ADVERTISEMENT

ಇದು ಯಾವ ರೀತಿಯ ರಾಮರಾಜ್ಯ? ಉತ್ತರ ಪ್ರದೇಶ ಸರ್ಕಾರಕ್ಕೆ ಸಂಜಯ್ ರಾವುತ್ ಪ್ರಶ್ನೆ

ಪಿಟಿಐ
Published 21 ಮಾರ್ಚ್ 2021, 12:55 IST
Last Updated 21 ಮಾರ್ಚ್ 2021, 12:55 IST
ಸಂಜಯ್ ರಾವುತ್
ಸಂಜಯ್ ರಾವುತ್   

ಮುಂಬೈ: ಉತ್ತರ ಪ್ರದೇಶದ ದೇವಾಲಯವೊಂದರಲ್ಲಿ ಕುಡಿಯುವ ನೀರಿಗಾಗಿ ಮುಸ್ಲಿಂ ಬಾಲಕನನ್ನು ನಿರ್ದಯವಾಗಿ ಥಳಿಸಿರುವ ಘಟನೆ ಬಗ್ಗೆ ಭಾನುವಾರ ಕಿಡಿಕಾರಿರುವ ಶಿವಸೇನೆ ಮುಖಂಡ ಸಂಜಯ್ ರಾವುತ್, ಇದು ಯಾವ ರೀತಿಯ 'ರಾಮರಾಜ್ಯ' ಎಂದು ಪ್ರಶ್ನಿಸಿದ್ದಾರೆ.

ಕೋಮು ಧ್ರುವೀಕರಣದಲ್ಲಿ ಪಾಲ್ಗೊಳ್ಳುವ ಮೂಲಕ ಕೆಲವರು ಭಾರತದ ಚಿತ್ರಣವನ್ನೇ ಹಾಳುಗೆಡಹುತ್ತಿದ್ದಾರೆ ಎಂಬುದನ್ನು ಈ ಘಟನೆ ತೋರಿಸಿದೆ ಎಂದು ಹೇಳಿದ್ದಾರೆ.

'ಭಗವಾನ್ ರಾಮನಿಗೆ ಅರ್ಪಿತ ದೇವಾಲಯವೊಂದು ನಿರ್ಮಾಣವಾಗುತ್ತಿರುವ ಭೂಮಿಯಲ್ಲಿ ಈ ಘಟನೆ ನಡೆದಿದೆ. ಇದು ಯಾವ ರೀತಿಯ ರಾಮ ರಾಜ್ಯ? 'ನಾವು ಯಾವ ರೀತಿಯ ಹಿಂದೂ ಧರ್ಮವನ್ನು ಪ್ರತಿನಿಧಿಸುತ್ತಿದ್ದೇವೆ?' ಎಂದವರು ಶಿವಸೇನಾದ ಮುಖವಾಣಿ 'ಸಾಮ್ನಾ'ದಲ್ಲಿ ಪ್ರಕಟವಾಗುವ ತಮ್ಮ ಅಂಕಣ 'ರೋಖ್‌ತೋಕ್'ನಲ್ಲಿ ಪ್ರಶ್ನಿಸಿದ್ದಾರೆ.

ADVERTISEMENT

ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರು 'ಜೈ ಶ್ರೀ ರಾಮ್' ಎಂದು ಜಪಿಸಲು ನಿರಾಕರಿಸಿದ್ದರಿಂದ ಅವರನ್ನು ಹಿಂದೂ ವಿರೋಧಿ ಎಂದು ಕರೆಯಲಾಗುತ್ತದೆ. ಆದರೆ ಚಿಕ್ಕ ಹುಡುಗನಿಗೆ ನೀರು ನಿರಾಕರಿಸುವುದು ಮತ್ತು ನಿರ್ದಯವಾಗಿ ಅವನನ್ನು ಹೊಡೆಯುವುದು ಸಹ ಹಿಂದೂ ವಿರೋಧಿಯೇ ಎಂದು ರಾವುತ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ತಮ್ಮ 'ಮನ್ ಕಿ ಬಾತ್' ರೇಡಿಯೋ ಕಾರ್ಯಕ್ರಮದಲ್ಲಿ ವಿಭಿನ್ನ ವಿಷಯಗಳ ಬಗ್ಗೆ ಮಾತನಾಡುತ್ತಾರೆ. 'ಅವರು ಈ ವಿಚಾರದ ಬಗ್ಗೆಯೂ ಮಾತನಾಡುತ್ತಾರೆ ಎಂದು ಭಾವಿಸುತ್ತೇವೆ' ಎಂದು ಅವರು ಹೇಳಿದರು.

'ನಾವು ಪಾಕಿಸ್ತಾನದ ವಿರುದ್ಧವಾಗಿದ್ದೇವೆ ಮತ್ತು ಮುಸ್ಲಿಮರ ವಿರುದ್ಧವಲ್ಲ. ಉತ್ತರ ಪ್ರದೇಶ, ಬಿಹಾರ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಚುನಾವಣೆಗಳನ್ನು ಗೆಲ್ಲಲು ಕೋಮು ಧ್ರುವೀಕರಣವನ್ನು ಮಾಡಲಾಗುತ್ತಿದೆ' ಎಂದು ಅವರು ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.