ADVERTISEMENT

ಫಡಣವೀಸ್ ವಿಚಾರದಲ್ಲಿ ಅನಿರೀಕ್ಷಿತವಾದದ್ದು ಏನೂ ನಡೆದಿಲ್ಲ: ಚಂದ್ರಕಾಂತ್ ಪಾಟೀಲ್

ಪಿಟಿಐ
Published 1 ಜುಲೈ 2022, 15:36 IST
Last Updated 1 ಜುಲೈ 2022, 15:36 IST
ಚಂದ್ರಕಾಂತ್ ಪಾಟೀಲ್ ಹಾಗೂ ದೇವೇಂದ್ರ ಫಡಣವೀಸ್ (ಪಿಟಿಐ ಚಿತ್ರ)
ಚಂದ್ರಕಾಂತ್ ಪಾಟೀಲ್ ಹಾಗೂ ದೇವೇಂದ್ರ ಫಡಣವೀಸ್ (ಪಿಟಿಐ ಚಿತ್ರ)   

ಮುಂಬೈ: ದೇವೇಂದ್ರ ಫಡಣವೀಸ್ ಉಪಮುಖ್ಯಮಂತ್ರಿ ಆಗಿರುವುದು ಅನಿರೀಕ್ಷಿತವಲ್ಲ ಎಂದು ಬಿಜೆಪಿಯ ಮಹಾರಾಷ್ಟ್ರ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಶುಕ್ರವಾರ ಹೇಳಿದ್ದಾರೆ.

ಗುರುವಾರ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ, ಶಿವಸೇನಾ ಬಂಡಾಯ ನಾಯಕ ಏಕನಾಥ ಶಿಂಧೆ ನೂತನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಫಡಣವೀಸ್ ಘೋಷಿಸಿದ್ದರು. ತಾವು ಸರ್ಕಾರದ ಭಾಗವಾಗಿರುವುದಿಲ್ಲ ಎಂದೂ ಹೇಳಿದ್ದರು. ಆದರೆ, ಬಳಿಕ ಉಪಮುಖ್ಯಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ್ದರು. ಹೈಕಮಾಂಡ್ ಸೂಚನೆ ಮೇರೆಗೆ ಅವರು ಉಪಮುಖ್ಯಮಂತ್ರಿಯಾಗಿದ್ದಾರೆ ಎನ್ನಲಾಗಿತ್ತು.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಚಂದ್ರಕಾಂತ್ ಪಾಟೀಲ್, ‘ನಿನ್ನೆ ನಡೆದ ಬೆಳವಣಿಗೆಯಿಂದ ಅನೇಕರಿಗೆ ಆಘಾತವಾಗಿದೆ ಎಂಬುದು ನನಗೆ ತಿಳಿದಿದೆ. ಆದರೆ, ದೇವೇಂದ್ರ ಫಡಣವೀಸ್ ವಿಚಾರದಲ್ಲಿ ಅನಿರೀಕ್ಷಿತವಾದದ್ದು ಏನೂ ನಡೆದಿಲ್ಲ’ ಎಂದು ಹೇಳಿದ್ದಾರೆ.

‘ಹಿಂದುತ್ವ ಸಿದ್ಧಾಂತವನ್ನು ಮುಂದಿಟ್ಟುಕೊಂಡು ಶಿಂಧೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಬೆಂಬಲಿಸಲು ಬಿಜೆಪಿ ನಿರ್ಧರಿಸಿತ್ತು. ಆದರೆ, ಶಿಂಧೆ ಅವರೇ ಫಡಣವೀಸ್ ಸಂಪುಟ ಸೇರಬೇಕೆಂದು ಮನವಿ ಮಾಡಿದರು. ಹೀಗಾಗಿ ಫಡಣವೀಸ್ ದೆಹಲಿ ನಾಯಕರ ಅನುಮತಿ ಕೋರಿದರು. ಈ ಹಿಂದೆ ತಮ್ಮ ಕೈಕೆಳಗೆ ಕೆಲಸ ಮಾಡಿದ್ದವರ ಅಧೀನದಲ್ಲಿ ಕಾರ್ಯನಿರ್ವಹಿಸಲು ವಿಶಾಲ ಹೃದಯವಿರಬೇಕಾಗುತ್ತದೆ’ ಎಂದು ಪಾಟೀಲ್ ಹೇಳಿದ್ದಾರೆ.

2014–2019ರ ಅವಧಿಯಲ್ಲಿ ಬಿಜೆಪಿ–ಶಿವಸೇನಾ ಸರ್ಕಾರದಲ್ಲಿ ಫಡಣವೀಸ್ ಮುಖ್ಯಮಂತ್ರಿಯಾಗಿದ್ದಾಗ ಶಿಂಧೆ ಸಚಿವರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.