ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಘರ್ಷಣೆಗಳು ಮುಂದುವರಿದಿವೆ. ಪಕ್ಷದ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಖಂಡಿಸಿ ಬಿಜೆಪಿಯವರು ಬುಧವಾರ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ರ‍್ಯಾಲಿಯ ವೇಳೆ ಪೊಲೀಸರು ಹಾಗೂ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ.
ಬೋವಬಜಾರ್ ಪ್ರದೇಶಕ್ಕೆ ನುಗ್ಗಿದ ಬಿಜೆಪಿ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಹಾಗೂ ಜಲಫಿರಂಗಿಗಳನ್ನು ಪ್ರಯೋಗಿಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ, ಪೊಲೀಸರತ್ತ ಕಲ್ಲು ಹಾಗೂ ಬಾಟಲ್‌ಗಳನ್ನು ಎಸೆದರು. ಕೆಲವು ಕಾರ್ಯಕರ್ತರು ಅದೇ ಪ್ರದೇಶದಲ್ಲಿ ಧರಣಿ ಕುಳಿತರು.
ಹೊಸದಾಗಿ ಆಯ್ಕೆಯಾಗಿರುವ ಬಿಜೆಪಿಯ 18 ಸಂಸದರು, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಹಾಗೂ ಪಕ್ಷದ ಕಾರ್ಯಕರ್ತರು ವೆಲ್ಲಿಂಗ್ಟನ್ ಪ್ರದೇಶದಿಂದ ಲಾಲ್‌ಬಜಾರ್‌ನಲ್ಲಿರುವ ಪೊಲೀಸ್ ಮುಖ್ಯ ಕಚೇರಿ
ಯತ್ತ ಬುಧವಾರ ಮೆರವಣಿಗೆ ನಡೆಸಿದರು. ಪಕ್ಷದ ಹಿರಿಯ ಮುಖಂಡರಾದ ಕೈಲಾಷ್ ವಿಜಯವರ್ಗೀಯ ಮತ್ತು ಮುಕುಲ್ ರಾಯ್ ಭಾಗಿಯಾಗಿದ್ದರು.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದ 18 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡ ಬಳಿಕ ಚುನಾವಣೋತ್ತರ ಹಿಂಸಾಚಾರದ ಘಟನೆಗಳು ನಡೆದಿವೆ.ಘಟನೆಗಳಿಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೇ ಹೊಣೆ ಎಂದು ಆರೋಪಿಸಿದ್ದ ಮುಕುಲ್ ರಾಯ್, ಎನ್‌ಐಎ ತನಿಖೆಗೆ ಆಗ್ರಹಿಸಿದ್ದರು. ‘ಹಿಂಸಾಚಾರಕ್ಕೆ ಬಿಜೆಪಿ ಪ್ರಚೋದನೆ ನೀಡುತ್ತಿದೆ’ ಎಂದು ಮಮತಾ ಆರೋಪಿಸಿದ್ದರು.
ಪೊಲೀಸರ ಮೇಲೆ ದಾಳಿ:ರಸ್ತೆ ತಡೆ ತೆರವುಗೊಳಿಸಲು ಯತ್ನಿಸಿದ ಪೊಲೀಸರ ಮೇಲೆ ಬಿಜೆಪಿ ಕಾರ್ಯಕರ್ತರ ಗುಂಪು ಬುಧವಾರ ದಾಳಿ ನಡೆಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಬಿರ್‌ಭೂಮ್ ಜಿಲ್ಲೆಯ ಬಂದಾರ್ ಗ್ರಾಮದ ಬಸ್ ನಿಲ್ದಾಣದ ಬಳಿ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸುತ್ತಿದ್ದರು. ಗುಂಪು ಚದುರಿಸಲು ಲಾಠಿ ಬೀಸಿದ ಪೊಲೀಸರ ಮೇಲೆಯೇ ಕಾರ್ಯಕರ್ತರು ಪ್ರತಿದಾಳಿ ನಡೆಸಿದರು ಎಂದು ಪ್ರತ್ಯಕ್ಷದರ್ಶಿ ಹೇಳಿದ್ದಾರೆ.
‘ಘಟನೆಯಲ್ಲಿ ಪೊಲೀಸರು ಗಾಯಗೊಂಡಿಲ್ಲ. ದಾಳಿ ನಡೆಸಿದ ಐವರುನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಯಾಮ್ ಸಿಂಗ್ ಹೇಳಿದ್ದಾರೆ.
ಇಂದು ಸರ್ವಪಕ್ಷ ಸಭೆ: ಚುನಾವಣೋತ್ತರ ಹಿಂಸಾಚಾರಗಳು ಮುಂದುವರಿದಿರುವ ಕಾರಣ,ಪಶ್ಚಿಮ ಬಂಗಾಳದ ರಾಜ್ಯಪಾಲ ಕೆ.ಎನ್. ತ್ರಿಪಾಠಿ ಅವರು ಪ್ರಮುಖ ರಾಜಕೀಯ ಪಕ್ಷಗಳ ಸಭೆ ಕರೆದಿದ್ದಾರೆ.
ಈ ಬಗ್ಗೆ ರಾಜಕೀಯ ಪಕ್ಷಗಳಿಗೆ ಪತ್ರ ಕಳುಹಿಸಿರುವ ಅವರು,ಗುರುವಾರ ಸಂಜೆ ನಾಲ್ಕು ಗಂಟೆಗೆ ರಾಜಭವನದಲ್ಲಿ ನಡೆಯುವ ಸಭೆಯಲ್ಲಿ ಹಾಜರಾಗುವಂತೆ ತಿಳಿಸಿದ್ದಾರೆ. ರಾಜ್ಯಪಾಲರ ನಿರ್ಧಾರವನ್ನು ಬಂಗಾಳದ ಬಿಜೆಪಿ ಘಟಕ ಸ್ವಾಗತಿಸಿದೆ.
ಪತ್ರ ಕೈಸೇರಿದ ಬಳಿಕ ಸಭೆಗೆ ಹಾಜರಾಗುವ ಕುರಿತು ತೀರ್ಮಾನ ತೆಗೆದುಕೊಳ್ಳುವುದಾಗಿ ಟಿಎಂಸಿ ಪ್ರತಿಕ್ರಿಯಿಸಿದೆ.
ಬಿಜೆಪಿ–ಟಿಎಂಸಿಗೆ ನೆರವಾದವರ ವಿರುದ್ಧ ಕ್ರಮ
ಲೋಕಸಭಾ ಚುನಾವಣೆಯಲ್ಲಿ ಸಿಪಿಎಂನ ಮತಗಳು ದೊಡ್ಡ ಪ್ರಮಾಣದಲ್ಲಿ ಬಿಜೆಪಿಗೆ ಹಾಗೂ ಕೆಲವು ಮತಗಳು ಟಿಎಂಸಿ ಕಡೆಗೆ ಹೋಗುವಂತೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನೆರವಾದ ನಾಯಕರನ್ನು ಉಚ್ಚಾಟಿಸಲು ಸಿಪಿಎಂ ಮುಂದಾಗಿದೆ.
‘ನಮ್ಮ ಮತಗಳು ಬಿಜೆಪಿಗೆ ವರ್ಗಾವಣೆಯಾಗಿದ್ದರಿಂದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷದ ಭವಿಷ್ಯ ಹಾಳಾಯಿತು. ಟಿಎಂಸಿಯು ಇದನ್ನೇ ಅಸ್ತ್ರವಾಗಿಸಿ ನಮ್ಮ ವಿರುದ್ಧ ಹೋರಾಡುವಂತಾಗಿದೆ. ಆದ್ದರಿಂದ, ಬಿಜೆಪಿ ಅಥವಾ ಟಿಎಂಸಿಯನ್ನು ಬೆಂಬಲಿಸಿದ ಸಿಪಿಎಂ ನಾಯಕರನ್ನು ಪಕ್ಷದಿಂದ ಉಚ್ಚಾಟಿಸಲು ನಾವು ತೀರ್ಮಾನಿಸಿದ್ದೇವೆ’ ಎಂದು ಪಕ್ಷದ ರಾಜ್ಯ ಸಮಿತಿಯ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಸಿಪಿಎಂನ ಮತಗಳು ದೊಡ್ಡ ಪ್ರಮಾಣದಲ್ಲಿ ಬಿಜೆಪಿಗೆ ಹೋಗಿದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಹೀನಾಯ ಸೋಲು ಕಾಣಬೇಕಾಯಿತು ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಈಚೆಗೆ ಒಪ್ಪಿಕೊಂಡಿದ್ದರು.
ಪಕ್ಷವಿರೋಧಿ ಚಟುವಟಿಕೆ ನಡೆಸಿದ ಮುಖಂಡರ ಪಟ್ಟಿಯನ್ನು ತಯಾರಿಸಿ ಕೂಡಲೇ ರಾಜ್ಯ ಸಮಿತಿಗೆ ಸಲ್ಲಿಸುವಂತೆ ಪಕ್ಷ ಎಲ್ಲ ಜಿಲ್ಲಾ ಘಟಕಗಳಿಗೆ ಸೂಚನೆ ನೀಡಲಾಗಿದೆ. ನಿಷ್ಕ್ರಿಯರಾಗಿರುವ ಕಾರ್ಯಕರ್ತರ ವಿರುದ್ಧವೂ ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದು ಇಂಥ 200ಕ್ಕೂ ಹೆಚ್ಚು ಕಾರ್ಯಕರ್ತರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಅಂಥವರನ್ನು ಶೀಘ್ರದಲ್ಲೇ ಪಕ್ಷದಿಂದ ಉಚ್ಚಾಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.