ಕೋಲ್ಕತ್ತ: ರಾಜ್ಯದ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ದ್ವಿತೀಯ ಭಾಷೆಯಾಗಿ ಬಂಗಾಳಿಯನ್ನು ಕಡ್ಡಾಯವಾಗಿ ಕಲಿಸುವ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ, ಬಂಗಾಳಿ ಭಾಷೆ ಕಡ್ಡಾಯದ ಜತೆಗೆ, ಖಾಸಗಿ ಶಾಲೆಗಳ ವಿರುದ್ಧ ಬರುತ್ತಿರುವ ದೂರುಗಳ ಪರಿಶೀಲನೆಗಾಗಿ ಶಿಕ್ಷಣ ಆಯೋಗ ರಚನೆಗೂ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ದ್ವಿತೀಯ ಭಾಷೆಯಾಗಿ ಬಂಗಾಳಿ ಕಲಿಯಲು ಅವಕಾಶವಿದೆ. ಆದರೆ ಬಹಳಷ್ಟು ವಿದ್ಯಾರ್ಥಿಗಳು ಹಿಂದಿ ಅಥವಾ ಇತರ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದರಿಂದ ಬಂಗಾಳಿಯನ್ನು ಸರಿಯಾಗಿ ಕಲಿಯುತ್ತಿಲ್ಲ. ಇದಕ್ಕಾಗಿ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲೂ ಬಂಗಾಳಿಯನ್ನು ಕಡ್ಡಾಯವಾಗಿ ಕಲಿಸುವಂತೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
‘ಆರೋಗ್ಯ ಆಯೋಗದಂತೆಯೇ ಶಿಕ್ಷಣ ಆಯೋಗವನ್ನೂ ರಚಿಸಲಾಗುವುದು. ಇದಕ್ಕೆ ನಿವೃತ್ತ ನ್ಯಾಯಾಧೀಶರನ್ನು ಮುಖ್ಯಸ್ಥರನ್ನಾಗಿ ನೇಮಿಸಲು ಸಂಪುಟ ಸಭೆ ನಿರ್ಧರಿಸಿದೆ’ ಎಂದು ತಿಳಿಸಿದರು.
‘ಕೋವಿಡ್ ಸಂದರ್ಭದಲ್ಲಿ ಖಾಸಗಿ ಶಾಲೆಗಳ ವರ್ತನೆ, ಶುಲ್ಕ ಹೆಚ್ಚಳ ಕುರಿತು ಬಹಳಷ್ಟು ದೂರುಗಳು ಬಂದಿದ್ದವು. ಅಲ್ಲಿ ಕಲಿಸುತ್ತಿರುವ ಪಠ್ಯಕ್ರಮ ಮತ್ತು ಪರೀಕ್ಷಾ ವ್ಯವಸ್ಥೆಯ ಕುರಿತೂ ಅಹವಾಲುಗಳು ಸಲ್ಲಿಕೆಯಾಗಿದ್ದವು. ಇವೆಲ್ಲವುಗಳನ್ನು ಅಸ್ಥಿತ್ವಕ್ಕೆ ಬರಲಿರುವ ನೂತನ ಸಮಿತಿ ಪರಿಶೀಲಿಸಲಿದೆ’ ಎಂದು ವಿವರಿಸಿದರು.
ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಬಂಗಾ ಪೊಖ್ಖೋ ಸಂಘಟನೆ, ಮುಖ್ಯಮಂತ್ರಿ ಹಾಗೂ ಶಿಕ್ಷಣ ಮಂತ್ರಿ ಬಾರ್ತ್ಯಾ ಬಸು ಅವರನ್ನು ಅಭಿನಂದಿಸಿದೆ.
‘ಬಹಳಾ ದಿನಗಳಿಂದ ಬಂಗಾಳದ ಜನರು ಈ ಒಂದು ಆದೇಶಕ್ಕಾಗಿ ಕಾಯುತ್ತಿದ್ದರು’ ಎಂದು ಸಂಘಟನೆಯ ಕಾರ್ಯದರ್ಶಿ ಕೌಶಿಕ್ ಮೈತಿ ಹೇಳಿದರು.
ರಾಜ್ಯದಲ್ಲಿ ಹೊಸದಾಗಿ ಏಳು ಜಿಲ್ಲೆಗಳನ್ನು ರಚಿಸುವ ಕುರಿತು ಅಧ್ಯಯನ ನಡೆಸಿ ಮೂರು ತಿಂಗಳೊಳಗಾಗಿ ವರದಿ ಸಲ್ಲಿಸಲು ಸಮಿತಿ ರಚಿಸುವ ಕುರಿತೂ ಸಂಪುಟ ಸಭೆ ನಿರ್ಧಾರ ತೆಗೆದುಕೊಂಡಿತು.
ನಾಡಿಯಾ, ಬಿರಭೂಮ್, ಮಾಲ್ಡಾ, ಉತ್ತರ 24 ಪರಗಣಾ, ದಕ್ಷಿಣ 24 ಪರಗಣ, ಪೂರ್ವ ಹಾಗೂ ಪಶ್ಚಿಮ ಮಿಡ್ನಾಪುರ ಜಿಲ್ಲೆಗಳನ್ನು ವಿಭಜಿಸಿ ಏಳು ಹೊಸ ಜಿಲ್ಲೆಗಳ ರಚನೆ ಪ್ರಸ್ತಾವನೆಗೆ ಸಂಪುಟ ಸಭೆ ಅಸ್ತು ಎಂದಿತು. ಸಮಿತಿಯಲ್ಲಿ ಸಚಿವರಾದ ಫರ್ಹಾದ್ ಹಕೀಮ್, ಅರೂಪ್ ಬಿಸ್ವಾಸ್ ಹಾಗೂ ಮಲಾಯ್ ಘಟಕ್, ಮುಖ್ಯ ಕಾರ್ಯದರ್ಶಿ ಎಚ್.ಕೆ.ದ್ವಿವೇದಿ ಹಾಗೂ ಇಲ್ಲಾ ಇಲಾಖೆಗಳ ಕಾರ್ಯದರ್ಶಿಗಳು ಇರಲಿದ್ದಾರೆ.
ಇದರೊಂದಿಗೆ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನೂ ಒಳಗೊಂಡು ಸರ್ಕಾರದ ಎಲ್ಲಾ ಆದೇಶಗಳನ್ನು 15 ದಿನಗಳ ಒಳಗಾಗಿ ಜಾರಿಗೊಳಿಸಬೇಕು. ನಂತರ ಅದು ಅನುಷ್ಠಾನಗೊಂಡಿರುವ ಕುರಿತು ವರದಿ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಾಕೀತು ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.