ನವದೆಹಲಿ: ‘ವಿವಿಧ ದೇಶಗಳ ಮಾಜಿ ಅಧ್ಯಕ್ಷರು ಮತ್ತು ಮಾಜಿ ಪ್ರಧಾನ ಮಂತ್ರಿಗಳ ಗುಂಪು ಪುಸ್ತಾಪಿಸಿರುವ ‘ಬಿಲಿಯನೇರ್ ತೆರಿಗೆ’ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರ ನಿಲುವು ಏನು? ಈ ಕುರಿತು ಜಿ20 ಸಭೆಯಲ್ಲಿ ಚರ್ಚೆಗೆ ಬಂದಾಗ ಭಾರತ ಯಾವ ನಿಲುವು ತಾಳಲಿದೆ’ ಎಂದು ಕಾಂಗ್ರೆಸ್ ಶುಕ್ರವಾರ ಪ್ರಶ್ನಿಸಿದೆ.
‘ಜಗತ್ತಿನಾದ್ಯಂತ ಕೋಟ್ಯಧಿಪತಿಗಳು ತಮ್ಮ ನ್ಯಾಯಯುತವಾದ ತೆರಿಗೆಯನ್ನು ಪಾವತಿಸಬೇಕು ಎಂಬ ಒಮ್ಮತದ ಕೂಗು ಹೆಚ್ಚುತ್ತಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಈ ವರ್ಷ ಜಿ20 ಅಧ್ಯಕ್ಷತೆ ವಹಿಸಿಕೊಂಡಿರುವ ಬ್ರೆಜಿಲ್ ದೇಶದಿಂದ ಈ ಪ್ರಸ್ತಾವ ಬಂದಿದೆ. ಫ್ರಾನ್ಸ್, ಸ್ಪೇನ್, ದಕ್ಷಿಣ ಆಫ್ರಿಕಾ ಮತ್ತು ಜರ್ಮನಿ ಅದಕ್ಕೆ ಅನುಮೋದನೆ ನೀಡಿವೆ. ಜಗತ್ತು ಈ ಬಿಲಿಯನೇರ್‌ಗಳ ಮೇಲೆ ಶೇ 2ರಷ್ಟು ಸಂಪತ್ತಿನ ತೆರಿಗೆ ವಿಧಿಸುವತ್ತ ಸಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
‘ಭಾರತವು 167 ಡಾಲರ್ ಬಿಲಿಯನೇರ್‌ಗಳನ್ನು ಹೊಂದಿದೆ. ಅವರ ಮೇಲಿನ ಶೇ 2ರಷ್ಟು ಸಂಪತ್ತಿನ ತೆರಿಗೆಯಿಂದ ವಾರ್ಷಿಕ 1.5 ಲಕ್ಷ ಕೋಟಿಗಳನ್ನು ಸಂಗ್ರಹಿಸಬಹುದಾಗಿದ್ದು, ಅದು ನಮ್ಮ ಜಿಡಿಪಿಯ ಸುಮಾರು ಶೇ 0.5ರಷ್ಟಾಗುತ್ತದೆ. ಇದನ್ನು ದೇಶದಲ್ಲಿನ ಶಾಲೆಗಳು, ಆಸ್ಪತ್ರೆಗಳು, ನವೀಕರಿಸಬಹುದಾದ ಇಂಧನ ಮತ್ತು ಭವಿಷ್ಯದಲ್ಲಿ ಅನೇಕ ಅಗತ್ಯ ಹೂಡಿಕೆಗಳಿಗೆ ಪಾವತಿಸಬಹುದಾಗಿದೆ’ ಎಂದು ಅವರು ವಿವರಿಸಿದ್ದಾರೆ.
‘ಬಿಲಿಯನೇರ್ ತೆರಿಗೆ’ ಕುರಿತು ‘ಜೈವಿಕವಲ್ಲದ ಪ್ರಧಾನ ಮಂತ್ರಿ’ಯ ನಿಲುವು ಏನು? ರಿಯೊ ಡಿ ಜನೈರೊದಲ್ಲಿ ನಡೆಯಲಿರುವ ಜಿ20 ಸಭೆಯಲ್ಲಿ ಚರ್ಚೆಗೆ ಬಂದಾಗ ಭಾರತ ಯಾವ ನಿಲುವು ವ್ಯಕ್ತಪಡಿಸುತ್ತದೆ’ ಎಂದು ಅವರು ಕೇಳಿದ್ದಾರೆ.
ಜಾಗತಿಕವಾಗಿ ಈ ಕುರಿತ ತೆರಿಗೆಯನ್ನು ಬೆಂಬಲಿಸುವಂತೆ ಆಗ್ರಹಿಸಿ ವಿವಿಧ ದೇಶಗಳ ಮಾಜಿ ಅಧ್ಯಕ್ಷರು ಮತ್ತು ಮಾಜಿ ಪ್ರಧಾನಿಗಳು ವಿಶ್ವದ 20 ದೊಡ್ಡ ಆರ್ಥಿಕ ದೇಶಗಳ ಪ್ರಸ್ತುತ ನಾಯಕರಿಗೆ ಬಹಿರಂಗ ಪತ್ರ ಬರೆದಿದ್ದಾರೆ ಎಂದು ರಮೇಶ್ ಅವರು ಮಾಧ್ಯಮ ವರದಿಯನ್ನು ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.