ಕೋಲ್ಕತ್ತ: ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಕಿರಿಯ ವೈದ್ಯರ ಬೇಡಿಕೆ ಬೆನ್ನಲ್ಲೇ, ಆರ್.ಜಿ. ಕರ್ ಸರ್ಕಾರಿ ಆಸ್ಪತ್ರೆಯ ನಾಲ್ಕು ಹಿರಿಯ ಅಧಿಕಾರಿಗಳನ್ನು ಪಶ್ಚಿಮ ಬಂಗಾಳ ಸರ್ಕಾರ ವರ್ಗಾವಣೆ ಮಾಡಿದೆ.
ಕಿರಿಯ ವೈದ್ಯರ ಬೇಡಿಕೆ ಮೇರೆಗೆ, ಕಲ್ಕತ್ತ ರಾಷ್ಟ್ರೀಯ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಪ್ರಾಂಶುಪಾಲರಾಗಿ ವರ್ಗಾವಣೆಯಾಗಿದ್ದ ಆರ್.ಜಿ ಕರ್ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಡಾ. ಸಂದೀಪ್ ಘೋಷ್ ಅವರನ್ನು ತೆಗೆದು ಹಾಕಲಾಗಿದೆ ಎಂದು ರಾಜ್ಯ ಆರೋಗ್ಯ ಕಾರ್ಯದರ್ಶಿ ಎನ್.ಎಸ್ ನಿಗಮ್ ಹೇಳಿದ್ದಾರೆ.
ಆರ್.ಜಿ ಕರ್ ಕಾಲೇಜು ಹಾಗೂ ಆಸ್ಪತ್ರೆಯ ಮೂವರು ಹಿರಿಯ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವಿವಿಧ ಆರೋಗ್ಯ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಆರ್.ಜಿ ಕರ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಮತ್ತು ಉಪ ಪ್ರಾಂಶುಪಾಲರಾದ ಪ್ರೊ. ಡಾ. ಬುಲ್ ಬುಲ್ ಮುಖ್ಯೋಪಾಧ್ಯಾಯ ಅವರ ಸ್ಥಾನಕ್ಕೆ ತಕ್ಷಣಕ್ಕೆ ಜಾರಿಗೆ ಬರುವಂತೆ ಸಪ್ತರ್ಶಿ ಚಟರ್ಜಿ ಅವರನ್ನು ನೇಮಕ ಮಾಡಲಾಗಿದೆ.
ಪ್ರಾಂಶುಪಾಲ ಸುಹೃತಾ ಪೌಲ್ ಅವರ ಸ್ಥಾನಕ್ಕೆ ಮನಸ್ ಕುಮಾರ್ ಬಂಡೋಪಾಧ್ಯಾಯ ಅವರನ್ನು ನೇಮಕ ಮಾಡಲಾಗಿದೆ. ಎದೆ ಔಷಧ ವಿಭಾಗದ ಮುಖ್ಯಸ್ಥ ಅರುಣಾಭ ದತ್ತ ಚೌಧರಿ ಅವರನ್ನು ಮಾಲ್ಡಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ವರ್ಗಾಯಿಸಲಾಗಿದೆ.
ಕಿರಿಯ ವೈದ್ಯರ ಬೇಡಿಕೆಯಂತೆ, ನಾವು ಕೆಲವು ಬದಲಾವಣೆಗಳನ್ನು ತರುತ್ತಿದ್ದೇವೆ. ಭದ್ರತಾ ವ್ಯವಸ್ಥೆಗಳನ್ನು ಸಹ ಹೆಚ್ಚಿಸಲಾಗಿದೆ ಎಂದು ನಿಗಮ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.