ADVERTISEMENT

ನಿಮ್ಮ ಹಣಕಾಸಿನ ಮೂಲ ಯಾವುದು? ಮುಷ್ಕರನಿರತ ವೈದ್ಯರಿಗೆ ಸಚಿವರ ಪ್ರಶ್ನೆ

ಪಿಟಿಐ
Published 31 ಅಕ್ಟೋಬರ್ 2024, 16:10 IST
Last Updated 31 ಅಕ್ಟೋಬರ್ 2024, 16:10 IST
ಧನದಾಹದ ಮೂಲ ಯಾವುದು?
ಧನದಾಹದ ಮೂಲ ಯಾವುದು?   

ಕೋಲ್ಕತ್ತ: ‘ಎರಡು ತಿಂಗಳಿನಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ನಿಮ್ಮ ಆರ್ಥಿಕ ಸಂಪನ್ಮೂಲದ ಮೂಲ ಯಾವುದು’ ಎಂದು ಪಶ್ಚಿಮ ಬಂಗಾಳದ ಸಚಿವರೊಬ್ಬರು, ಪ್ರತಿಭಟನೆ ನಡೆಸುತ್ತಿರುವ ಕಿರಿಯ ವೈದ್ಯರನ್ನು ಪ್ರಶ್ನಿಸಿದ್ದಾರೆ.

ಖಡದಹ ಕ್ಷೇತ್ರದಲ್ಲಿ ನಡೆದ ದುರ್ಗಾಪೂಜೆ ಸಂದರ್ಭದಲ್ಲಿ, ಕ್ಷೇತ್ರದ ಶಾಸಕರೂ ಆದ ಕೃಷಿ ಸಚಿವ ಸೋವನ್‌ದೇಬ್‌ ಚಟ್ಟೋಪಾಧ್ಯಾಯ ಹೀಗೇ ಪ್ರಶ್ನಿಸಿದ್ದಾರೆ. ಸಚಿವರ ಭಾಷಣವುಳ್ಳ ವಿಡಿಯೊ, ಜಾಲತಾಣಗಳಲ್ಲಿ ಸಾಕಷ್ಟು ಹಂಚಿಕೆಯಾಗಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿದೆ.

‘ನೀವು ಏಕೆ, ಯಾವ ಕಾರಣಕ್ಕೆ ಪ್ರತಿಭಟಿಸುತ್ತಿದ್ದೀರಿ? ಸರ್ಕಾರವನ್ನೇ ಗುರಿಯಾಗಿಸಿ ಆಕ್ರೋಶ ಏಕೆ? ನಿಮ್ಮ ಸಂಪನ್ಮೂಲದ ಮೂಲ ಯಾವುದು? ಇಷ್ಟೊಂದು ದುಡ್ಡು ನಿಮಗೆ ಎಲ್ಲಿಂದ ಬರುತ್ತಿದೆ’ ಎಂದು ಸಚಿವರು ಪ್ರಶ್ನಿಸಿದ್ದಾರೆ.

ADVERTISEMENT

ಸಚಿವರ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿರುವ ಹಿರಿಯ ವೈದ್ಯ, ಸುಬರ್ಣ ಗೋಸ್ವಾಮಿ ಅವರು, ಆರೋಗ್ಯ ಕ್ಷೇತ್ರದ ಸಮಸ್ಯೆಗಳ ಕುರಿತು ಕಿರಿಯ ವೈದ್ಯರು ಪ್ರತಿಭಟಿಸಿದರೆ ಸರ್ಕಾರ ಈ ಮೂಲಕ ಅಸಮಾಧಾನ ಹೊರಹಾಕುತ್ತಿದೆ ಎಂದಿದ್ದಾರೆ.

‘ಆರ್.ಜಿ.ಕರ್ ಆಸ್ಪತ್ರೆಯಲ್ಲಿ ಆ. 9ರಂದು ಅತ್ಯಾಚಾರ ಮತ್ತು ಕೊಲೆಗೀಡಾದ ಕಿರಿಯ ವೈದ್ಯೆಗೆ ನ್ಯಾಯ ಕೋರಿ ಪ್ರತಿಭಟಿಸುತ್ತಿದ್ದೇವೆ’ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಸಂಘದ ಸದಸ್ಯ ಸ್ವರ್ಣಾಂಬ ಘೋಷ್‌ ಪ್ರತಿಕ್ರಿಯಿಸಿದ್ದಾರೆ.

ಈ ಹಿಂದೆ ಕೂಡ ಟಿಎಂಸಿ ನಾಯಕರಾದ ಸಂಸದ ಕಲ್ಯಾಣ ಬಂಡೋಪಾಧ್ಯಾಯ, ಶಾಸಕರಾದ ಸೌಕತ್ ಮೊಲ್ಲಾ, ತಪಸ್‌ ಚಟರ್ಜಿ ಅವರು, ವೈದ್ಯರ ಮುಷ್ಕರ ರಾಜಕೀಯ ಕಾರ್ಯಸೂಚಿ ಒಳಗೊಂಡಿದೆ ಎಂದು ಟೀಕಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.