ಬೆಂಗಳೂರು: ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿ ಗುರುವಾರ ಮುಂಜಾನೆ ಜನರನ್ನು ಪ್ರಜ್ಞೆ ತಪ್ಪಿ ಕುಸಿದು ಬೀಳುವಂತೆ ಮಾಡಿದ, ಶಕ್ತಿ ಕುಂದಿಸಿ, ಉಸಿರು ಬಿಗಿ ಹಿಡಿಸಿದ ರಾಸಾಯನಿಕ ಸ್ಟೈರೀನ್. ಜೀವಿಗಳಿಗೆ ವಿಷಕಾರಿಯಾಗಿರುವ ಅನಿಲ ಸೋರಿಕೆಯು 11 ಜನರ ಸಾವಿಗೆ ಕಾರಣವಾಯಿತು. ಎಲ್‌ಜಿ ಪಾಲಿಮರ್ಸ್ ಕಂಪನಿಯ ಸುತ್ತಲಿನ ಐದು ಕಿ.ಮೀ ವಿಸ್ತೀರ್ಣದ ವರೆಗೂ ಪ್ರಭಾವ ಬೀರಿದ್ದು, ಸಾವಿರಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದರು.
ಗಾಳಿಯೊಂದಿಗೆ ಬೆರೆತ ಸ್ಟೈರೀನ್ ಅನಿಲ ಮನುಷ್ಯರ ಅಥವಾ ಪ್ರಾಣಿಗಳ ದೇಹ ಸೇರುತ್ತಿದ್ದಂತೆ ನರ ವ್ಯವಸ್ಥೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಗಂಟಲು, ಕಣ್ಣು ಹಾಗೂ ಚರ್ಮದಲ್ಲಿ ಉರಿ ಕಾಣಿಸಿಕೊಳ್ಳುತ್ತದೆ ಎಂದು ಎನ್‌ಡಿಆರ್‌ಎಫ್ ಪ್ರಧಾನ ನಿರ್ದೇಶಕ ಎಸ್.ಎನ್.ಪ್ರಧಾನ್ ಹೇಳಿದ್ದಾರೆ. ಸ್ಟೈರೀನ್ ಸುಲಭವಾಗಿ ಹೊತ್ತು ಉರಿಯಬಲ್ಲದಾಗಿದೆ ಹಾಗೂ ಸುಡುತ್ತಿದ್ದಂತೆ ವಿಷಕಾರಿ ಅನಿಲವನ್ನು ಹೊಮ್ಮಿಸುತ್ತದೆ.
ದೀರ್ಘಾವಧಿ ವರೆಗೂ ಸ್ಟೈರೀನ್ ಪ್ರಭಾವಕ್ಕೆ ಒಳಗಾದರೆ ಕ್ಯಾನ್ಸರ್‌ಗೆ ಕಾರಣವಾಗಬಹುದಾಗಿದೆ.
ಸ್ಟೈರೀನ್‌ನಿಂದ ಉಂಟಾದ ಅನಿಲ ಉಸಿರಾಡುತ್ತಿದ್ಧಂತೆ ತಲೆತಿರುಗು ಹಾಗೂ ವಾಕರಿಕೆ ಬರುವಂತಾಗುತ್ತದೆ. ಅಂತಹ ವ್ಯಕ್ತಿಗಳಿಗೆ ಕೂಡಲೇ ಚಿಕಿತ್ಸೆ ದೊರೆಯಬೇಕಾಗುತ್ತದೆ. ಅಮೆರಿಕದ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಸ್ಟೈರೀನ್ ರಾಸಾಯನಿಕವನ್ನು ದ್ರವ ರೂಪದಲ್ಲಿ ಪಾಲಿಸ್ಟಿರೀನ್ ಪ್ಲಾಸ್ಟಿಕ್, ಫೈಬರ್ ಗ್ಲಾಸ್‌ಗಳು, ರಬ್ಬರ್ ಹಾಗೂ ಲ್ಯಾಟೆಕ್ಸ್ ತಯಾರಿಕೆಗೆ ಬಳಸಲಾಗುತ್ತದೆ. ನೈಸರ್ಗಿಕವಾಗಿ ಕೆಲವು ಹಣ್ಣುಗಳು, ತರಕಾರಿಗಳು, ಮಾಂಸ ಹಾಗೂ ಪಾನೀಯಗಳಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಸ್ಟೈರೀನ್ ಅಂಶವಿರುತ್ತದೆ.
ಇನ್ಸ್ಯುಲೇಷನ್, ಪೈಪ್‌ಗಳು, ಆಟೊಮೊಬೈಲ್ ಬಿಡಿ ಭಾಗಗಳು, ಪ್ರಿಂಟಿಂಗ್ ಕಾರ್ಟ್ರಿಡ್ಜ್‌ಗಳು, ಕಾಪಿ ಮೆಷಿನ್ ಟೋನರ್, ಫುಡ್ ಕಂಟೇನರ್‌ಗಳು, ಪ್ಯಾಕೇಜಿಂಗ್ ಮೆಟಿರಿಯಲ್, ಕಾರ್ಪೆಟ್ ಬ್ಯಾಕಿಂಗ್, ಶೂಗಳು, ಆಟಿಕೆಗಳು, ವ್ಯಾಕ್ಸ್ ಹಾಗೂ ಪಾಲಿಶ್ ತಯಾರಿಕೆಯಲ್ಲಿ ಸ್ಟೈರೀನ್ ಬಳಸಲಾಗುತ್ತದೆ. ಸಿಗರೇಟ್‌ನಿಂದ ಹಾಗೂ ವಾಹನಗಳು ಉಗುಳುವ ಹೊಗೆಯಲ್ಲಿ ಸ್ಟೈರೀನ್ ಅಂಶವಿರುತ್ತದೆ.
ದಕ್ಷಿಣ ಕೊರಿಯಾದ ಬ್ಯಾಟರಿ ತಯಾರಿಕಾ ಕಂಪನಿ ಎಲ್‌ಜಿ ಕೆಮಿಕಲ್ ಲಿಮಿಟೆಡ್, ವಿಶಾಖಪಟ್ಟದ ಎಲ್‌ಜಿ ಪಾಲಿಮರ್ಸ್ ಕಂಪನಿಯ ಒಡೆತನ ಹೊಂದಿದೆ. ವಿಶಾಖಪಟ್ಟಣ ನಗರದಿಂದ ಸುಮಾರು 14 ಕಿ.ಮೀ. ದೂರದಲ್ಲಿ ಕಂಪನಿ ಇದೆ. 1961ರಲ್ಲಿ ಸ್ಥಾಪನೆಯಾಗಿದ್ದ ಹಿಂದುಸ್ತಾನ್ ಪಾಲಿಮರ್ಸ್ ಮಾಲಿಕತ್ವದ ಕಂಪನಿಯನ್ನು ಎಲ್‌ಜಿ ಕೆಮಿಕಲ್ಸ್ 1997ರ ಜುಲೈನಲ್ಲಿ ಸ್ವಾಧೀನ ಪಡಿಸಿಕೊಂಡಿದೆ. ನಂತರದಲ್ಲಿ ಎಲ್‌ಜಿ ಪಾಲಿಮರ್ಸ್ ಇಂಡಿಯಾ ಪ್ರೈಮೇಟ್ ಲಿಮಿಡೆಡ್ ಎಂದು ಹೆಸರು ಬದಲಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದೆ. ಇದಕ್ಕೂ ಮುನ್ನ 1978ರಲ್ಲಿ ಯುಬಿ ಗ್ರೂಪ್‌ನ ಮೆಕ್ ಡುವೆಲ್ ಆ್ಯಂಡ್ ಕಂಪನಿ ಜತೆ ವಿಲೀನವಾಗಿತ್ತು.
ಕಂಪನಿ ವೆಬ್‌ಸೈಟ್ ಪ್ರಕಾರ, ಪ್ರಸ್ತುತ ಎಲ್‌ಜಿ ಪಾಲಿಮರ್ಸ್ ಘಟಕದಲ್ಲಿ ಪಾಲಿಸ್ಟಿರೀನ್ ಉತ್ಪನ್ನಗಳನ್ನು ಸಿದ್ಧಪಡಿಸಲಾಗುತ್ತಿದೆ. ಎಲೆಕ್ಟ್ರಿಕ್ ಫ್ಯಾನ್ ಬ್ಲೇಡ್‌ಗಳ ತಯಾರಿಕೆ, ಕಾಸ್ಮೆಟಿಕ್ ಪ್ರಾಡಕ್ಟ್‌ಗಳ ಕಂಟೇನರ್‌ಗಳ ತಯಾರಿಕೆಯಲ್ಲಿ ಪಾಲಿಸ್ಟಿರೀನ್ ಬಳಸಲಾಗುತ್ತದೆ.
ಈಗಾಗಲೇ ಕಂಪನಿಯ ಸುತ್ತಮುತ್ತಲಿನ ನೂರಾರು ಜನರನ್ನು ತುರ್ತು ಸೇವೆಗಳ ಮೂಲಕ ಸ್ಥಳಾಂತರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.