ADVERTISEMENT

ಕಣ್ಮರೆಯಾದರು ಕರುಣಾನಿಧಿ, ಜಯಲಲಿತಾ: ಬದಲಾಗಲಿದೆಯೇ ದ್ರಾವಿಡ ರಾಜಕಾರಣ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2018, 17:29 IST
Last Updated 7 ಆಗಸ್ಟ್ 2018, 17:29 IST
ಚೆನ್ನೈನ ಕಾವೇರಿ ಆಸ್ಪತ್ರೆ ಎದುರು ಕರುಣಾನಿಧಿ ಭಾವಚಿತ್ರ ಹಿಡಿದು ಶೋಕಿಸುತ್ತಿರುವ ಅಭಿಮಾನಿ
ಚೆನ್ನೈನ ಕಾವೇರಿ ಆಸ್ಪತ್ರೆ ಎದುರು ಕರುಣಾನಿಧಿ ಭಾವಚಿತ್ರ ಹಿಡಿದು ಶೋಕಿಸುತ್ತಿರುವ ಅಭಿಮಾನಿ   

ಬೆಂಗಳೂರು: ತಮಿಳುನಾಡು ಅಧಿಕಾರವನ್ನು ನಿಯಂತ್ರಿಸುತ್ತಿದ್ದುದು ಎರಡೇ ಶಕ್ತಿಗಳು. ಒಂದು ಜಯಲಲಿತಾ ಮತ್ತೊಂದು ಕರುಣಾನಿಧಿ. ಕೇವಲ ಒಂದೂವರೆ ವರ್ಷದ ಅವಧಿಯಲ್ಲಿ ಜಯಲಲಿತಾ ಮತ್ತು ಕರುಣಾನಿಧಿ ನಿಧನರಾಗಿರುವುದು ತಮಿಳುನಾಡು ರಾಜಕಾರಣದಲ್ಲಿ ನಿರ್ವಾತ ಸೃಷ್ಟಿಸಿದೆ.

ದ್ರಾವಿಡ ರಾಜಕಾರಣದ ಮುಂದಿನ ಹಾದಿಯ ಬಗ್ಗೆ ದೇಶದ ರಾಜಕೀಯ ನಿಪುಣರು ಲೆಕ್ಕಾಚಾರ ಹಾಕುತ್ತಿದ್ದಾರೆ. ಇವರಿಬ್ಬರ ಸಮಕಾಲೀನರು, ವಿರೋಧಿಗಳು, ಸಹವರ್ತಿಗಳು, ಪಕ್ಷದ ಕಾರ್ಯಕರ್ತರು ಮತ್ತು ಸರ್ಕಾರಿ ನೌಕರರು ಅಷ್ಟೇಕೆ ಇಡೀ ದೇಶದ ಜನ ಇವರಿಬ್ಬರ ಬದುಕು, ಹೋರಾಟ ಮತ್ತು ಸರ್ಕಾರ ನಡೆಸುವ ಶೈಲಿಯನ್ನು ಬಹುಕಾಲದವರೆಗೆ ನೆನಪಿಸಿಕೊಳ್ಳಲಿದ್ದಾರೆ.

ಬಹುಶಃ ಇನ್ನು ಕೆಲ ದಶಕಗಳ ನಂತರ ನಮ್ಮ ದೇಶದಲ್ಲಿ ಇಷ್ಟು ಜನಪ್ರಿಯರಾದ, ಜನರನ್ನು ಸೂಜಿಗಲ್ಲಿನಂತೆ ಸೆಳೆಯಬಲ್ಲ ಆಡಳಿತಗಾರರು ಇದ್ದರು ಎಂದು ಹೊಸ ತಲೆಮಾರು ನಂಬುವುದೇ ಇಲ್ಲ ಎನಿಸುತ್ತದೆ.

ADVERTISEMENT

ತಮಿಳುನಾಡಿನ ಜನರು ಇವರಿಬ್ಬರನ್ನು ಆರಾಧಿಸುತ್ತಿದ್ದರು ಎನ್ನುವುದು ಎಷ್ಟು ನಿಜವೋ, ಬದಲಾವಣೆಗಾಗಿ ತುಡಿಯುತ್ತಿದ್ದರು ಎನ್ನುವುದೂ ಅಷ್ಟೇ ನಿಜ. ಮುಂದಿನ ಸರ್ಕಾರಗಳು ಭ್ರಷ್ಟಾಚಾರ ಮುಕ್ತ, ಪಾರದರ್ಶಕ ಮತ್ತು ಉತ್ತರದಾಯಿತ್ವ ಇರುವ ಆಡಳಿತ ಕೊಡಬೇಕು ಎಂದು ಅಲ್ಲಿನ ಜನರು ಬಯಸುತ್ತಿದ್ದಾರೆ.

ಮುಂದಿನ ಕೆಲ ದಶಕಗಳವರೆಗೆ ತಮಿಳುನಾಡಿನಲ್ಲಿ ಡಿಎಂಕೆ, ಎಐಡಿಎಂಕೆ ಅಸ್ತಿತ್ವ ಅಬಾಧಿತ. ರಾಜಕೀಯದಲ್ಲಿ ಈ ಎರಡೂ ಪಕ್ಷಗಳು ಮೇಲುಗೈ ಸಾಧಿಸಲಿವೆ ಎನ್ನುವ ಬಗ್ಗೆಯೂ ಹೆಚ್ಚು ಅನುಮಾನಗಳಿಲ್ಲ.

ಕರುಣಾನಿಧಿ ಅವರ ಮಗ ಮತ್ತು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರ ಪಟ್ಟಾಭಿಷೇಕಕ್ಕೆ ಹೆಚ್ಚು ತೊಂದರೆಯಾಗಲಾರದು. ಕುಟುಂಬದ ಸದಸ್ಯರಿಂದ ಹೆಚ್ಚೇನೂ ತೊಂದರೆಯಾಗದಿದ್ದರೆ ಅವರು ಪಕ್ಷ ಮತ್ತು ರಾಜ್ಯವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಲ್ಲರು. ಲೋಕಸಭಾ ಚುನಾವಣೆಯ ಕಾರ್ಯತಂತ್ರವನ್ನು ಅಷ್ಟೇ ಚಾಣಾಕ್ಷತನದಿಂದ ಹೆಣೆಯಬಲ್ಲರು.

ಜಯಲಲಿತಾ ನಿಧನದ ನಂತರ ಎಐಎಡಿಎಂಕೆ ಪಾಳಯದಲ್ಲಿ ಒಳಜಗಳಗಳು ಮೇರೆಮೀರಿದ್ದವು. ಮುಖ್ಯಮಂತ್ರಿ ಮತ್ತು ಎಐಎಡಿಎಂಕೆ ಜಂಟಿ ಸಂಯೋಜಕ ಈರಪ್ಪಾಡಿ ಕೆ.ಪಳನಿಸ್ವಾಮಿ ಮತ್ತು ಉಪಮುಖ್ಯಮಂತ್ರಿ ಹಾಗೂ ಪಕ್ಷದ ಸಂಯೋಜಕ ಓ.ಪನ್ನೀರ್‌ಸೆಲ್ವಂ ನಡುವಣ ಬಿಸಿಬಿಸಿ ವಾಗ್ವಾದಗಳು ಇದೀಗ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಿವೆ.

ಎಐಡಿಎಂಕೆಗೆ ತಲೆನೋವಾಗಿದ್ದ ಭಿನ್ನಮತೀಯ ನಾಯಕ ಟಿ.ಟಿ.ವಿ. ದಿನಕರನ್ ಮತ್ತೆ ಪಕ್ಷದ ತೆಕ್ಕೆಗೆ ಮರಳುವ ಸೂಚನೆ ನೀಡಿರುವುದು ರಾಜಕೀಯ ಅಲೆಯನ್ನು ಏರುಪೇರು ಮಾಡುವ ಮುನ್ಸೂಚನೆ ನೀಡಿದೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಯ ಅಸ್ತಿತ್ವ ಈ ಎರಡು ದ್ರಾವಿಡ ಪಕ್ಷಗಳ ಹೊಯ್ದಾಟವನ್ನೇ ಅವಲಂಬಿಸಿರುತ್ತವೆ. ಪಿಎಂಕೆ, ಡಿಎಂಡಿಕೆ, ಎಂಡಿಎಂಕೆ ಮತ್ತು ವಿಸಿಕೆಯಂಥ ಪ್ರಾದೇಶಿಕ ಪಕ್ಷಗಳು ಹೆಚ್ಚಿನ ಸಾಧನೆ ಮಾಡುವುದು ಅನುಮಾನ. ಆದರೆ ರಾಜ್ಯ ರಾಜಕಾರಣದಲ್ಲಿ ಕ್ರಮೇಣ ಹಿಡಿತ ಬಲಪಡಿಸಿಕೊಳ್ಳಲು ಯತ್ನಿಸುವುದು ನಿಶ್ಚಿತ.

ತಮಿಳುನಾಡು ರಾಜಕಾರಣವನ್ನು ಹತ್ತಿರದಿಂದ ಗಮನಿಸುತ್ತಿರುವ ಎಲ್ಲ ಕಣ್ಣು ಇದೀಗ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರ ಮೇಲೆ ನೆಟ್ಟಿದೆ. ಕಳೆದ ಫೆಬ್ರುವರಿಯಲ್ಲಿ ಕಮಲ್ ಹಾಸನ್ ತಮ್ಮ ಸ್ವಂತ ಪಕ್ಷ ಮಕ್ಕಳ್ ನೀಡಿ ಮೈಯಂ ಸ್ಥಾಪಿಸಿ ಸುದ್ದಿಯಾಗಿದ್ದರು. ರಾಜಕೀಯ ಪ್ರವೇಶಿಸುವ ಸೂಚನೆ ನೀಡಿದ್ದ ರಜನೀಕಾಂತ್ ಈವರೆಗೂ ಪಕ್ಷ ಸ್ಥಾಪಿಸಿಲ್ಲ. ರಾಜಕೀಯ ಪಯಣದ ಜೊತೆಗಾರರ ಬಗ್ಗೆಯೂ ಕುತೂಹಲವನ್ನು ಹಾಗೆಯೇ ಉಳಿಸಿದ್ದಾರೆ.

ಈ ಎಲ್ಲದರ ಹಿನ್ನೆಲೆಯಲ್ಲಿ ಯೋಚಿಸಿದಾಗ ಕರುಣಾನಿಧಿ ಮತ್ತು ಜಯಲಲಿತಾ ಮುಂದಿನ ಹಲವು ವರ್ಷಗಳವರೆಗೆ ತಮಿಳುನಾಡು ರಾಜಕಾರಣದಲ್ಲಿ ತಾರೆಗಳಾಗಿಯೇ ರಾರಾಜಿಸಲಿದ್ದಾರೆ ಎನ್ನುವುದು ನಿಚ್ಚಳವಾಗಿ ಕಾಣಿಸುತ್ತದೆ. ಈ ಇಬ್ಬರು ನಾಯಕರ ನಿಧನದಿಂದ ನಿರ್ಮಾಣವಾಗಿ ನಿರ್ವಾತ ಬಹುಕಾಲದವರೆಗೆ ಹಾಗೆಯೇ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.