ADVERTISEMENT

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ: ನಂದಿಗ್ರಾಮದಿಂದ ಮಮತಾ ಬ್ಯಾನರ್ಜಿ ಸ್ಪರ್ಧೆ

ಒಂದು ಕಾಲದ ಆಪ್ತ ಸುವೇಂದು ಅಧಿಕಾರಿಗೆ ನೇರ ಸವಾಲೆಸೆದ ಟಿಎಂಸಿ ಮುಖ್ಯಸ್ಥೆ

ಪಿಟಿಐ
Published 5 ಮಾರ್ಚ್ 2021, 19:31 IST
Last Updated 5 ಮಾರ್ಚ್ 2021, 19:31 IST
ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದರು –ಪಿಟಿಐ ಚಿತ್ರ
ತೃಣಮೂಲ ಕಾಂಗ್ರೆಸ್‌ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದರು –ಪಿಟಿಐ ಚಿತ್ರ   

ಕೋಲ್ಕತ್ತ: ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಮತ್ತು ಎಡಪಕ್ಷಗಳು, ಕಾಂಗ್ರೆಸ್‌ ಹಾಗೂ ಇಂಡಿಯನ್‌ ಸೆಕ್ಯುಲರ್ ಫ್ರಂಟ್‌ ಅನ್ನು ಒಳಗೊಂಡ ಮೈತ್ರಿಕೂಟ ಪಶ್ಚಿಮ ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಿಸಿವೆ.

ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು 291 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದಾರೆ. ತಾನು ಈ ಬಾರಿ ನಂದಿಗ್ರಾಮ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಅವರು ಘೋಷಿಸಿದ್ದಾರೆ. ಆ ಮೂಲಕ ಒಂದು ಕಾಲದಲ್ಲಿ ತಮ್ಮ ಆತ್ಮೀಯರಾಗಿದ್ದು, ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿರುವ ಸುವೇಂದು ಅಧಿಕಾರಿ ಅವರಿಗೆ ನೇರವಾಗಿ ಸವಾಲೆಸೆದಿದ್ದಾರೆ.

ಮಮತಾ ಅವರು ಈಗ ಪ್ರತಿನಿಧಿಸುತ್ತಿರುವ ಭವಾನಿಪುರದಿಂದ ಸೋವನ್‌ದೇಬ್‌ ಚಟ್ಟೋಪಾಧ್ಯಾಯ ಅವರು ಕಣಕ್ಕಿಳಿಯಲಿದ್ದಾರೆ. ಮಿತ್ರಪಕ್ಷವಾದ ಗೂರ್ಖಾ ಜನಮುಕ್ತಿ ಮೋರ್ಚಾಗೆ (ಜಿಜೆಎಂ) ಮೂರು ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದ್ದಾರೆ.

ADVERTISEMENT

‘20ಕ್ಕೂ ಹೆಚ್ಚು ಹಾಲಿ ಶಾಸಕರಿಗೆ ಈ ಬಾರಿ ಟಿಕೆಟ್‌ ನಿರಾಕರಿಸಲಾಗಿದೆ. ಅವರಲ್ಲಿ ಕೆಲವರು ಆನಾರೋಗ್ಯದ ನಿಮಿತ್ತ ಸ್ಪರ್ಧಿಸದಿರಲು ತೀರ್ಮಾನಿಸಿದ್ದಾರೆ ಎಂದು ಹೇಳಿದ್ದಾರೆ. ಯುವಕರು, ಅಲ್ಪಸಂಖ್ಯಾತರು, ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡಿದ್ದೇವೆ. ಸುಮಾರು 50 ಮಂದಿ ಮಹಿಳೆಯರು, 42 ಮಂದಿ ಮುಸ್ಲಿಮರು, ಪರಿಶಿಷ್ಟ ಜಾತಿಯ 79 ಮಂದಿ ಹಾಗೂ ಪರಿಶಿಷ್ಟ ಪಂಗಡದ ಸುಮಾರು 17 ಮಂದಿಗೆ ಟಿಕೆಟ್‌ ನೀಡಲಾಗಿದೆ ಎಂದು ಮಮತಾ ತಿಳಿಸಿದ್ದಾರೆ.

‘ಇದು ಟಿಎಂಸಿ ಈವರೆಗೆ ಎದುರಿಸಿರುವ ಚುನಾವಣೆಗಳಲ್ಲೇ ಅತ್ಯಂತ ಸುಲಭದ ಚುನಾವಣೆ ಆಗಲಿದೆ. ನಾವು ಹೆಚ್ಚಿನ ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯುವುದು ಖಚಿತ. ಅಧಿಕಾರಕ್ಕೆ ಮರಳಿದ ಬಳಿಕ ವಿಧಾನ ಪರಿಷತ್‌ ರಚಿಸಿ, ಹಿರಿಯ ಮತ್ತು ಅನುಭವಿ ನಾಯಕರಿಗೆ ಅಲ್ಲಿ ಅವಕಾಶ ಕಲ್ಪಿಸುತ್ತೇವೆ. ಆದರೆ, 80 ವರ್ಷ ವಯಸ್ಸು ಮೀರಿದವರಿಗೆ ಸ್ಥಾನ ಕಲ್ಪಿಸಲಾಗದು’ ಎಂದು ಮಮತಾ ಹೇಳಿದ್ದಾರೆ.

‘ನೀವು ಎಷ್ಟು ಬೇಕೋ ಅಷ್ಟು ಕೇಂದ್ರೀಯ ಪಡೆಗಳನ್ನು ನೇಮಿಸಿ, ಚುನಾವಣೆಯಲ್ಲಿ ಟಿಎಂಸಿಯೇ ಗೆಲ್ಲಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಸಚಿವ ಅಮಿತ್‌ ಶಾ ಅವರಿಗೆ ಮಮತಾ ಸವಾಲು ಹಾಕಿದ್ದಾರೆ.

ಮೈತ್ರಿಕೂಟದ ಪಟ್ಟಿ ಬಿಡುಗಡೆ: ಎಡಪಕ್ಷಗಳು, ಕಾಂಗ್ರೆಸ್‌ ಹಾಗೂ ಹೊಸದಾಗಿ ರಚನೆಯಾಗಿರುವ ಇಂಡಿಯನ್‌ ಸೆಕ್ಯುಲರ್ ಫ್ರಂಟ್‌ (ಐಎಸ್‌ಎಫ್‌) ಮೈತ್ರಿಕೂಟವೂ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿವೆ.

ಮೈತ್ರಿಗೆ ಅನುಗುಣವಾಗಿ ತಾವು ಸ್ಪರ್ಧಿಸುವ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರುಗಳನ್ನು ಆಯಾ ಪಕ್ಷಗಳು ಘೋಷಿಸಲಿವೆ. ಎಡಪಕ್ಷಗಳು ಮಾತ್ರ ಶುಕ್ರವಾರ ಅಭ್ಯರ್ಥಿಗಳ ಹೆಸರು ಘೋಷಿಸಿದ್ದು, ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಕಾಂಗ್ರೆಸ್‌ ಹಾಗೂ ಐಎಸ್‌ಎಫ್ ಹೇಳಿವೆ.

‘ಮಮತಾ ಅವರು ಸ್ಪರ್ಧಿಸಲಿರುವ ನಂದಿಗ್ರಾಮ ಕ್ಷೇತ್ರವೂ ಸೇರಿದಂತೆ ಕೆಲವು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಒಮ್ಮತದ ತೀರ್ಮಾನವಾಗಿಲ್ಲ’ ಎಂದು ಎಡಪಕ್ಷಗಳ ಅಧ್ಯಕ್ಷ ಬಿಮನ್‌ ಬೋಸ್‌ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮಾರ್ಚ್‌ 27ರಿಂದ ಆರಂಭವಾಗಿ ಏಪ್ರಿಲ್‌ 29ರವರೆಗೆ ಒಟ್ಟು ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ.

ಅಂತಿಮವಾಗದ ಬಿಜೆಪಿ ನಿರ್ಧಾರ

ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿ ಅವರ ನಿಕಟವರ್ತಿಯಾಗಿದ್ದ ಮತ್ತು ಟಿಎಂಸಿಯ ಪ್ರಭಾವಿ ನಾಯಕರಾಗಿದ್ದ ಸುವೇಂದು ಅಧಿಕಾರಿ ಅವರು ಟಿಎಂಸಿ ತ್ಯಜಿಸಿದ ನಂತರ, ‘ಮಮತಾ ಅವರ ವಿರುದ್ಧ ನೇರ ಹೋರಾಟಕ್ಕೆ ನಾನು ಸಿದ್ಧ’ ಎಂದಿದ್ದರು.

2007ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಭೂಸ್ವಾಧೀನ ವಿರೋಧಿ ಹೋರಾಟದಲ್ಲಿ ಈ ಇಬ್ಬರು ನಾಯಕರು ನಿರ್ಣಾಯಕ ಪಾತ್ರ ವಹಿಸಿದ್ದರು. ಅಂದಿನಿಂದಲೂ ಈ ಭಾಗದಲ್ಲಿ ತಮ್ಮ ಪ್ರಭಾವವನ್ನು ಉಳಿಸಿಕೊಂಡಿದ್ದಾರೆ. ಆ ಕಾರಣಕ್ಕಾಗಿಯೇ ಸುವೇಂದು ಅವರನ್ನು ಬಿಜೆಪಿಯು ತನ್ನತ್ತ ಸೆಳೆದುಕೊಂಡಿದೆ. ಆದರೆ ಪಕ್ಷವು ಅವರನ್ನೇ ನಂದಿಗ್ರಾಮದಿಂದ ಕಣಕ್ಕಿಳಿಸುವುದೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

***

ಮಾರ್ಚ್‌ 9ರಂದು ನಾವು ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದ್ದೇವೆ. 10ರಂದು ನಂದಿಗ್ರಾಮ ಕ್ಷೇತ್ರದ ಸ್ಪರ್ಧಿಯಾಗಿ ನಾಮಪತ್ರ ಸಲ್ಲಿಸುತ್ತೇನೆ

- ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ

***

ವಿರೋಧ– ಪ್ರತಿಭಟನೆ

ಮಮತಾ ಅವರು ಟಿಎಂಸಿ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ, ರಾಜ್ಯದ ಕೆಲವೆಡೆ ಪರ್ತಿಭಟನೆಗಳು ನಡೆದಿವೆ. ಟಿಕೆಟ್‌ ವಂಚಿತ ನಾಯಕರು ಪಕ್ಷದ ನಾಯಕಿ ವಿರುದ್ಧ ಆಕ್ರೋಶ, ಬೇಸರ ವ್ಯಕ್ತಪಡಿಸಿದ್ದಾರೆ.

ಹಿಂದೆ ಮಮತಾ ಅವರ ನಿಕಟವರ್ತಿ ಹಾಗೂ ನಾಲ್ಕು ಅವಧಿಗೆ ಶಾಸಕಿಯಾಗಿದ್ದ ಸೊನಾಲಿ ಗುಹಾ ಅವರು ತನಗೆ ಟಿಕೆಟ್‌ ನೀಡಿಲ್ಲ ಎಂದು ತಿಳಿದ ಕೂಡಲೇ ಕಣ್ಣೀರಿಟ್ಟಿದ್ದಾರೆ. ‘ನಾನು ಆರಂಭದಿಂದಲೇ ಮಮತಾ ದೀದಿಯ ಜತೆಗಿದ್ದೆ. ದೇವರು ಆಕೆಗೆ ಒಳ್ಳೆಯ ಬುದ್ಧೀಯನ್ನು ನೀಡಲಿ’ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
‘ಪಕ್ಷವನ್ನು ಅತಿಯಾಗಿ ಪ್ರೀತಿಸಿದವರನ್ನು ಕಡೆಗಣಿಸಲಾಗಿದೆ. ಜನರ ಅಭಿಪ್ರಾಯ ಪಡೆದು ಮುಂದಿನ ಹೆಜ್ಜೆಗಳನ್ನಿಡುತ್ತೇನೆ’ ಎಂದು ಮಾಜಿ ಶಾಸಕ ಅರಬುಲ್‌ ಇಸ್ಲಾಂ ಅವರು ಕಣ್ಣೀರಿಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.