ಕೋಲ್ಕತ್ತ: ಇಲ್ಲಿನ ರಾಜಭವನದ ಮಹಿಳಾ ನೌಕರರೊಬ್ಬರು ರಾಜ್ಯಪಾಲ ಸಿ.ವಿ. ಆನಂದ ಬೋಸ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸೋಮವಾರ ಠಾಣೆಯೊಂದಕ್ಕೆ ದೂರು ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಕೋಲ್ಕತ್ತಕ್ಕೆ ಗುರುವಾರ ಬಂದಿಳಿದ ಸಂದರ್ಭದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಪಶ್ಚಿಮ ಬಂಗಾಳ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಇಂಬುಗೊಟ್ಟಿದೆ. ಮೋದಿ ಅವರು ರಾಜಭವನದಲ್ಲೇ ಗುರುವಾರ ರಾತ್ರಿ ಉಳಿದುಕೊಂಡಿದ್ದು, ಶುಕ್ರವಾರ ಅವರು ಮೂರು ಕಡೆ ರ‍್ಯಾಲಿ ನಡೆಸಲಿದ್ದಾರೆ.
ಮೇ 7 ಹಾಗೂ ಜೂನ್ 1ರ ಅವಧಿಯಲ್ಲಿ ಪಶ್ಚಿಮ ಬಂಗಾಳದ 42 ಲೋಕಸಭಾ ಕ್ಷೇತ್ರಗಳ ಪೈಕಿ 36ರಲ್ಲಿ ಚುನಾವಣೆ ನಡೆಯಲಿದೆ. ‘ರಾಜಭವನದಲ್ಲೇ ಮಹಿಳೆಗೆ ಸುರಕ್ಷಿತ ವಾತಾವರಣ ಇಲ್ಲ’ ಎಂಬ ವಿಷಯವನ್ನೇ ಈಗ ಆಡಳಿತದಲ್ಲಿರುವ ಟಿಎಂಸಿ ಪಕ್ಷವು ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ.
ಮಹಿಳೆಯು ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ರಾಜಭವನವು ಪ್ರಕಟಣೆ ಹೊರಡಿಸಿದೆ. ‘ಇದೊಂದು ಸಂಚು. ನನ್ನ ಹೆಸರಿಗೆ ಕಳಂಕ ತಂದು, ಯಾರಾದರೂ ಚುನಾವಣಾ ಲಾಭ ಪಡೆಯಬಹುದು ಎಂದುಕೊಂಡಿದ್ದರೆ ದೇವರು ಅಂತಹವರಿಗೆ ಒಳ್ಳೆಯದನ್ನು ಮಾಡಲಿ’ ಎಂದು ರಾಜ್ಯಪಾಲ ಸಿ.ವಿ. ಆನಂದ ಬೋಸ್ ಪ್ರಕಟಣೆಯಲ್ಲಿ ಪ್ರತಿಕ್ರಿಯಿಸಿದ್ದಾರೆ.
ಟಿಎಂಸಿ ಪಕ್ಷವನ್ನು ರಾಜ್ಯಪಾಲರು ಪದೇ ಪದೇ ಟೀಕಿಸುತ್ತಾರೆ. ಈ ಕಾರಣಕ್ಕೆ ಅವರು ಬಿಜೆಪಿ ಕೈಗೊಂಬೆ ಎಂದೇ ಟಿಎಂಸಿ ಹೇಳುತ್ತಾ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.