ಕೋಲ್ಕತ್ತ: ‘ನನ್ನ ಹೃದಯದ ಬಡಿತ ಇರುವವರೆಗೆ ಮತ್ತು ಧ್ವನಿಪೆಟ್ಟಿಗೆ ಎಷ್ಟು ದಿನ ಕೆಲಸಮಾಡುವುದೋ ಅಲ್ಲಿಯವರೆಗೆ ನಾನು ಬಿಜೆಪಿಯ ವಿರುದ್ಧ ಹೋರಾಡುತ್ತೇನೆ. ಗಾಯವಾಗಲಿ, ಯಾವುದೇ ಸಂಚಾಗಲಿ ನನ್ನನ್ನು ತಡೆಯಲಾರದು’ ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ.
ಪುರುಲಿಯಾದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಜಗತ್ತಿನ ಯಾವ ಸರ್ಕಾರವೂ ಮಾಡದಿರುವಷ್ಟು ಅಭಿವೃದ್ಧಿ ಕಾರ್ಯಗಳನ್ನು ನಮ್ಮ ಸರ್ಕಾರ ಮಾಡಿದೆ. ಅವರು (ಬಿಜೆಪಿ) ದೆಹಲಿಯಿಂದ ಎಷ್ಟೇ ನಾಯಕರನ್ನು ಕರೆತಂದರೂ ಇಲ್ಲಿ ಏನನ್ನೂ ಸಾಧಿಸಲಾರರು. ಸ್ವಲ್ಪ ದಿನ ಕಾಯ್ದು ನೋಡಿ, ನನ್ನ ಕಾಲು ಸರಿಯಾಗಲಿದೆ. ಆಮೇಲೆ ನಿಮ್ಮ ಕಾಲುಗಳು ಎಷ್ಟು ಮುಕ್ತವಾಗಿ ಬಂಗಾಳದಲ್ಲಿ ಓಡಾಡುತ್ತವೆ ಎಂಬುದನ್ನು ನೋಡುತ್ತೇನೆ’ ಎಂದರು.
ಕುಟುಂಬದವರ ಗತಿ ಏನು?: ‘ಮಮತಾ ಅವರು ತಮ್ಮ ಕಾಲುನೋವಿನ ಬಗ್ಗೆ ಮಾತನಾಡಿದ್ದಾರೆ, ಆದರೆ, ಪಶ್ಚಿಮ ಬಂಗಾಳದಲ್ಲಿ ಹತರಾಗಿರುವ ಬಿಜೆಪಿ ಕಾರ್ಯಕರ್ತರ ಕುಟುಂಬದವರ ನೋವು ಅವರಿಗೆ ಅರ್ಥವಾಗುತ್ತಿದೆಯೇ’ ಎಂದು ಕೇಂದ್ರದ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದ್ದಾರೆ.
‘ದೀದಿ, ನಿಮ್ಮ ಕಾಲಿನ ನೋವು ಬೇಗನೆ ವಾಸಿಯಾಗಲಿ ಎಂದು ನಾನು ಹಾರೈಸುತ್ತೇನೆ. ಆದರೆ, ಟಿಎಂಸಿ ಗೂಂಡಾಗಳ ದಾಳಿಯಿಂದ ಸತ್ತಿರುವ 130 ಮಂದಿ ಬಿಜೆಪಿ ಕಾರ್ಯಕರ್ತರ ತಾಯಂದಿರ ನೋವಿನ ಬಗ್ಗೆ ಏನು ಹೇಳುತ್ತೀರಿ? ಅವರ ನೋವನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ನೀವು ಮಾಡಿದ್ದೀರಾ’ ಎಂದು ರಾಣಿಬಂಧ್‌ನಲ್ಲಿ ಪ್ರಚಾರ ರ್‍ಯಾಲಿಯಲ್ಲಿ ಮಾತನಾಡುತ್ತಾ ಶಾ ಪ್ರಶ್ನಿಸಿದರು.
ಸರ್ಕಾರದ ಅಸಹಕಾರ: ‘ತಾಜ್‌ಪುರದಲ್ಲಿ ಬಂದರು ನಿರ್ಮಿಸುವ ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ಪಶ್ಚಿಮ ಬಂಗಾಳ ಸರ್ಕಾರ ಸಹಕಾರ ನೀಡಿರಲಿಲ್ಲ. ಅಷ್ಟೇ ಅಲ್ಲ, ಈ ಸರ್ಕಾರ ರಾಜ್ಯದಿಂದ ಒಂದು ಅಟೊಮೊಬೈಲ್ ಕಂಪನಿಯನ್ನು ಓಡಿಸಿತ್ತು’ ಎಂದು ಕೇಂದ್ರದ ಸಾರಿಗೆ ಸಚಿವ ನಿತಿನ್ ಗಡ್ಕರಿ ಆರೋಪಿಸಿದ್ದಾರೆ. ‘ಸಾರಿಗೆ ಸಚಿವನಾಗಿ ನಾನು ನಂದಿಗ್ರಾಮಕ್ಕೆ ಒಂದು ದೊಡ್ಡ ಅಟೊಮೊಬೈಲ್ ಕಂಪನಿಯನ್ನು ತರುವ ಪ್ರಯತ್ನ ಮಾಡಿದ್ದೆ. ಆದರೆ ಟಿಎಂಸಿ ಸರ್ಕಾರ ಅದನ್ನು ಓಡಿಸಿದೆ. ಬಂದರು ಸಚಿವನಾಗಿದ್ದ ಅವಧಿಯಲ್ಲಿ ರಾಜ್‌ಪುರ ಜಿಲ್ಲೆಯಲ್ಲಿ ಒಂದು ಬಂದರು ನಿರ್ಮಾಣದ ಯೋಜನೆಯನ್ನೂ ಹಾಕಿಕೊಂಡಿದ್ದೆ. ಅದಕ್ಕೆ ಸಹಕಾರ ನೀಡಲಿಲ್ಲ’ ಎಂದು ಎಗ್ರಾದಲ್ಲಿ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಮಾತನಾತನಾಡುತ್ತಾ ಅವರು ಹೇಳಿದರು.
ಮಮತಾ ನಾಮಪತ್ರ ತಿರಸ್ಕರಿಸಲು ಒತ್ತಾಯ
‘ಮಮತಾ ಅವರು ತಮ್ಮ ನಾಮಪತ್ರದ ಜತೆಗೆ ಸಲ್ಲಿಸಿರುವ ಮಾಹಿತಿಯಲ್ಲಿ, ಅವರ ವಿರುದ್ಧ ಇರುವ ಆರು ಅಪರಾಧ ಪ್ರಕರಣಗಳನ್ನು ಉಲ್ಲೇಖಿಸಿಲ್ಲ. ಆದ್ದರಿಂದ ಅವರ ನಾಮಪತ್ರವನ್ನು ತಿರಸ್ಕರಿಸಬೇಕು’ ಎಂದು ನಂದಿಗ್ರಾಮ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ಸುವೇಂದು ಅಧಿಕಾರಿ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
‘ಅಸ್ಸಾಂನಲ್ಲಿ ಅವರ ವಿರುದ್ಧ ದಾಖಲಾಗಿರುವ ಐದು ಪ್ರಕರಣಗಳು ಹಾಗೂ ಪಶ್ಚಿಮ ಬಂಗಾಳದಲ್ಲಿ ಸಿಬಿಐ ದಾಖಲಿಸುವ ಒಂದು ಪ್ರಕರಣದ ವಿವರಗಳನ್ನು ಅವರು ನಾಮಪತ್ರದ ಜತೆಗೆ ಸಲ್ಲಿಸಿದ ಮಾಹಿತಿಯಲ್ಲಿ ಒದಗಿಸಿಲ್ಲ’ ಎಂದು ಸುವೇಂದು ಹೇಳಿದ್ದಾರೆ. ಆದರೆ ಆ ಪ್ರಕರಣಗಳ ವಿವರಗಳನ್ನು ಅವರು ನೀಡಿಲ್ಲ.
‘ಮಮತಾ ಅವರ ನಾಮಪತ್ರ ತಿರಸ್ಕರಿಸುವಂತೆ ನಾನು ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದೇನೆ. ಅವರು ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾಯ್ದು ನೋಡುತ್ತೇನೆ. ಕಾನೂನು ಪ್ರಕಾರವೇ ಅವರು ನಡೆಯಬೇಕಾಗುತ್ತದೆ’ ಎಂದು ಸುವೇಂದು ಅವರು ಮಾಧ್ಯಮಪ್ರತಿನಿಧಿಗಳ ಜತೆ ಮಾತನಾಡುತ್ತಾ ಹೇಳಿದ್ದಾರೆ.
‘ಪ್ರಕರಣದ ಬಗ್ಗೆ ಗಮನ ಹರಿಸಲಾಗಿದೆ’ ಎಂದು ಚುನಾವಣಾ ಆಯೋಗದ ಅಧಿಕಾರಿ ಹೇಳಿದ್ದಾರೆ. ಇದಕ್ಕೆ ಟಿಎಂಸಿ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ತಮ್ಮ ಆಸ್ತಿಯ ವಿವರ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಕುರಿತ ಮಾಹಿತಿಯನ್ನು ಬಹಿರಂಗಪಡಿಸದಿರುವ ಅಭ್ಯರ್ಥಿಗಳ ನಾಮಪತ್ರವನ್ನು ಚುನಾವಣಾ ಅಧಿಕಾರಿಯು ತಿರಸ್ಕರಿಸಬಹುದು ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ 2018ರ ಮಾರ್ಚ್‌ನಲ್ಲಿ ನೀಡಿತ್ತು.
ಶಾ ರ್‍ಯಾಲಿ ರದ್ದು– ಟೀಕೆ
ಝರ್‌ಗ್ರಾಮದಲ್ಲಿ ಸೋಮವಾರ ನಡೆಯಬೇಕಾಗಿದ್ದ ಗೃಹಸಚಿವ ಅಮಿತ್ ಶಾ ಅವರ ಚುನಾವಣಾ ರ್‍ಯಾಲಿಯನ್ನು ತಾಂತ್ರಿಕ ಕಾರಣದಿಂದಾಗಿ ರದ್ದುಪಡಿಸಲಾಗಿತ್ತು. ಬದಲಿಗೆ, ಅವರ ಭಾಷಣವನ್ನು ವರ್ಚುವಲ್ ಮಾಧ್ಯಮದಲ್ಲಿ ಪ್ರಸಾರ ಮಾಡಲಾಯಿತು.
ಈ ಘಟನೆಯನ್ನು ಬಿಜೆಪಿ ವಿರುದ್ಧದ ಟೀಕೆಗೆ ಬಳಸಿಕೊಂಡ ಟಿಎಂಸಿ ಮುಖಂಡ ಅಭಿಷೇಕ್ ಬ್ಯಾನರ್ಜಿ, ‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ರ್‍ಯಾಲಿಗಳಲ್ಲಿ ಸೇರುವ ಜನರಿಗಿಂತ ಹೆಚ್ಚು ಜನರು ಚಹಾದ ಅಂಗಡಿಗಳ ಮುಂದೆ ಮತ್ತು ಜೆಸಿಬಿ ಕೆಲಸ ಮಾಡುವುದನ್ನು ನೋಡಲು ಸೇರಿರುತ್ತಾರೆ’ ಎಂದರು.
‘ಜನರು ಸೇರಿಲ್ಲ ಎಂಬ ಕಾರಣಕ್ಕೆ ಶಾ ಅವರ ರ್‍ಯಾಲಿಯನ್ನು ರದ್ದುಪಡಿಸಲಾಗಿದೆ. ನಮ್ಮಲ್ಲಿ ಮನವಿ ಮಾಡಿದ್ದಿದ್ದರೆ ನಾವೇ ಅವರ ರ್‍ಯಾಲಿಗೆ ಒಂದಿಷ್ಟು ಜನರನ್ನು ಕಳುಹಿಸಿಕೊಡುತ್ತಿದ್ದೆವು’ ಎಂದು ಮಮತಾ ಬ್ಯಾನರ್ಜಿ ಲೇವಡಿ ಮಾಡಿದ್ದಾರೆ.
ಚುನಾವಣಾ ಕಣದಲ್ಲಿ...
* ಬಹುಕೋಟಿ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ, ಮಮತಾ ಬ್ಯಾನರ್ಜಿ ಅವರ ಸೋದರಳಿಯ, ತೃಣಮೂಲ ಕಾಂಗ್ರೆಸ್‌ನ ಸಂಸದ ಅಭಿಷೇಕ್ ಬ್ಯಾನರ್ಜಿ ಅವರ ಸಂಬಂಧಿಕರನ್ನು ಸೋಮವಾರ ಸಿಬಿಐ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ
* ಟಿಕೆಟ್ ವಂಚಿತ ಟಿಎಂಸಿ ನಾಯಕಿ ದೇಬಶ್ರೀ ರಾಯ್ ಅವರು ಸೋಮವಾರ ಪಕ್ಷವನ್ನು ತ್ಯಜಿಸಿದ್ದಾರೆ. ಖ್ಯಾತ ನಟಿಯಾಗಿರುವ ಇವರು ಟಿಎಂಸಿಯಿಂದ ಎರಡು ಬಾರಿ ಶಾಸಕಿಯಾಗಿದ್ದರು. ‘ನಾನಿನ್ನು ನಟನೆಯ ಕಡೆಗೆ ಗಮನ ಹರಿಸುತ್ತೇನೆ, ಒಳ್ಳೆಯ ಪ್ರಸ್ತಾವ ಬಂದರೆ ಬೇರೆ ಪಕ್ಷವನ್ನು ಸೇರುವ ಬಗ್ಗೆಯೂ ಚಿಂತಿಸುವೆ’ ಎಂದು ಅವರು ಹೇಳಿದ್ದಾರೆ
* ಪಶ್ಚಿಮಬಂಗಾಳದ 3 ಮತ್ತು 4ನೇ ಹಂತದ ಚುನಾವಣೆಗೆ ಬಿಜೆಪಿ ಘೋಷಿಸಿರುವ ಅಭ್ಯರ್ಥಿಗಳ ಪಟ್ಟಿಗೆ ಅಸಮಾಧಾನ ವ್ಯಕ್ತಪಡಿಸಿರುವ ಪಕ್ಷದ ಕಾರ್ಯಕರ್ತರು, ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಅವರ ಕಾರು ತಡೆದು ಪ್ರತಿಭಟನೆ ನಡೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.