ನವದೆಹಲಿ: ‘ನಮ್ಮ ದೇಶದಲ್ಲಿ ಕ್ರಿಕೆಟ್ ಒಂದು ಧರ್ಮ. ಕ್ರಿಕೆಟ್ ಆಟಗಾರರೇ ದೇವತೆಗಳು’ ಎಂಬ ಮಾತು ಪ್ರಚಲಿತದಲ್ಲಿದೆ. ಅಭಿಮಾನಿಗಳ ಆರಾಧ್ಯ ದೈವಗಳಾಗಿರುವಇಂಥ ದೇವತೆಗಳು ರಾಜಕಾರಕ್ಕಿಳಿದು ಅದೃಷ್ಟ ಪರೀಕ್ಷೆ ಮಾಡುವುದು ಹೊಸ ಸಂಗತಿಯೇನಲ್ಲ. ಇದೀಗ ಪೂರ್ವ ದೆಹಲಿಯಲ್ಲಿ ಬಿಜೆಪಿ ಹುರಿಯಾಳಾಗಿರುವ ಗೌತಮ್ ಗಂಭೀರ್ ಈ ಪಟ್ಟಿಗೆ ಮತ್ತೊಂದು ಸೇರ್ಪಡೆಯಷ್ಟೇ.
ಕ್ರಿಕೆಟ್ ಅಂಗಳದಲ್ಲಿ ಓಪನಿಂಗ್ ಬ್ಯಾಟ್ಸ್‌ಮನ್ ಆಗಿದ್ದ ಗಂಭೀರ್‌ರರಾಜಕಾರಣದ ಓಪನಿಂಗ್ ಅಷ್ಟೇನೂ ಚೆನ್ನಾಗಿ ಆಗಲಿಲ್ಲ. ಅವರ ವಿರುದ್ಧ ಆರೋಪಗಳ ಮೇಲೆ ಆರೋಪಗಳು, ಅನುಮಾನಗಳು ಕೇಳಿಬಂದವು. ಆಮ್ ಆದ್ಮಿ ಪಕ್ಷದಿಂದ ಸ್ಪರ್ಧಿಸಿರುವ ಆತಿಶಿ ಅವರನ್ನು ಹೀಗಳೆದಿರುವ ಕರಪತ್ರಗಳ ಹಂಚಿಕೆಯಲ್ಲಿ ಗೌತಮ್ ಗಂಭೀರ್ ಕೈವಾಡವಿದೆ ಎಂಬಮಾತುಗಳು ಚಾಲ್ತಿಗೆ ಬಂದವು. ದೆಹಲಿಯ ಬಿಸಿಲಿಗೆ ಹೆದರಿ ನಕಲಿ ವ್ಯಕ್ತಿಯನ್ನು ಪ್ರಚಾರಕ್ಕೆ ಬಳಸಿದರು ಎನ್ನುವ ಅನುಮಾನಗಳು ವ್ಯಕ್ತವಾದವು.
ರಾಜಕಾರಣದ ಇನ್ನಿಂಗ್ಸ್‌ನಲ್ಲಿ ಗೌತಮ್‌ರ ಓಪನಿಂಗ್ ಹೇಗಿತ್ತು? ಎಷ್ಟು ರನ್ ಗಳಿಸಿದರು ಎನ್ನುವುದು ಮೇ 23ಕ್ಕೆ ಗೊತ್ತಾಗುತ್ತೆ ಬಿಡಿ.
ಕ್ರಿಕೆಟ್ ಜಗತ್ತಿನಿಂದ ರಾಜಕಾರಣಕ್ಕೆ ಬಂದವರ ಉದ್ದನೆ ಪಟ್ಟಿಯಲ್ಲಿ ಗೌತಮ್ ಗಂಭೀರ್‌ಹೊಸ ಸೇರ್ಪಡೆ. ಇಂಥದ್ದೊಂದು ಪಟ್ಟಿ ಅನೇಕ ದಶಕಗಳ ಹಿಂದಿನಿಂದಲೇ ಬೆಳೆಯಲು ಶುರುವಾಗಿದೆ. ಕ್ರಿಕೆಟ್ ಅಂಗಳದಿಂದ ರಾಜಕಾರಣಕ್ಕೆ ಬಂದವರ ಪೈಕಿ ಮೊದಲಿಗರು ಎಂ.ಎ.ಕೆ. ಪಟೌಡಿ. 1971ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ ಅವರು ಗೆಲ್ಲಲಿಲ್ಲ ಎನ್ನುವುದು ಬೇರೆ ಮಾತು.
ಇದನ್ನೂ ಓದಿ: ಸಂದರ್ಶನ–ಮೋದಿಗೆ ಕಸುವು ತುಂಬುವೆ: ಗೌತಮ್ ಗಂಭೀರ್
ಮೊಹಮದ್ ಕೈಫ್, ಶ್ರೀಶಾಂತ್, ಮನೋಜ್ ಪ್ರಭಾಕರ್ ಮತ್ತು ವಿನೋದ್ ಕಾಂಬ್ಳಿ ಸಹ ತಾವು ಎದುರಿಸಿದ ಮೊದಲ ಚುನಾವಣೆಗಳಲ್ಲಿ ಸೋತು ಹೋದವರು. ಬಹುತೇಕ ಭಾರತೀಯರಿಗೆ ಇವರೆಲ್ಲರಾಜಕಾರಣಕ್ಕೆ ಬಂದಿದ್ದರು ಎನ್ನುವ ನೆನಪೂ ಈಗ ಉಳಿದಿಲ್ಲ. ರಾಜಕಾರಣ ಪ್ರವೇಶಿಸಿ, ತಕ್ಕಮಟ್ಟಿಗೆದಕ್ಕಿಸಿಕೊಂಡವರೆಂದರೆ ಮೊಹಮದ್ ಅಜರುದ್ದೀನ್, ಕೀರ್ತಿ ಆಜಾದ್, ನವಜೋಜ್ ಸಿಂಗ್ ಸಿಧು ಮತ್ತು ಚೇತನ್ ಚೌಹಾಣ್.
ಪಾಕಿಸ್ತಾನಕ್ಕೆ ಕ್ರಿಕೆಟ್ ಗೆದ್ದುಕೊಟ್ಟ ಇಮ್ರಾನ್ ಖಾನ್ ಪ್ರಧಾನಿಯಾಗುವ ಹಂತ ತಲುಪಿದರು. ಭಾರತದಲ್ಲಿ ಮಾತ್ರ ಕ್ರಿಕೆಟ್‌ನಿಂದ ರಾಜಕಾರಣಕ್ಕೆ ಬಂದವರು ಈವರೆಗೆ ಗಮನಾರ್ಹ ಎನಿಸುವಂಥ ಸಾಧನೆ ಮಾಡಿಲ್ಲ ಎನ್ನುವುದು ವಾಸ್ತವ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.