ADVERTISEMENT

ಫಾಲ್ಕೆ ಪ್ರಶಸ್ತಿ ನನ್ನಲ್ಲಿ ಅನುಮಾನ ಮೂಡಿಸಿತ್ತು: ಅಮಿತಾಬ್ ಬಚ್ಚನ್‌

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2019, 3:58 IST
Last Updated 30 ಡಿಸೆಂಬರ್ 2019, 3:58 IST
ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಂದ ಅಮಿತಾಬ್​ ಬಚ್ಚನ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದರು –ಪಿಟಿಐ ಚಿತ್ರ
ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಂದ ಅಮಿತಾಬ್​ ಬಚ್ಚನ್ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಸ್ವೀಕರಿಸಿದರು –ಪಿಟಿಐ ಚಿತ್ರ   

ನವದೆಹಲಿ: ‘ಇನ್ನು ಕೆಲಸ ಮಾಡಿದ್ದು ಸಾಕುವಿಶ್ರಾಂತಿ ಪಡೆಯಿರಿ ಎನ್ನುವುದನ್ನುಈ ಪ್ರಶಸ್ತಿ ಸೂಚಿಸುತ್ತಿದೆಯೇ? ಎಂಬ ಅನುಮಾನ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ ಪ್ರಕಟವಾದಾಗ ನನ್ನ ಮನಸ್ಸಿನಲ್ಲಿ ಮೂಡಿತ್ತು’ ಎಂದು ಅಮಿತಾಬ್‌ ಬಚ್ಚನ್ ಕಿರುನಗೆ ಬೀರಿದರು.

ಎರಡು ತಲೆಮಾರುಗಳನ್ನು ರಂಜಿಸಿದ ಮತ್ತು ಸ್ಪೂರ್ತಿ ತುಂಬಿದ ಅಮಿತಾಬ್​ ಬಚ್ಚನ್​ ಅವರಿಗೆ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌​ ಅವರು 50ನೇ ದಾದಾ ಸಾಹೇಬ್​ ಪಾಲ್ಕೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

‘ನಾನು ಮುಗಿಸಲು ಇನ್ನೂ ಕೆಲಸಗಳಿವೆ ಮತ್ತು ನನಗೆ ಕೆಲಸ ಮಾಡಲು ಅವಕಾಶ ಸಿಗಬಹುದಾದ ಸಾಧ್ಯತೆಗಳು ಮುಂದಿನ ದಿನಗಳಲ್ಲಿ ಬರಲಿವೆ. ಹಾಗಾಗಿ ಮನೆಯಲ್ಲಿ ವಿಶ್ರಮಿಸುವ ಮಾತೇ ಇಲ್ಲ’ ಎಂದು ನಗುವಿನ ಚಟಾಕಿ ಹಾರಿಸಿದರು.

ADVERTISEMENT

ಈ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಿದ ಮಾಹಿತಿ ಮತ್ತು ಪ್ರಸರಣ ಸಚಿವಾಲಯ, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಗೆ ಧ್ಯನವಾದಗಳನ್ನು ಅರ್ಪಿಸಿದರು.

‘ನನ್ನ ಪೋಷಕರ ಆಶೀರ್ವಾದಿಂದ, ಚಿತ್ರೋದ್ಯಮದ ಬೆಂಬಲ ಹಾಗೂ ಪ್ರೇಕ್ಷಕರು ನನ್ನ ಮೇಲೆ ತೋರಿದ ನಿರಂತರ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಾನು ಚಿರರುಣಿ. ಇದೆಲ್ಲದರಿಂದಲೇ ನಾನು ಇಲ್ಲಿ ನಿಂತಿದ್ದೇನೆ. ಅತ್ಯಂತ ವಿನಯ ಹಾಗೂ ಕೃತಜ್ಞತಾ ಭಾವದಿಂದ ಈ ಪ್ರಶಸ್ತಿಯನ್ನು ಸ್ವೀಕರಿಸುತ್ತೇನೆ’ ಎಂದು ಹೇಳಿದರು.

ಅಮಿತಾಬ್​ ಪತ್ನಿ ಜಯಾ ಬಚ್ಚನ್​ ಮತ್ತು ಮಗ ಅಭಿಷೇಕ್​ ಬಚ್ಚನ್​ ಅವರು ಈ ಪ್ರತಿಷ್ಟಿತ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಅನಾರೋಗ್ಯದ ಕಾರಣ ಅಮಿತಾಬ್ ರಾಷ್ಟ್ರಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರಲಿಲ್ಲ.

ಚಿತ್ರರಂಗದ ಅತ್ಯುನ್ನತ ಪ್ರಶಸ್ತಿ

ಸಿನಿಮಾ ಕ್ಷೇತ್ರದಲ್ಲಿ ಜೀವಮಾನ ಸಾಧನೆಗಾಗಿ ಭಾರತೀಯ ಸಿನಿಮಾ ರಂಗದ ಪಿತಾಮಹಾ ದಾದಾಸಾಹೇಬ್ ಫಾಲ್ಕೆ ಹೆಸರಲ್ಲಿ ಭಾರತ ಸರ್ಕಾರ 1969ರಿಂದ ಪ್ರಶಸ್ತಿ ನೀಡುತ್ತಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಚಲನಚಿತ್ರೋತ್ಸವಗಳ ನಿರ್ದೇಶನಾಲಯದಿಂದ ಆಯೋಜಿಸಲಾಗುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಮಾರಂಭದಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗುತ್ತದೆ.

ಪ್ರಶಸ್ತಿಯು ಸ್ವರ್ಣ ಕಮಲ ಪದಕ, ಶಾಲು ಹಾಗೂ ₹10 ಲಕ್ಷ ನಗದು ಬಹುಮಾನವನ್ನು ಒಳಗೊಂಡಿರುತ್ತದೆ. ನಟಿ ದೇವಿಕಾ ರಾಣಿ ಅವರಿಗೆ 17ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಮೊದಲ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. 1995ರಲ್ಲಿ ವರನಟ ಡಾ.ರಾಜಕುಮಾರ್‌ ಅವರಿಗೆ ಫಾಲ್ಕೆ ಪ್ರಶಸ್ತಿ ಪ್ರದಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.