ADVERTISEMENT

ಏನಿದು ಇ–ಸಿಗರೇಟು? ಬಳಕೆಯ ಅಪಾಯಗಳೇನು? ನಿಷೇಧ ಮಾಡಿದ್ದೇಕೆ?

ಆರ್‌.ಜೆ.ಯೋಗಿತಾ
Published 19 ಸೆಪ್ಟೆಂಬರ್ 2019, 13:59 IST
Last Updated 19 ಸೆಪ್ಟೆಂಬರ್ 2019, 13:59 IST
ಇ–ಸಿಗರೇಟ್
ಇ–ಸಿಗರೇಟ್   

ಕೇಂದ್ರ ಸಚಿವ ಸಂಪುಟಇ–ಸಿಗರೇಟ್‌ ಉತ್ಪಾದನೆ, ಆಮದು, ರಫ್ತು, ಮಾರಾಟ ಹಾಗೂ ಅವುಗಳ ಜಾಹೀರಾತುನಿಷೇಧಿಸುವ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಿದೆ. ಹಾಗಾದರೆ ಏನಿದು ಇ–ಸಿಗರೇಟ್‌? ಇದರಿಂದ ಅಪಾಯವಿದೆಯೇ? ಎನ್ನುವ ಪ್ರಶ್ನೆಗಳಿಗೆಇಲ್ಲಿದೆ ಉತ್ತರ.

ಎಲೆಕ್ಟ್ರಾನಿಕ್‌ ನಿಕೋಟಿನ್‌ ಡೆಲಿವರಿ ಸಿಸ್ಟಂ ಅನ್ನೇ ಎಲೆಕ್ಟ್ರಾನಿಕ್‌ ಸಿಗರೇಟ್‌ ಅಥವಾ ಇ–ಸಿಗರೇಟ್ ಅಥವಾ ವೇಪರ್‌ ಸಿಗರೇಟ್‌ ಎಂದು ಕರೆಯಲಾಗುತ್ತದೆ. ಕ್ಯಾನ್ಸರ್‌ ಕಾರಕವಾದ ತಂಬಾಕನ್ನು ಇದು ಸುಡುವುದಿಲ್ಲ. ಅದರ ಬದಲಾಗಿ, ಬ್ಯಾಟರಿ ನೆರವಿನಿಂದ ದ್ರವ ರಾಸಾಯನಿಕವನ್ನು (ನಿಕೋಟಿನ್, ಪ್ರೊಪಿಲಿನ್ ಗ್ಲೈಕಾಲ್‌, ಭಿನ್ನ ರುಚಿ ನೀಡುವ ವಸ್ತುಗಳು) ಹೊಗೆಯನ್ನಾಗಿ ಪರಿವರ್ತಿಸುತ್ತದೆ.

ಸಾಮಾನ್ಯ ಸಿಗರೇಟ್‌, ಸಿಗಾರ್‌, ಸಿಗರೇಟ್‌ ಪೈಪ್‌ನ ಆಕಾರವನ್ನೇ ಇ–ಸಿಗರೇಟ್‌ ಹೊಂದಿದೆ. ಇತ್ತೀಚೆಗೆ ವಿಜಲ್‌, ಪೆನ್‌ ಮಾದರಿಯ ಇ–ಸಿಗರೇಟ್‌ ಕಾಣಬಹುದು. ಬ್ಯಾಟರಿ, ಆಟೊಮೈಜರ್‌ ಮತ್ತು ನಿಕೋಟಿನ್‌ ಕಾರ್ಟ್ರಿಜ್ ಎಂಬ ಮೂರು ಭಾಗಗಳನ್ನು ಹೊಂದಿರುವ ಇದು ಬಳಸಿ ಬಿಸಾಕುವ, ಮರುಬಳಕೆ ಮಾಡುವ ಎರಡೂ ರೀತಿಯಲ್ಲೂ ಲಭ್ಯವಿದೆ.

ADVERTISEMENT

ಹೇಗೆ ಕಾರ್ಯನಿರ್ವಹಿಸುತ್ತದೆ?

ಇ–ಸಿಗರೇಟ್‌ನ ಕಾರ್ಯಸಾಮರ್ಥ್ಯಅದರ ಬ್ಯಾಟರಿ ಶಕ್ತಿ ಮೇಲೆ ಅವಲಂಬಿತವಾಗಿರುತ್ತದೆ. ಯಾವ ರೀತಿಯ ಬ್ಯಾಟರಿ, ಯಾವ ರಾಸಾಯನಿಕ ಹಾಗೂ ಬಳಕೆಯ ರೀತಿಯನ್ನು ಆಧರಿಸಿಇ–ಸಿಗರೇಟ್‌ ಕಾರ್ಯಸಾಮರ್ಥ್ಯವನ್ನುವರ್ಣಿಸಲಾಗುತ್ತದೆ.

ಇ–ಸಿಗರೇಟನ್ನು ಬಾಯಿಯಲ್ಲಿ ಇಟ್ಟು ಉಸಿರು ತೆಗೆದುಕೊಂಡಾಗ ಈ ಸಾಧನ ಸಕ್ರಿಯಗೊಳ್ಳುತ್ತದೆ. ಆಟೊಮೈಜರ್‌ ಕಾರ್ಟ್ರಿಜ್‌ನಲ್ಲಿನ ದ್ರಾವಣವನ್ನು ಬಿಸಿ ಮಾಡುತ್ತದೆ. ಅದರಿಂದ ಹೊಗೆ ಬರಲು ಶುರುವಾಗುತ್ತದೆ. ಬಿಸಿ ನೀರಿನಿಂದ ಹಬೆ ತೆಗೆದುಕೊಳ್ಳುವ ರೀತಿ ಅಥವಾ ಅಸ್ತಮಾದವರು ಇನ್‌ಹೇಲರ್‌ ಬಳಸುವ ಹಾಗೆ ಇದು ಕೆಲಸ ಮಾಡುತ್ತದೆ.

ಇದರಲ್ಲಿ ನಿಕೋಟಿನ್‌ ದ್ರಾವಣ ಇರುವುದರಿಂದ ಸಿಗರೇಟ್ ಸೇದಿದ ಅನುಭವವನ್ನು ನೀಡುತ್ತದೆ ಎನ್ನುವುದು ಬಳಕೆದಾರರ ಮಾತು. ಆಟೊಮೈಜರ್‌, ಕಾರ್ಟೊಮೈಜರ್‌, ಕ್ಲಿಯರ್ಟೊಮೈಜರ್‌...ಹೀಗೆ ಭಿನ್ನ ತಂತ್ರಜ್ಞಾನ ಬಳಸುವ ಇ–ಸಿಗರೇಟುಗಳು ಮಾರುಕಟ್ಟೆಯಲ್ಲಿವೆ.

ಇ–ಸಿಗರೇಟ್‌ ಹುಟ್ಟು

ಹರ್ಬರ್ಟ್‌ ಎ. ಗಿಲ್ಬರ್ಟ್‌ ಎಂಬಾತ ಇ–ಸಿಗರೇಟ್‌ನ ಜನಕ. 1963ರಲ್ಲಿ ಗಿಲ್ಬರ್ಟ್‌ ಇದಕ್ಕೆ ಪೇಟೆಂಟ್‌ಗೆ ಅರ್ಜಿ ಹಾಕಿದ್ದು, 1965ರಲ್ಲಿ ಅವರಿಗೆ ಪೇಟೆಂಟ್‌ ಲಭಿಸಿತು. ತಂಬಾಕು ಸಹಿತ ಸಿಗರೇಟಿಗೆ ಪರ್ಯಾಯವಾಗಿ ಇದನ್ನು ಅನ್ವೇಷಿಸಲಾಯಿತು.

ಇ–ಸಿಗರೇಟ್‌ನಿಂದ ಅಪಾಯವಿದೆಯೇ?

ಖಂಡಿತಾ ಇದೆ.ಇ–ಸಿಗರೇಟಿನಲ್ಲಿ ನಿಕೋಟಿನ್‌ ಹೊರಹಾಕುವ ಪ್ರಮಾಣವು ಒಂದು ಬ್ರಾಂಡ್‌ನಿಂದ ಮತ್ತೊಂದು ಬ್ರಾಂಡ್‌ಗೆ ಭಿನ್ನ. ಹಾನಿಕಾರಕ ರಾಸಾಯನಿಕಗಳನ್ನು ನಿಕೋಟಿನ್‌ನೊಂದಿಗೆ ಬಳಸುವುದರಿಂದ ಆರೋಗ್ಯಕ್ಕೆ ಹಾನಿಕಾರ.

ಭಾರತದಲ್ಲಿ ಇ–ಸಿಗರೇಟ್‌ ನಿಷೇಧ‌

ಸಾಂಪ್ರದಾಯಿಕ ಸಿಗರೇಟ್‌ನಲ್ಲಿ ಹೊಗೆ ಬರುವುದರಿಂದ ವ್ಯಸನಿಗಳಲ್ಲದವರು ಅದರಿಂದ ತಪ್ಪಿಸಿಕೊಳ್ಳಬಹುದು. ಪ್ಯಾಸಿವ್‌ ಸ್ಮೋಕಿಂಗ್‌ಗೆ (ಬೇರೆಯವರು ಸೇದಿದ ಸಿಗರೇಟಿನ ಹೊಗೆಯನ್ನು ಇಷ್ಟವಿಲ್ಲದೆ ಎಳೆದುಕೊಳ್ಳುವುದು)ಹೆಚ್ಚು ಅವಕಾಶವಿರುವುದಿಲ್ಲ. ಆದರೆ, ಇ–ಸಿಗರೇಟ್‌ ವಿಚಾರದಲ್ಲಿ ಹಾಗಾಗುವುದಿಲ್ಲ. ಇಲ್ಲಿ ಹೊಗೆ ಬರುತ್ತಿದೆ ಎನ್ನವುದು ತಿಳಿಯುವುದೇ ಇಲ್ಲ ಮತ್ತು ವಿವಿಧ ಫ್ಲೇವರ್‌ ಸೇರಿಸುವುದರಿಂದ ಸಿಗರೇಟ್‌ ಅಭ್ಯಾಸ ಇಲ್ಲದಿರುವವರು ಇದರ ಹೊಗೆಯನ್ನು ಸೇವಿಸುವಂತಾಗುತ್ತದೆ. ಇದರಿಂದ ಪ್ಯಾಸಿವ್‌ ಸ್ಮೋಕಿಂಗ್‌ ಹೆಚ್ಚಾಗುತ್ತದೆ.

ಇ–ಸಿಗರೇಟ್‌ ಉತ್ಪಾದನೆ, ಆಮದು, ರಫ್ತು, ಮಾರಾಟ ಹಾಗೂ ಅವುಗಳ ಜಾಹೀರಾತು ನಿಷೇಧಿಸುವ ಸುಗ್ರೀವಾಜ್ಞೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದ್ದರಿಂದ ಭಾರತದಲ್ಲಿ ಇ–ಸಿಗರೇಟ್‌ ನಿಷೇಧಗೊಂಡಿದೆ.

ಸುಗ್ರೀವಾಜ್ಞೆಯಲ್ಲಿ ಏನಿದೆ?
* ಮೊದಲ ಬಾರಿಗೆ ನಿಯಮ ಉಲ್ಲಂಘಿಸುವವರಿಗೆ ₹1 ಲಕ್ಷ ದಂಡ, 1 ವರ್ಷದವರೆಗೆ ಜೈಲು
* ಸತತ ಉಲ್ಲಂಘನೆಗೆ 3 ವರ್ಷದ ತನಕ ಜೈಲು, ₹5 ಲಕ್ಷ ದಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.