ADVERTISEMENT

ಸಂಸತ್‌ನಲ್ಲಿ ‘ರಾಹುಲ್‌ ಎಲ್ಲಿ?’ ಎಂಬ ಗುಸುಗುಸು ಚರ್ಚೆ: ಟ್ವೀಟ್‌ನೊಂದಿಗೆ ತೆರೆ

ಏಜೆನ್ಸೀಸ್
Published 17 ಜೂನ್ 2019, 12:21 IST
Last Updated 17 ಜೂನ್ 2019, 12:21 IST
   

ನವದೆಹಲಿ: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಸೋಮವಾರ (ಜೂನ್‌ 17) ಬೆಳಗ್ಗೆ ಸಂಸತ್‌ ಅಧಿವೇಶನಕ್ಕೆ ಗೈರಾಗಿದ್ದರು. ಹೀಗಾಗಿ ಸಂಸತ್‌ನಲ್ಲಿ ಕೆಲ ನಾಯಕರು ‘ರಾಹುಲ್‌ ಎಲ್ಲಿ?’ಎಂಬ ಗುಸುಗುಸು ಚರ್ಚೆಯಲ್ಲಿದ್ದದ್ದು ಕಂಡು ಬಂತು. ಆದರೆ, ಮಧ್ಯಾಹ್ನದ ನಂತರವು ರಾಹುಲ್‌ ಕೇರಳದ ವಯನಾಡು ಕ್ಷೇತ್ರದ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಈ ಚರ್ಚೆಗಳಿಗೆ ಕೊನೆ ಹಾಡಿದರು.

17ನೇ ಲೋಕಸಭೆಯ ಅಧಿವೇಶನ ಸೋಮವಾರ ಅಧಿಕೃತವಾಗಿ ಆರಂಭವಾಗಿದ್ದು, ಮೊದಲೆರಡು ದಿನ 542 ಸಂಸದರ ಪ್ರಮಾಣ ವಚನ ಸ್ವೀಕಾರ ಕಾರ್ಯ ನಡೆಯಲಿದೆ. ಈ ವಿಧಾನಗಳನ್ನು ನಡೆಸಿಕೊಡಲು ಹಂಗಾಮಿ ಸ್ಪೀಕರ್‌ಗೆ ರಾಷ್ಟಪತಿಗಳು ಮೊದಲಿಗೆ ಪ್ರಮಾಣವಚನ ಬೋಧಿಸಿದರು. ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದರು. ಈ ವೇಳೆ ಆಡಳಿತ ಪಕ್ಷದ ಸದಸ್ಯರು ‘ಮೋದಿ ಮೋದಿ...’ ಎಂದು ಕೂಗಿದರು. ಆಗ ಎನ್‌ಡಿಎ ಅಂಗಪಕ್ಷ ಆರ್‌ಪಿಐನ ಸಂಸದ ರಾಮದಾಸ್‌ ಅಟವಾಳೆ ಅವರು ಎದ್ದು ನಿಂತು ‘ರಾಹುಲ್‌ ಎಲ್ಲಿ?’ ಎಂದು ಪ್ರಶ್ನಿಸಿದರು. ಆಗ ‘ರಾಹುಲ್‌ ಇಲ್ಲೇ ಇದ್ದಾರೆ. ಶೀಘ್ರದಲ್ಲೇ ಬರುತ್ತಾರೆ,’ ಎಂಬ ಉತ್ತರ ಕಾಂಗ್ರೆಸ್‌ ಸಂಸದರ ಕಡೆಯಿಂದ ಬಂತು. ಅದರೆ, ರಾಹುಲ್‌ ಎಲ್ಲಿಯೂ ಕಾಣಿಸಲಿಲ್ಲ.

ಇದಾದ ನಂತರ ಸಚಿವೆ ಸ್ಮೃತಿ ಇರಾನಿ ಅವರು ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಗಾಂಧಿ ಕುಟುಂಬ ದೀರ್ಘಾವಧಿಗೆ ಪ್ರತಿನಿಧಿಸಿದ್ದ ಅಮೇಠಿಯಲ್ಲಿ ರಾಹುಲ್‌ ಗಾಂಧಿ ಅವರನ್ನು ಸೋಲಿಸಿದ್ದ ಸ್ಮೃತಿ ಇರಾನಿ ಅವರ ಪ್ರಮಾಣ ವಚನದ ವೇಳೆ ಪ್ರಧಾನಿ ಮೋದಿ, ಅಮಿತ್‌ ಶಾ ಸೇರಿದಂತೆ ಹಲವು ನಾಯಕರು ತುಂಬ ಹೊತ್ತು ಮೇಜು ಕುಟ್ಟಿ ಸಂಭ್ರಮಿಸಿದರು.

ADVERTISEMENT

4 ಗಂಟೆ ಹೊತ್ತಿಗೇ ರಾಹುಲ್‌ ಗಾಂಧಿ ಅವರು ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದರು. ನಂತರ ಟ್ವೀಟ್‌ ಮಾಡಿದ ರಾಹುಲ್‌ ಗಾಂಧಿ ‘ಸತತ ನಾಲ್ಕನೇ ಅವಧಿಯ ನನ್ನ ಸಂಸತ್‌ನ ಸದಸ್ಯತ್ವ ಇಂದಿನಿಂದ ಆರಂಭವಾಗಿದೆ. ಕೇರಳದ ವಯನಾಡು ಲೋಕಸಭೆ ಕ್ಷೇತ್ರದ ಸಂಸದನಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಎರಡನೇ ಇನ್ನಿಂಗ್ಸ್‌ ಆರಂಭಿಸಿದ್ದೇನೆ. ಭಾರತೀಯ ಸಂವಿಧಾನದಲ್ಲಿ ನಿಷ್ಠೆ ಮತ್ತು ವಿಶ್ವಾಸ ಹೊಂದುವುದಾಗಿ ನಾನು ದೃಢಪಡಿಸುತ್ತೇನೆ,’ ಎಂದು ಅವರು ಟ್ವೀಟ್‌ ಮಾಡಿದರು. ಈ ಮೂಲಕ ‘ರಾಹುಲ್‌ ಎಲ್ಲಿ?’ ಎಂಬ ಗುಸುಗುಸು ಚರ್ಚೆಗಳಿಗೆ ಕೊನೆ ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.