ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಗೆ ತೃಣಮೂಲ ಕಾಂಗ್ರೆಸ್ ಪಕ್ಷ 291 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಟಿಎಂಸಿ ಪಕ್ಷದಿಂದ 291 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಪಕ್ಷದ ವರಿಷ್ಠೆ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.ಮಮತಾ ಬ್ಯಾನರ್ಜಿ ನಿವಾಸದಲ್ಲಿ ನಡೆದ ಚುನಾವಣಾ ಸಮಿತಿ ಸಭೆ ಬಳಿಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಒಟ್ಟು 294 ಕ್ಷೇತ್ರಗಳ ಪೈಕಿ, ಉತ್ತರ ಬಂಗಾಳದ 3 ಕ್ಷೇತ್ರಗಳಲ್ಲಿ ನಾವು ಸ್ಪರ್ಧೆ ಮಾಡುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಇದೇವೇಳೆ, ನಾನು ನಂದಿಗ್ರಾಮ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿರುವ ಮಮತಾ, 50 ಮಹಿಳೆಯರು, 42 ಮುಸ್ಲಿಂ ಅಭ್ಯರ್ಥಿಗಳು ಸೇರಿ 291 ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿದ್ದಾರೆ ಎಂದು ಹೇಳಿದ್ದಾರೆ.
ಟಿಎಂಸಿ ಅಭ್ಯರ್ಥಿಗಳ ಪಟ್ಟಿಯಲ್ಲಿ ನಟ ನಟಿಯರು ಸ್ಥಾನ ಪಡೆದಿದ್ದಾರೆ. ನಟಿ ಸಾಯೋನಿ ಘೋಷ್, ಅಸನ್ಸೋಲ್ ದಕ್ಷಿಣ ಕ್ಷೇತ್ರದಿಂದ, ನಟಿ ಸಯಂತಿಕಾ ಬ್ಯಾನರ್ಜಿ ಬಂಕುರಾ, ನಟಿ ಕೌಶಾನಿ ಮುಖರ್ಜಿ ಕೃಷ್ಣನಗರ ಉತ್ತರದಿಂದ, ನಟ ಚಿರಂಜೀತ್ ಚಕ್ರವರ್ತಿ ಬಾರಸತ್‌ನಿಂದ, ಮನೋಜ್ ತಿವಾರಿ ಶಿಬ್‌ಪುರದಿಂದ ಸ್ಪರ್ಧಿಸಲಿದ್ದಾರೆ.
ನಟಿ ಲವ್ಲಿ ಮೈತ್ರಾ ಸೋನಾರ್‌ಪುರ ದಕ್ಷಿಣದಿಂದ ಸ್ಪರ್ಧಿಸಲಿದ್ದಾರೆ. ನಟ ಕಾಂಚನ್ ಮುಲ್ಲಿಕ್ ಉತ್ತರಪಾರದಿಂದ, ನಿರ್ದೇಶಕ ರಾಜ್ ಚಕ್ರವರ್ತಿ ಬರಾಕ್‌ಪೋರ್‌ನಿಂದ ಸ್ಪರ್ಧಿಸಲಿದ್ದಾರೆ. ಭವಾನಿಪುರದಿಂದ ಶೋಭಂಡೇಬ್ ಚಟರ್ಜಿ, ಪ್ರೊಫೆಸರ್ ಓಂಪ್ರಕಾಶ್ ಮಿಶ್ರಾ ಸಿಲಿಗುರಿಯಿಂದ ಸ್ಪರ್ಧಿಸಲಿದ್ದಾರೆ
ಮಾರ್ಚ್ 9ರಂದು ನಂದಿಗ್ರಾಮಕ್ಕೆ ತೆರಳುತ್ತಿದ್ದು, ಮಾರ್ಚ್ 10ರಂದು ಹಲ್ದಿಯಾದಲ್ಲಿ ನಾಮಪತ್ರ ಸಲ್ಲಿಸುವುದಾಗಿ ಮಮತಾ ಹೇಳಿದ್ದಾರೆ.
294 ವಿಧಾನಸಭಾ ಕ್ಷೇತ್ರಗಳಿರುವ ಪಶ್ಚಿಮ ಬಂಗಾಳದಲ್ಲಿ 8 ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಮಾರ್ಚ್ 27, ಏಪ್ರಿಲ್ 1, ಏಪ್ರಿಲ್ 6, ಏಪ್ರಿಲ್ 10, ಏಪ್ರಿಲ್ 17, ಏಪ್ರಿಲ್ 22, ಏಪ್ರಿಲ್ 26 ಮತ್ತು ಏಪ್ರಿಲ್ 29 ರಂದು ಮತದಾನ ನಡೆಯಲಿದೆ.
14 ವರ್ಷಗಳಿಂದ ಟಿಎಂಸಿ ಭದ್ರಕೋಟೆಯಾಗಿರುವ ನಂದಿಗ್ರಾಮದಲ್ಲಿ ಈಗ ಬಿಜೆಪಿ ಸೇರಿರುವ ಸುವೇಂದು ಅಧಿಕಾರಿ ಸ್ಪರ್ಧೆ ಮಾಡುತ್ತಿದ್ದರು. ಬಿಜೆಪಿ ಸೇರ್ಪಡೆ ಬಳಿಕ ಈ ಬಾರಿ ಟಿಎಂಸಿ ಪಕ್ಷ ನಂದಿಗ್ರಾಮ ಉಳಿಸಿಕೊಳ್ಳಲಿ ನೊಡೋಣ ಎಂದು ಸವಾಲೆಸೆದಿದ್ದರು. ಮಮತಾ ಅವರು ಇಲ್ಲಿಂದ ಕಣಕ್ಕಿಳಿಯುವ ನಿರ್ಧಾರ ಪ್ರಕಟಿಸಿದ ಬಳಿಕ ಸುವೇಂದು ಅವರೂ ಇಲ್ಲಿಂದ ಸ್ಪರ್ಧಿಸುವ ಉತ್ಸಾಹ ತೋರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.