ADVERTISEMENT

ಸುನಿತಾ ಕೇಜ್ರಿವಾಲ್ ಭೇಟಿ ಮಾಡಿದ ಮಮತಾ ಬ್ಯಾನರ್ಜಿ, ಮಾತುಕತೆ

ಪಿಟಿಐ
Published 26 ಜುಲೈ 2024, 15:40 IST
Last Updated 26 ಜುಲೈ 2024, 15:40 IST
<div class="paragraphs"><p>ಮಮತಾ ಬ್ಯಾನರ್ಜಿ, ಸುನಿತಾ ಕೇಜ್ರಿವಾಲ್</p></div>

ಮಮತಾ ಬ್ಯಾನರ್ಜಿ, ಸುನಿತಾ ಕೇಜ್ರಿವಾಲ್

   

(ಚಿತ್ರ ಕೃಪೆ: X/@AamAadmiParty)

ನವದೆಹಲಿ: ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಪತ್ನಿ ಸುನಿತಾ ಕೇಜ್ರಿವಾಲ್ ಅವರನ್ನು ಇಂದು ಭೇಟಿಯಾಗಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತುಕತೆ ನಡೆಸಿದ್ದಾರೆ.

ADVERTISEMENT

ನಾಳೆ (ಜುಲೈ 27) ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಮಮತಾ ಇಂದು ದೆಹಲಿಗೆ ಆಗಮಿಸಿದ್ದಾರೆ. ಈ ವೇಳೆ ದೆಹಲಿ ಸಿಎಂ ನಿವಾಸಕ್ಕೆ ತೆರಳಿ ಕೇಜ್ರಿವಾಲ್ ಅವರ ಪತ್ನಿ ಹಾಗೂ ಕುಟುಂಬದವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಸಂಬಂಧ ಆಮ್ ಆದ್ಮಿ ಪಕ್ಷವು (ಎಎಪಿ) ಚಿತ್ರವನ್ನು ಹಂಚಿಕೊಂಡಿದೆ. ಈ ವೇಳೆ ಎಎಪಿ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಸಹ ಉಪಸ್ಥಿತರಿದ್ದರು.

'ಸರ್ವಾಧಿಕಾರದ ವಿರುದ್ಧ 'ಇಂಡಿಯಾ' ಮೈತ್ರಿಕೂಟ ಒಗ್ಗಟ್ಟಾಗಿದೆ. ಕೇಜ್ರಿವಾಲ್ ಅವರ ಕುಟುಂದವರನ್ನು ಭೇಟಿಯಾಗಲು ಮಮತಾ ಇಲ್ಲಿಗೆ ಆಗಮಿಸಿದ್ದಾರೆ. ಮಮತಾ ಅವರನ್ನು ಕೇಜ್ರಿವಾಲ್ ಅವರ ಪತ್ನಿ ಸುನಿತಾ ಸ್ವಾಗತಿಸಿದರು' ಎಂದು ಎಎಪಿ ತಿಳಿಸಿದೆ.

ಮಾರ್ಚ್ 21ರಂದು ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಇತ್ತೀಚೆಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದರೂ ಸಂಬಂಧಿತ ಪ್ರಕರಣದಲ್ಲಿ ಸಿಬಿಐ ಕೂಡ ಬಂಧಿಸಿದ್ದರಿಂದ ಜೈಲಿನಲ್ಲಿದ್ದಾರೆ.

'ಇಂಡಿಯಾ' ಮೈತ್ರಿಕೂಟದಿಂದ ನೀತಿ ಆಯೋಗದ ಸಭೆ ಬಹಿಷ್ಕಾರ...

ಕೇಂದ್ರ ಸರ್ಕಾರವು 'ಇಂಡಿಯಾ' ಒಕ್ಕೂಟದ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳನ್ನು ಬಜೆಟ್‌ನಲ್ಲಿ ನಿರ್ಲಕ್ಷಿಸಿದೆ ಎಂದು ಆರೋಪಿಸಿರುವ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರದ ನಿಲುವನ್ನು ಖಂಡಿಸಿ ನೀತಿ ಆಯೋಗದ ಆಡಳಿತ ಮಂಡಳಿ ಸಭೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಮತ್ತೊಂದೆಡೆ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುವುದಾಗಿ ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದು, ಬಜೆಟ್ ಸೇರಿದಂತೆ ಕೇಂದ್ರದ ತಾರತಮ್ಯ ನೀತಿಯ ವಿರುದ್ಧ ಪ್ರತಿಭಟನೆ ದಾಖಲಿಸುವುದಾಗಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.