ADVERTISEMENT

ಜೋಡಿಗೆ ಥಳಿತ: ಮಮತಾ ಬ್ಯಾನರ್ಜಿ ರಾಜೀನಾಮೆಗೆ ಬಿಜೆಪಿ ಆಗ್ರಹ

ಸಾರ್ವಜನಿಕವಾಗಿ ಜೋಡಿಯನ್ನು ಥಳಿಸಿದ ವ್ಯಕ್ತಿಯ ಬಂಧನ

ಪಿಟಿಐ
Published 1 ಜುಲೈ 2024, 13:47 IST
Last Updated 1 ಜುಲೈ 2024, 13:47 IST
<div class="paragraphs"><p>ಜೋಡಿಯನ್ನು ಸಾರ್ವಜನಿಕವಾಗಿ ಥಳಿಸಿದ ಘಟನೆಯನ್ನು ಖಂಡಿಸಿ ಬಿಜೆಪಿ ಶಾಸಕಿ ಅಗ್ನಿಮಿತ್ರಾ ಪೌಲ್‌ ಸೇರಿದಂತೆ ಹಲವು ಬಿಜೆಪಿ ಶಾಸಕಿಯರು ಟಿಎಂಸಿ ಸರ್ಕಾರದ ವಿರುದ್ಧ ವಿಧಾನಸಭೆ ಆವರಣದಲ್ಲಿ&nbsp;ಸೋಮವಾರ ಪ್ರತಿಭಟನೆ ನಡೆಸಿದರು.</p></div>

ಜೋಡಿಯನ್ನು ಸಾರ್ವಜನಿಕವಾಗಿ ಥಳಿಸಿದ ಘಟನೆಯನ್ನು ಖಂಡಿಸಿ ಬಿಜೆಪಿ ಶಾಸಕಿ ಅಗ್ನಿಮಿತ್ರಾ ಪೌಲ್‌ ಸೇರಿದಂತೆ ಹಲವು ಬಿಜೆಪಿ ಶಾಸಕಿಯರು ಟಿಎಂಸಿ ಸರ್ಕಾರದ ವಿರುದ್ಧ ವಿಧಾನಸಭೆ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

   

ಪಿಟಿಐ ಚಿತ್ರ

ನವದೆಹಲಿ/ಕೋಲ್ಕತ್ತ: ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಜೋಡಿಯೊಂದನ್ನು ವ್ಯಕ್ತಿಯೊಬ್ಬರು ಸಾರ್ವಜನಿಕವಾಗಿ ಥಳಿಸಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಪಶ್ಚಿಮ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಛೋ‍ಪ್ರಾ ಎಂಬಲ್ಲಿ ಈ ಘಟನೆ ನಡೆದಿದೆ.

ADVERTISEMENT

ಘಟನೆ ಕುರಿತು ವಿರೋಧ ಪಕ್ಷಗಳು ಟಿಎಂಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ರಾಜ್ಯಪಾಲ ಸಿ.ವಿ. ಆನಂದ ಬೋಸ್‌ ಅವರು ಈ ಬಗ್ಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ವರದಿ ನೀಡುವಂತೆ ಕೇಳಿದ್ದಾರೆ. ‘ಮಮತಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಬಿಜೆಪಿ ಸೋಮವಾರ ಆಗ್ರಹಿಸಿದೆ.

ವಿಡಿಯೊದಲ್ಲಿ ಏನಿದೆ?:

ರ‌ಸ್ತೆಯ ಮಧ್ಯೆ ಹಲವು ಜನರ ಎದುರು ವ್ಯಕ್ತಿಯೊಬ್ಬರು ಜೋಡಿಯೊಂದನ್ನು ಥಳಿಸುತ್ತಿರುವ ದೃಶ್ಯಗಳು ವಿಡಿಯೊದಲ್ಲಿವೆ. ಮಹಿಳೆಯು ನೋವಿನಿಂದ ನರಳುತ್ತಿರುವ ದೃಶ್ಯಗಳೂ ಇವೆ. ಬಿದಿರಿನ ಕೋಲಿನಿಂದ ಜೋಡಿಯನ್ನು ಥಳಿಸುತ್ತಿದ್ದ ವ್ಯಕ್ತಿಯು ಮಹಿಳೆಯನ್ನು ಎಳೆದಾಡಿದ, ಆಕೆಯ ಕೂದಲನ್ನು ಎಳೆದ ದೃಶ್ಯಗಳೂ ವಿಡಿಯೊದಲ್ಲಿ ಇದೆ.

ಘಟನೆಯು ಕುರಿತು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜೋಡಿಯನ್ನು ಸಾರ್ವಜನಿಕವಾಗಿ ಥಳಿಸಿರುವ ವ್ಯಕ್ತಿಯನ್ನು ತಾಜ್ಮುಲ್‌ ಅಲಿಯಾಸ್ ಜೆಸಿಬಿ ಎಂದು ಗುರುತಿಸಲಾಗಿದೆ. ಈತ ಸ್ಥಳೀಯ ಟಿಎಂಸಿ ಮುಖಂಡ ಹಾಗೂ ಛೋಪ್ರಾದ ಶಾಸಕ ಹಾಮಿದುಲ್‌ ರೆಹಮಾನ್‌ ಅವರ ಆಪ್ತ ಎಂದೂ ಬಿಜೆಪಿ ಆರೋಪಿಸುತ್ತಿದೆ. ಬಿಜೆಪಿ ಆರೋಪವನ್ನು ಶಾಸಕ ಹಾಮಿದುಲ್‌ ತಳ್ಳಿಹಾಕಿದ್ದಾರೆ.

‘ಈತ ಹಾಮಿದುಲ್‌ ಅವರ ಆಪ್ತ ಮತ್ತು ಈತ ತ್ವರಿತವಾಗಿ ನ್ಯಾಯ ಕೊಡುವ ‘ಇನ್ಸಾಫ್‌’ (ನ್ಯಾಯ) ಸಭಾಗಳನ್ನು ನಡೆಸುತ್ತಾನೆ’ ಎಂದು ಬಿಜೆಪಿಯ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವೀಯ ಅವರು ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ.

ವಿಡಿಯೊ ಹರಿದಾಡುತ್ತಿದ್ದಂತೆ ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದಾರೆ ಮತ್ತು ತಾಜ್ಮುಲ್‌ ಅವರನ್ನು ಬಂಧಿಸಿದ್ದಾರೆ. ‘ಜೋಡಿಗಳು ನಮ್ಮ ರಕ್ಷಣೆಯಲ್ಲಿದ್ದಾರೆ’ ಎಂದೂ ಪೊಲೀಸರು ಹೇಳಿದ್ದಾರೆ. ಕಾಂಗ್ರೆಸ್‌ನ ಅಧೀರ್‌ರಂಜನ್‌ ಚೌಧರಿ ಸೇರಿದಂತೆ ಸಿಪಿಎಂನ ಹಲವು ನಾಯಕರು ಸರ್ಕಾರದ ವಿರುದ್ಧ ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದು, ಘಟನೆಯನ್ನು ಖಂಡಿಸಿದ್ದಾರೆ.

‘ತಾಲಿಬಾನಿ ಶೈಲಿಯ ನ್ಯಾಯದಾನ ಸಮರ್ಥಿಸುತ್ತಿದ್ದಾರೆ’

‘ಇದು ನಿಜಕ್ಕೂ ನಾಚಿಕೆಗೇಡಿನ ವಿಷಯ. ಮುಖ್ಯಮಂತ್ರಿ ಮಮತಾ ಅವರು ಇನ್ನೂವರೆಗೂ ಒಂದು ಮಾತನ್ನೂ ಆಡಿಲ್ಲ. ಮಮತಾ ಅವರು ಮಹಿಳೆಯಾಗಿದ್ದುಕೊಂಡು ಘಟನೆ ಕುರಿತು ಮೊದಲು ಅವರು ಮಾತನಾಡಬೇಕಿತ್ತು ಮತ್ತು ಘಟನೆಯನ್ನು ಖಂಡಿಸಬೇಕಿತ್ತು’ ಎಂದು ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೌರವ್‌ ಬಾಟಿಯಾ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಇಂಥ ನ್ಯಾಯದಾನವು ಇಸ್ಲಾಂ ದೇಶಗಳಲ್ಲಿ ನಡೆಯುತ್ತದೆ ಎಂದು ಶಾಸಕ ಹಾಮಿದುಲ್‌ ಅವರು ಹೇಳುವ ಮೂಲಕ ಘಟನೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸಂವಿಧಾನದಲ್ಲಿ ನಂಬಿಕೆ ಇಡುವ ನಮ್ಮಂಥಾ ದೇಶದಲ್ಲಿ ತಾಲಿಬಾನಿ ಶೈಲಿಯ ನ್ಯಾಯದಾನವನ್ನು ಅವರು ಸಮರ್ಥಿಸಿಕೊಂಡಿದ್ದಾರೆ’ ಎಂದರು.

‘ಮಲ್ಲಿಕಾರ್ಜುನ ಖರ್ಗೆ ಸೋನಿಯಾ ಗಾಂಧಿ ಹಾಗೂ ಲಾಲು ಪ್ರಸಾದ್‌ ಅವರಂಥ ವಿರೋಧ ಪಕ್ಷದ ನಾಯಕರು ಎಲ್ಲಿದ್ದಾರೆ? ಇವರ್‍ಯಾರು ಈ ಘಟನೆ ಕುರಿತು ಇದುವರೆಗೂ ಹೇಳಿಕೆಯನ್ನು ನೀಡಿಲ್ಲ. ಹಾಗಾದರೆ ಇವರೆಲ್ಲಾ ಭಾರತದ ಸಂವಿಧಾನವನ್ನು ನಂಬುತ್ತಾರೋ ಅಥವಾ ರಾಜ್ಯದಲ್ಲಿ ಟಿಎಂಸಿ ಸರ್ಕಾರವು ತಾಲಿಬಾನಿ ಶೈಲಿಯ ಕಾನೂನನ್ನು ಹೇರುತ್ತಿರುವುದನ್ನು ಸಮರ್ಥಿಸುತ್ತಾರೋ’ ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.