ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆಗಳಿಗೆ ನಡೆಯುವ ಚುನಾವಣೆಗಳಲ್ಲಿ ವೆಚ್ಚದ ಮಿತಿ ಎಷ್ಟಿರಬೇಕು ಎಂದು ಚುನಾವಣಾ ಆಯೋಗವು ವಿವಿಧ ರಾಜಕೀಯ ಪಕ್ಷಗಳ ಅಭಿಪ್ರಾಯ ಕೇಳಿದೆ.
ಡಿಸೆಂಬರ್ 7ರಂದು ಈ ಕುರಿತು ಪತ್ರ ಬರೆದಿರುವ ಆಯೋಗವು ಪಕ್ಷಗಳು ತಮ್ಮ ಸಲಹೆ, ಅಭಿಪ್ರಾಯಗಳನ್ನು, ವೆಚ್ಚ ಮಿತಿ ಪರಿಷ್ಕರಿಸಲು ನೇಮಿಸಲಾಗಿರುವ ನೋಡಲ್ ಅಧಿಕಾರಿಗೆ ಕಳುಹಿಸಬೇಕು ಎಂದು ತಿಳಿಸಿದೆ.
ಸದ್ಯ, ಅಭ್ಯರ್ಥಿಗಳಿಗೆ ವೆಚ್ಚ ಮಿತಿ ನಿಗದಿಪಡಿಸಲಾಗಿದ್ದರೂ ರಾಜಕೀಯ ಪಕ್ಷಗಳಿಗೆ ಅಂಥ ಮಿತಿ ನಿಗದಿಯಾಗಿಲ್ಲ.
ಮತದಾರರ ಸಂಖ್ಯೆ ಹೆಚ್ಚಿರುವುದು ಮತ್ತು ವೆಚ್ಚ ಏರಿಕೆಯ ಹಿನ್ನೆಲೆಯಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ವೆಚ್ಚ ಮಿತಿ ಪರಿಷ್ಕರಿಸಲು ಸಮಿತಿ ರಚನೆಯಾಗಿದೆ. ಚುನಾವಣೆ ವೆಚ್ಚ ಮಿತಿಯನ್ನು ಈ ಹಿಂದೆ 2014ರಲ್ಲಿ ಪರಿಷ್ಕರಿಸಲಾಗಿತ್ತು. ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಅನ್ವಯವಾಗುವಂತೆ 2018ರರಲ್ಲಿ ಪರಿಷ್ಕರಣೆಯಾಗಿತ್ತು.
ಮತದಾರರ ಸಂಖ್ಯೆ 2019ರಲ್ಲಿ 91 ಕೋಟಿ ಇದ್ದರೆ, ಈಗ ಆ ಸಂಖ್ಯೆ 92.1 ಕೋಟಿಗೆ ಏರಿದೆ. ಹಣದುಬ್ಬರ ಪ್ರಮಾಣವು ಹೆಚ್ಚಾಗಿದೆ ಎಂದು ಕಳೆದ ಅಕ್ಟೋಬರ್ ತಿಂಗಳಲ್ಲಿ ವೆಚ್ಚ ಪರಿಷ್ಕರಣೆಗೆ ಸಮಿತಿಯನ್ನು ರಚಿಸುವ ಸಂದರ್ಭದಲ್ಲಿ ಚುನಾವಣಾ ಆಯೋಗ ತಿಳಿಸಿತ್ತು.
ಸಮಿತಿಯು ಈ ಕುರಿತ ವರದಿಯನ್ನು ಮುಂದಿನ ವರ್ಷದ ಆರಂಭದಲ್ಲಿ ಆಯೋಗಕ್ಕೆ ಸಲ್ಲಿಸುವ ಸಂಭವವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.