭದ್ರತಾ ವ್ಯವಸ್ಥೆಗಳಿಂದಾಗಿ ಸಾರ್ವಜನಿಕರಿಗೆ ಅಡಚಣೆಯಾಗುತ್ತಿದೆ. ಜನರಿಗೆ ಧಾರ್ಮಿಕ ಕಾರ್ಯಕ್ರಮಗಳು, ಮೆರವಣಿಗೆ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಒಂದು ಕುಟುಂಬದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ದೊಡ್ಡ ಉದ್ಯಮಿಗಳಿಗೆ ಜಾಗ ನೀಡಲಾಗಿದೆ. ಇದರಿಂದಾಗಿ ಸಣ್ಣಪುಟ್ಟ ಉದ್ಯಮಿಗಳು ಉದ್ಯಮ ಮುಚ್ಚುವಂತಾಗಿದೆ ಎಂದು ಅವರು ದೂರಿದ್ದಾರೆ.

ಬ್ಯಾನರ್ಜಿ ಕುಟುಂಬವನ್ನು ಪ್ರಶ್ನಿಸುವ ಮೂಲಕ ಸಿಬಿಐ ಸರಿಯಾದುದನ್ನೇ ಮಾಡಿದೆ. ಮಮತಾ ಕುಟುಂಬ ಕಾನೂನಿಗಿಂತ ಮೇಲಿನದ್ದಲ್ಲ ಎಂದು ಅಧಿಕಾರಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.