ಕೋಲ್ಕತ್ತ/ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಮುಷ್ಕರ ನಡೆಸುತ್ತಿರುವ ಕಿರಿಯ ವೈದ್ಯರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಧಿಸಿದ್ದ ಗಡುವಿಗೂ ಮನ್ನಣೆ ನೀಡಿಲ್ಲ.
ಭದ್ರತೆಗೆ ಸಂಬಂಧಿಸಿದ ಬೇಡಿಕೆಗಳು ಈಡೇರುವವರೆಗೂ ಮುಷ್ಕರ ಮುಂದುವರಿಸಲಾಗುವುದು ಎಂದು ವೈದ್ಯರು ಪಟ್ಟು ಹಿಡಿದಿದ್ದಾರೆ.
ಮುಷ್ಕರವನ್ನು ಗುರುವಾರ ಮಧ್ಯಾಹ್ನ 2 ಗಂಟೆ ಒಳಗೆ ಸ್ಥಗಿತಗೊಳಿಸಿ ಕೆಲಸಕ್ಕೆ ತೆರಳಬೇಕು. ಇಲ್ಲದಿದ್ದರೆ ಕ್ರಮಕೈಗೊಳ್ಳಲಾಗುವುದು ಎಂದು ಮಮತಾ ಬ್ಯಾನರ್ಜಿ ಗಡುವು ವಿಧಿಸಿದ್ದರು.
ಕೋಲ್ಕತ್ತದ ಎನ್‌ಆರ್‌ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಸಾವಿಗೀಡಾದ ರೋಗಿಯೊಬ್ಬರ ಸಂಬಂಧಿಕರು ನಡೆಸಿದ ಹಲ್ಲೆ ಯಲ್ಲಿಇಬ್ಬರು ವೈದ್ಯರು ತೀವ್ರ ಗಾಯಗೊಂಡಿದ್ದರು. ಈ ಘಟನೆ ಬಳಿಕ, ಮಂಗಳವಾರದಿಂದ ವೈದ್ಯರು ಮುಷ್ಕರ ನಡೆಸುತ್ತಿದ್ದಾರೆ. ರಾಜಭವನದಲ್ಲಿ ವೈದ್ಯರ ತಂಡ ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಅವರನ್ನು ಭೇಟಿಯಾಗಿ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.
‘ಮುಖ್ಯಮಂತ್ರಿ ಅವರಿಂದ ಈ ರೀತಿಯ ಪ್ರತಿಕ್ರಿಯೆ ನಿರೀಕ್ಷಿಸಿರಲಿಲ್ಲ. ನಾವೇ ಅಪರಾಧಿಗಳು ಎನ್ನುವಂತೆ ಬಿಂಬಿಸಲಾಗುತ್ತಿದೆ’ ಎಂದು ವೈದ್ಯರು ದೂರಿದರು.
ಎಲ್ಲ ಮುಖ್ಯಮಂತ್ರಿಗಳ ಜತೆ ಚರ್ಚೆ: ವೈದ್ಯರಿಗೆ ಭದ್ರತೆ ಒದಗಿಸುವ ಸಂಬಂಧಿಸಿದ ವಿಷಯವನ್ನು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಮಾಲೋಚನೆ ನಡೆಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.
ವೈದ್ಯರಿಗೆ ಸುರಕ್ಷಿತವಾದ ವಾತಾವರಣ ಕಲ್ಪಿಸುವುದು ಅಗತ್ಯ. ವೈದ್ಯರು ಸಮಾಜದ ಭಾಗವಾಗಿದ್ದಾರೆ ಎಂದು ಹೇಳಿದ್ದಾರೆ.
ಸಿಪಿಎಂ, ಬಿಜೆಪಿ ಷಡ್ಯಂತ್ರ
‘ಕಿರಿಯ ವೈದ್ಯರ ಮುಷ್ಕರ ರಾಜಕೀಯ ಪ್ರೇರಿತವಾಗಿದೆ. ಇದು ಸಿಪಿಎಂ ಮತ್ತು ಬಿಜೆಪಿಯ ಷಡ್ಯಂತ್ರ’ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
‘ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂರಾಜಕೀಯ ಪಕ್ಷಗಳು ಮುಷ್ಕರಕ್ಕೆ ಪ್ರಚೋದನೆ ನೀಡುತ್ತಿವೆ.ಈ ಘಟನೆಗೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಇವರಿಗೆ ಜಾಮೀನು ಸಹ ದೊರೆತಿಲ್ಲ.ರೋಗಿಗೆ ಚಿಕಿತ್ಸೆ ನೀಡಲು ನಿರ್ಲಕ್ಷವಹಿಸಿದ ಆರೋಪದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.