ನವದೆಹಲಿ: ಉತ್ತರ ದೆಹಲಿಯಲ್ಲಿ ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯ ನೆಲಮಾಳಿಗೆ ಈಗ ಡಯಾಗ್ನಸ್ಟಿಕ್ ಕೇಂದ್ರವಾಗಿದೆ.
‘ನಾನು ಮೂಢನಂಬಿಕೆಯನ್ನು ಆಚರಿಸುವುದಿಲ್ಲ. ಅದನ್ನೆಲ್ಲ ನಂಬಿದ್ದರೆ, ನಾನು ಇಲ್ಲಿಗೆ ಬರುತ್ತಲೇ ಇರಲಿಲ್ಲ. ನನ್ನ ಬಳಿ ತಪಾಸಣೆಗೆ ಬರುವವರಿಗೂ ಯಾವುದೇ ತೊಂದರೆ ಇಲ್ಲ. ಈ ಮನೆ ಸೌಕರ್ಯವಾಗಿದೆ. ರಸ್ತೆಗೆ ಹತ್ತಿರದಲ್ಲಿಯೇ ಇದೆ’ ಎಂದು ಡಯಾಗ್ನಾಸ್ಟಿಕ್ ಕೇಂದ್ರದ ಮಾಲೀಕ ಡಾ. ಮೋಹನ್ ಸಿಂಗ್ ತಿಳಿಸಿದರು.
ದುಷ್ಟ ಶಕ್ತಿ ಇದ್ದರೆ ಅದನ್ನು ದೂರ ಮಾಡಲು ಹೋಮ ಹವನ ಮಾಡಲಾಗಿದೆ. ‘ಸಂಪ್ರದಾಯದಂತೆ ಸೆಂಟರ್ ಪ್ರಾರಂಭಕ್ಕೂ ಮೊದಲು ಗೌರಿ–ಗಣೇಶನಿಗೆ ಪೂಜೆ ಮಾಡಲಾಗಿದೆ. ಯಾರೂ ಮೂಢನಂಬಿಕೆಯನ್ನು ಆಚರಿಸಬಾರದು’ ಎಂದು ಅರ್ಚಕರು ತಿಳಿಸಿದರು.
‘ಏನು ಆಗಿತ್ತೊ ಅದು ಆಗಿ ಹೋಗಿದೆ. ಈಗ ಎಲ್ಲವೂ ಚೆನ್ನಾಗಿಯೇ ಇದೆ. ಅವೆರಲ್ಲ ಒಳ್ಳೆವರು, ಇಲ್ಲಿ ಯಾವುದೇ ಆತ್ಮಗಳು ಇಲ್ಲ. ಆತ್ಮಹತ್ಯೆ ಮಾಡಿಕೊಂಡವರ ಆತ್ಮ ನೇರವಾಗಿ ಸ್ವರ್ಗಕ್ಕೆ ಹೋಗಿದೆ’ ಎಂದು ಸ್ಥಳೀಯರೊಬ್ಬರು ಹೇಳಿದರು.
ಜುಲೈ 1ರಂದು ಉತ್ತರ ದೆಹಲಿಯ ಬುರಾರಿಯಲ್ಲಿ ಭಾಟಿಯಾ ಕುಟುಂಬದ 11 ಮಂದಿಯ ಶವ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಶವಪರೀಕ್ಷೆಯ ನಂತರ ಮನೆಯ ಎಲ್ಲ ಸದಸ್ಯರೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವದನ್ನು ವೈದ್ಯರು ಖಚಿತಪಡಿಸಿದ್ದರು.
ಕುಟುಂಬದವರು ವಿಷಯವೊಂದರ ಮೇಲೆ ಗಾಢವಾಗಿ ನಂಬಿಕೆ ಇರಿಸಿಕೊಂಡಿದ್ದು, ನೇಣಿಗೆ ಕೊರಳೊಡ್ಡುವ ಕ್ಷಣದಲ್ಲಿ ದೇವರು ಪವಾಡ ಸದೃಶ್ಯ ರೀತಿಯಲ್ಲಿ ರಕ್ಷಿಸುತ್ತಾನೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಕೈಬರಹದ ಚೀಟಿಗಳಲ್ಲಿನ ಅಂಶಗಳನ್ನು ಗಮನಿಸಿ ಪೊಲೀಸರು ಶಂಕೆಯನ್ನು ವ್ಯಕ್ತಪಡಿಸಿದ್ದರು.
ಏಳು ಮಹಿಳೆಯರು, ನಾಲ್ವರು ಪುರುಷರು ಹಾಗೂ ಮೂವರು ಮಕ್ಕಳು ಇಲ್ಲಿ ಮೃತಪಟ್ಟಿದ್ದರು. ಕೆಲವು ದೇಹಗಳು ಮನೆಯ ಚಾವಣಿಗೆ ನೇಣು ಬಿಗಿದ ಸ್ಥಿತಿಯಲ್ಲಿದ್ದವು. ಇನ್ನು ಕೆಲವು ದೇಹಗಳು ಕಣ್ಣು, ಕೈ, ಕಾಲು ಕಟ್ಟಿ ಬಾಯಿ ಮುಚ್ಚಿದ ಸ್ಥಿತಿಯಲ್ಲಿ ನೆಲದ ಮೇಲೆ ಇದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.