ADVERTISEMENT

1924ರ ಕೇರಳ ಪ್ರವಾಹ ಸಂತ್ರಸ್ತರಿಗೆ ₹6 ಸಾವಿರ ಸಂಗ್ರಹಿಸಿದ್ದ ಗಾಂಧೀಜಿ

ಪಿಟಿಐ
Published 26 ಆಗಸ್ಟ್ 2018, 16:47 IST
Last Updated 26 ಆಗಸ್ಟ್ 2018, 16:47 IST
ಮಹಾತ್ಮ ಗಾಂಧೀಜಿ
ಮಹಾತ್ಮ ಗಾಂಧೀಜಿ   

ತಿರುವನಂತಪುರ : 1924ನೇ ಇಸ್ವಿಯಲ್ಲಿ ಕೇರಳದಲ್ಲಿ ಉಂಟಾದ ಪ್ರವಾಹಕ್ಕೆ ಸ್ಪಂದಿಸಿದ್ದ ಮಹಾತ್ಮ ಗಾಂಧೀಜಿ, ಸಂತ್ರಸ್ತರ ಪರಿಹಾರಕ್ಕಾಗಿ ₹6 ಸಾವಿರ ಒಟ್ಟುಗೂಡಿಸಿದ್ದರು ಎಂದು ದಾಖಲೆಗಳು ಹೇಳುತ್ತವೆ.

ಪ್ರಸ್ತುತ ಕೇರಳ ಪ್ರವಾಹವು 290 ಜನರನ್ನು ಬಲಿಪಡೆದಿದ್ದು, 10 ಲಕ್ಷ ಮಂದಿ ನೆಲೆ ಕಳೆದುಕೊಂಡಿದ್ದಾರೆ. 94 ವರ್ಷಗಳ ಹಿಂದೆಯೂ ಕೇರವಳನ್ನು ಪ್ರವಾಹ ಸಾಕಷ್ಟು ಬಾಧಿಸಿತ್ತು.

‘ಯಂಗ್ ಇಂಡಿಯಾ’ ಮತ್ತು ‘ನವಜೀವನ್’ ಪತ್ರಿಕೆಗಳಲ್ಲಿ ಸರಣಿ ಲೇಖನಗಳನ್ನು ಪ್ರಕಟಿಸುವ ಮೂಲಕ ಪ್ರವಾಹಪೀಡಿತ ಮಲಬಾರ್‌ಗೆ (ಕೇರಳ) ದೇಣಿಗೆ ನೀಡುವಂತೆ ಜನರನ್ನು ಅವರು ಪ್ರೇರೇಪಿಸಿದ್ದರು. ದೇಶದಾದ್ಯಂತ ಇದಕ್ಕೆ ಸ್ಪಂದನೆ ವ್ಯಕ್ತವಾಗಿತ್ತು. ಜನರು ಚಿನ್ನಾಭರಣ, ಹಣ ನೀಡಿದ್ದರು.

ADVERTISEMENT

ಗಾಂಧೀಜಿ ಅವರು ‘ಮಲಬಾರ್‌ನಲ್ಲಿ ಪರಿಹಾರ ಕಾರ್ಯ’ ಎಂಬ ಲೇಖನದಲ್ಲಿ ‘ಮಲಬಾರ್‌ನ ವಿಪತ್ತನ್ನು ಊಹಿಸಲೂ ಅಸಾಧ್ಯ’ ಎಂಬುದಾಗಿ ಬರೆದಿದ್ದರು.

***
ಕದ್ದು ಕೊಟ್ಟರು.. ಊಟ ಬಿಟ್ಟರು..

ಕೆಲವರು ಒಂದು ಹೊತ್ತಿನ ಊಟ ತ್ಯಜಿಸಿ, ನೆರೆಸಂತ್ರಸ್ಥರ ನಿಧಿಗೆ ದೇಣಿಗೆ ನೀಡಲು ಹಣ ಹೊಂದಿಸಿದ್ದರು ಎಂದು ಗಾಂಧೀಜಿ ಬರೆದಿರುವ ಲೇಖನಗಳಲ್ಲಿ ಉಲ್ಲೇಖಿಸಲಾಗಿದೆ. ಬಾಲಕಿಯೊಬ್ಬಳು ದೇಣಿಗೆ ನೀಡಲು 3 ಪೈಸೆಯನ್ನು ಕದ್ದಿದ್ದ ಘಟನೆಯನ್ನೂ ಅವರು ಪ್ರಸ್ತಾಪಿಸಿದ್ದಾರೆ.

ಕೇರಳ ಕಾಂಗ್ರೆಸ್ ಮುಖಂಡರು ಟೆಲಿಗ್ರಾಂ ಮೂಲಕ ಗಾಂಧೀಜಿ ಅವರಿಗೆ ಮಾಹಿತಿ ನೀಡಿದ್ದರು. ಸಂತ್ರಸ್ತರಿಗಾಗಿ ಹಣ, ಬಟ್ಟೆ ಸಂಗ್ರಹಿಸುತ್ತಿರುವುದಾಗಿ ಗಾಂಧೀಜಿ ಪ್ರತಿಕ್ರಿಯಿಸಿದ್ದರು. ನಿರಾಶ್ರಿತರ ಊಟ, ವಸತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಜುಲೈ ತಿಂಗಳಲ್ಲಿ ಸತತ ಮೂರುವಾರ ಪ್ರವಾಹದಲ್ಲಿ ಕೇರಳ ಮುಳುಗಿತ್ತು.ಮುನ್ನಾರ್, ತ್ರಿಶೂರ್, ಕೋಯಿಕ್ಕೋಡ್, ಎರ್ನಾಕುಲಂ, ಆಲುವಾ, ಮೂವಾಟ್ಟುಪುಳ, ಕುಮರಕಮ್, ಚೆಂಙನೂರ್ ಹಾಗೂ ತಿರುವನಂತಪುರಗಳು ಸಂಕಷ್ಟಕ್ಕೆ ಈಡಾಗಿದ್ದವು.

ಇದನ್ನು ‘ಗ್ರೇಟ್ ಫ್ಲಡ್ ಆಫ್ 99’ ಎಂದು ಕರೆಯಲಾಗಿತ್ತು. ಮಲಯಾಳಂ ಕ್ಯಾಲೆಂಡರ್ ಪ್ರಕಾರ ’ಕೊಲ್ಲ ವರ್ಷಂ’ದಲ್ಲಿ (1099ರಲ್ಲಿ) ಈ ದುರಂತ ಸಂಭವಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.