ADVERTISEMENT

'ವಿಷವಾಗಿದ್ದರೆ ಏನು ಗತಿ?': ಉತ್ತರ ಪ್ರದೇಶ ಪೊಲೀಸರು ಕೊಟ್ಟ ಚಹಾ ಕುಡಿಯದ ಅಖಿಲೇಶ್

ಪಿಟಿಐ
Published 8 ಜನವರಿ 2023, 13:47 IST
Last Updated 8 ಜನವರಿ 2023, 13:47 IST
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ (ಪಿಟಿಐ ಚಿತ್ರ)
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ (ಪಿಟಿಐ ಚಿತ್ರ)   

ಲಖನೌ: ಉತ್ತರ ಪ್ರದೇಶ ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ತಮಗೆ ನೀಡಿದ ಚಹಾ ವಿಷ ಮಿಶ್ರಿತವಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿರುವ ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್‌ ಯಾದವ್‌, ಸೇವಿಸಲು ನಿರಾಕರಿಸಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಎಸ್‌ಪಿ ಮನೀಶ್‌ ಜಗನ್‌ ಅಗರವಾಲ್‌ ಎನ್ನುವವರನ್ನು ಇಂದು ಬಂಧಿಸಲಾಗಿದೆ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಎಸ್‌ಪಿ ಕಾರ್ಯಕರ್ತರು ಪೊಲೀಸ್‌ ಪ್ರಧಾನ ಕಚೇರಿ ಎದುರು ಜಮಾಯಿಸಿ, ಜಗನ್ ಅವರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಚಾರವಾಗಿ ಕಾರ್ಯಕರ್ತರೊಂದಿಗೆ ಪೊಲೀಸ್‌ ಪ್ರಧಾನ ಕಚೇರಿಗೆ ಆಗಮಿಸಿದ್ದ ಅಖಿಲೇಶ್‌ ಯಾದವ್‌ ಅವರಿಗೆ ಪೊಲೀಸರು ಚಹಾ ನೀಡಿದರು. ಆದರೆ, ಅದನ್ನು ಎಸ್‌ಪಿ ನಾಯಕ ತಿರಸ್ಕರಿಸಿದರು. ಈ ಸಂದರ್ಭದ ವಿಡಿಯೊಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. 'ನಾನು ಈ ಸ್ಥಳದಲ್ಲಿ ಚಹಾ ಕುಡಿಯುವುದಿಲ್ಲ. ಹೊರಗಿನಿಂದ ತರಿಸಿಕೊಳ್ಳುತ್ತೇನೆ. ನೀವು ಕೊಡುತ್ತಿರುವ ಚಹಾ ವಿಷವಾಗಿದ್ದರೆ ಏನು ಗತಿ?' ಎಂದಿರುವುದು ವಿಡಿಯೊದಲ್ಲಿದೆ. ಹಾಗೆಯೇ, ಅಕ್ಕಪಕ್ಕದಲ್ಲಿ ಯಾವುದಾದರೂ ಚಹಾ ಅಂಗಡಿ ತೆರೆದಿದೆಯೇ ನೋಡುವಂತೆ ಕಾರ್ಯಕರ್ತರೊಬ್ಬರಿಗೆ ಹೇಳಿದ್ದಾರೆ.

ADVERTISEMENT

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಯಾದವ್‌, ತಾವು ಭೇಟಿ ನೀಡಿದ ಸಂದರ್ಭದಲ್ಲಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳು ಇರಲಿಲ್ಲ. ನಮ್ಮ ಮಾತುಗಳನ್ನು ಕೇಳಲು ಪೊಲೀಸ್ ಪ್ರಧಾನ ಕಚೇರಿಯಲ್ಲೇ ಯಾರೊಬ್ಬರೂ ಇರಲಿಲ್ಲ ಎಂದರೆ ರಾಜ್ಯದ ಉಳಿದ ಭಾಗದ ಪರಿಸ್ಥಿತಿಯನ್ನು ಉಹಿಸಿಕೊಳ್ಳಿ ಎಂದು ಕಿಡಿಕಾರಿದ್ದಾರೆ.

ಅಖಿಲೇಶ್‌ ಹೇಳಿಕೆಗೆ ಉತ್ತರ ಪ್ರದೇಶ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್‌ ಕುಮಾರ್‌ ಅವರು ನಂತರ ಪ್ರತಿಕ್ರಿಯೆ ನೀಡಿದ್ದಾರೆ. 'ಭಾನುವಾರ ಆದ ಕಾರಣ ಅಗತ್ಯಕ್ಕೆ ತಕ್ಕಷ್ಟು ಸಿಬ್ಬಂದಿ ಕಚೇರಿಯಲ್ಲಿದ್ದರು' ಎಂದಿದ್ದಾರೆ.

ಪೊಲೀಸರು ಕೊಟ್ಟ ಚಹಾ ಸೇವಿಸಲು ನಿರಾಕರಿಸಿದ್ದಕ್ಕೆ ಅಖಿಲೇಶ್‌ ಅವರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.