ಕೋಲ್ಕತ್ತ: ಟ್ವಿಟರ್ ಸಂಸ್ಥೆಯ ಮೇಲೆ ಪ್ರಭಾವ ಬೀರಲು ನಡೆಸಿದ ಯತ್ನ ವಿಫಲವಾಗಿದೆ, ಹಾಗಾಗಿ ಅದನ್ನು ದಮನಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ.
‘ತಮ್ಮ ಸರ್ಕಾರದ ಜೊತೆಗೂ ಕೇಂದ್ರ ಸರ್ಕಾರ ಹೀಗೆಯೇ ನಡೆದುಕೊಂಡಿತು. ಅವರಿಗೆ ನನ್ನನ್ನು ಏನೂ ಮಾಡಲು ಆಗಲಿಲ್ಲ. ಯಾರನ್ನು ನಿಗ್ರಹಿಸಲು ಸಾಧ್ಯವಿಲ್ಲವೂ ಅವರ ಜೊತೆಗೆಲ್ಲಾ ಕೇಂದ್ರ ಹೀಗೆ ನಡೆದುಕೊಳ್ಳುತ್ತದೆ’ ಎಂದು ಅವರು ಆರೋಪಿಸಿದ್ದಾರೆ.
ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಪಾಲಿಸದಿರುವುದು ಮತ್ತು ಹೊಸ ಮಾರ್ಗಸೂಚಿಗಳ ಅನ್ವಯ ಸಿಬ್ಬಂದಿ ನೇಮಿಸುವಲ್ಲಿ ವಿಫಲವಾದ ಕಾರಣ ಟ್ವಿಟರ್ ಸಂಸ್ಥೆಯು ಭಾರತದಲ್ಲಿ ಪಡೆದಿದ್ದ ರಕ್ಷಣೆಯನ್ನು ಕಳೆದುಕೊಂಡಿದೆ. ಟ್ವಿಟರ್ ವೇದಿಕೆಯಲ್ಲಿ ಮೂರನೇ ವ್ಯಕ್ತಿ ಮಾಡುವ ಅಕ್ರಮ ಚಟುವಟಿಕೆಗಳಿಗೆ ಭಾರತೀಯ ದಂಡ ಸಂಹಿತೆಯ ಪ್ರಕಾರ ಟ್ವಿಟರ್ ಸಂಸ್ಥೆಯು ಜವಾಬ್ದಾರವಾಗಿರುತ್ತದೆ.
ರಾಷ್ಟ್ರದಾದ್ಯಂತ ಸಂಚಲನ ಮೂಡಿಸಿದ್ದ ಮುಸ್ಲಿಂ ವೃದ್ಧರೊಬ್ಬರಿಗೆ ಹಲ್ಲೆ ಮಾಡಿ, ಜೈ ಶ್ರೀರಾಮ್ ಹೇಳುವಂತೆ ಒತ್ತಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಟ್ವಿಟರ್ ಇಂಡಿಯಾ ಎಂಡಿಗೆ ಏಳು ದಿನದಲ್ಲಿ ಠಾಣೆಗೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ಘಾಜಿಯಾಬಾದ್ ಪೊಲೀಸರು ಶುಕ್ರವಾರ ನೋಟಿಸ್ ಜಾರಿ ಮಾಡಿದ್ದಾರೆ.
ಟ್ವಿಟರ್‌ನಲ್ಲಿ ವೈರಲ್ ಆಗಿದ್ದ ವಿಡಿಯೊದಲ್ಲಿ ನಾಲ್ವರು ಯುವಕರು ವೃದ್ಧನ ಗಡ್ಡವನ್ನು ಕತ್ತರಿಸಿ, ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯ ಪಡಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಇದು ಕೋಮುಸಂಘರ್ಷಕ್ಕೆ ದಾರಿ ಮಾಡಿಕೊಡುವ ಪೋಸ್ಟ್ ಎಂದು ಪೊಲೀಸರು ಟ್ವಿಟರ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಘಾಜಿಯಾಬಾದ್ ಪೊಲೀಸರು ಟ್ವಿಟರ್ ಇಂಡಿಯಾ ಎಂಡಿ ಮನೀಶ್ ಮಹೇಶ್ವರಿ ಅವರಿಗೆ ಕಳುಹಿಸಿರುವ ನೋಟಿಸ್ ಅನ್ನು ನ್ಯೂಸ್ ಏಜೆನ್ಸಿ ಎಎನ್‌ಐ ಹಂಚಿಕೊಂಡಿದೆ. ಲೋನಿ ಬಾರ್ಡರ್‌ನಲ್ಲಿರುವ ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ದಾಖಲಿಸುವಂತೆ ನೋಟಿಸ್‌ನಲ್ಲಿ ಹೇಳಲಾಗಿದೆ ಎಂದು ಎಎನ್‌ಐ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.