ನವದೆಹಲಿ: ದೀಪಾವಳಿ ಹಬ್ಬದ ವೇಳೆ ದೆಹಲಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಏರಿಕೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಪಟಾಕಿ ನಿಷೇಧ ಜಾರಿಗೆ ಹಾಗೂ ನಿಯಮ ಉಲ್ಲಂಘಿಸಿದವರ ವಿರುದ್ಧ ಕೈಗೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಎಂದು ದೆಹಲಿ ಸರ್ಕಾರ ಹಾಗೂ ದೆಹಲಿ ಪೊಲೀಸ್ ಆಯುಕ್ತರಿಗೆ ಸೂಚಿಸಿದೆ.
ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಖಾ ಹಾಗೂ ಅಗಸ್ಟೀನ್ ಜಾರ್ಜ್ ಮಸೀಹ್ ಅವರಿದ್ದ ನ್ಯಾಯ ಪೀಠವು ಸುದ್ದಿ ಪತ್ರಿಕೆಗಳ ವರದಿಯನ್ನು ಉಲ್ಲೇಖಿಸಿ, ಕೋರ್ಟ್ ತೀರ್ಪನ್ನು ಉಲ್ಲಂಘಿಸಿರುವುದಾಗಿ ಆಕ್ರೋಶ ವ್ಯಕ್ತಪಡಿಸಿತು.
‘ದೆಹಲಿಯಲ್ಲಿ ಪಟಾಕಿ ಮಾರಾಟ ನಿಷೇಧ, ಉತ್ಪಾದನೆ ಹಾಗೂ ಸಿಡಿಸಲು ನಿಷೇಧ ಹೇರಿರುವ ಪ್ರತಿಯೊಂದು ಆದೇಶಗಳನ್ನು ನಮ್ಮ ಮುಂದೆ ಇಡಬೇಕು’ ಎಂದು ನ್ಯಾಯಪೀಠ ಹೇಳಿತು. ಇದಕ್ಕೆ ಒಂದು ವಾರಗಳ ಕಾಲಾವಕಾಶ ನೀಡಿದೆ.
ವಿಜ್ಞಾನ ಮತ್ತು ಪರಿಸರ ಕೇಂದ್ರದ ವರದಿಯನ್ನುಉಲ್ಲೇಖಿಸಿದ ಸುಪ್ರೀಂ ಕೋರ್ಟ್, 2022 ಹಾಗೂ 2023ರ ದೀಪಾವಳಿಯ ಅವಧಿಗಿಂತ ಈ ಬಾರಿ ಹೆಚ್ಚಿನ ಮಾಲಿನ್ಯ ಉಂಟಾಗಿದೆ ಎನ್ನುವುದನ್ನು ಗಮನಿಸಿತು.
ಅಲ್ಲದೆ ಅಕ್ಟೋಬರ್ ತಿಂಗಳ ಕೊನೆಯ 10 ದಿನಗಳಲ್ಲಿ ಕೃಷಿ ತ್ಯಾಜ್ಯ ಸುಡುವ ಘಟನೆಗಳ ಬಗ್ಗೆ ನವೆಂಬರ್ 14ರ ಒಳಗೆ ವರದಿ ನೀಡಬೇಕು ಎಂದು ಪಂಜಾಬ್ ಹಾಗೂ ಹರಿಯಾಣ ಸರ್ಕಾರಗಳಿಗೆ ಸೂಚಿಸಿದೆ.
ಪಟಾಕಿ ನಿಷೇಧವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. 2025ರ ದೀಪಾವಳಿ ವೇಳೆಗೆ ಪಟಾಕಿ ನಿಷೇಧವನ್ನು ಜಾರಿಗೊಳಿಸಲು ‘ಏನಾದರೂ ಮಾಡಬೇಕು’ ಎಂದು ನ್ಯಾಯಪೀಠ ಹೇಳಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.