ನವದೆಹಲಿ: ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಮನೆ ಮೇಲೆ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದು, ಈವರೆಗೆ ₹50 ಕೋಟಿಗೂ ಹೆಚ್ಚು ಹಣ, ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದ ಶಿಕ್ಷಕರ ನೇಮಕಾತಿ ಹಗರಣ ದೇಶದಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಸಚಿವ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಮುಖರ್ಜಿ ಯಾರು? ಅವರ ಹಿನ್ನೆಲೆ ಏನು? ಅಪಾರ ಪ್ರಮಾಣದ ಹಣ ಸಂಗ್ರಹಿಸಿಟ್ಟವರು ಯಾರು ಎಂಬ ಪ್ರಶ್ನೆ ಕಾಡತೊಡಗಿದೆ.
ಕಳೆದ ಶನಿವಾರದಂದು (ಜುಲೈ 23) ಅರ್ಪಿತಾ ಮತ್ತು ಪಾರ್ಥ ಚಟರ್ಜಿಯನ್ನು ಬಂಧಿಸುವ ಒಂದು ದಿನದ ಮೊದಲು ಆಕೆಯ ಮನೆಯಲ್ಲಿ ಹಣದ ದೊಡ್ಡ ರಾಶಿಯ ದೃಶ್ಯ ಕಂಡುಬಂದಿತ್ತು.
ಇದುವರೆಗೆ ಅರ್ಪಿತಾ ಅವರ ಬಳಿ ಸರಿ ಸುಮಾರು ₹ 50 ಕೋಟಿಯಷ್ಟು ಹಣವನ್ನು ವಶಕ್ಕೆ ಪಡೆಯಲಾಗಿದೆ. ಹಣದ ರಾಶಿಯ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಅರ್ಪಿತಾ ಸಿನಿಪಯಣ: ಅರ್ಪಿತಾ ಅವರು ಮೂಲತಃ ಓರ್ವ ಮಾಡೆಲ್ ಆಗಿದ್ದು, ಬೆಂಗಾಳಿ, ಒಡಿಯಾ, ತಮಿಳಿನ ಕೆಲವು ಸಿನಿಮಾಗಳಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದಾರೆ.
2008ರಿಂದ 2014 ರವರೆಗೆ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅರ್ಪಿತಾ, ಬಂಗಾಳಿ ಚಿತ್ರರಂಗದ ಸೂಪರ್‌ಸ್ಟಾರ್ ನಟರಾದ ಪ್ರೊಸೆನ್‌ಜಿತ್ ಸೇರಿದಂತೆ ಹಲವರ ಜತೆ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು.
2009ರಲ್ಲಿ ಪ್ರೊಸೆನ್‌ಜಿತ್ ಚಟರ್ಜಿ ಅವರೊಂದಿಗೆ ‘ಮಾಮಾ ಭಗ್ನೆ’ ಮತ್ತು 2008ರಲ್ಲಿ ನಟ ಜೀತ್ ಅವರೊಂದಿಗೆ ‘ಪಾರ್ಟ್‌ನರ್’ ಚಿತ್ರದಲ್ಲಿ ಅರ್ಪಿತಾ ನಟಿಸಿದ್ದಾರೆ.
ಅರ್ಪಿತಾ ಮುಖರ್ಜಿ ನಟಿಸಿರುವ ಹಲವು ಬೆಂಗಾಲಿ ಚಿತ್ರಗಳು ಉತ್ತಮ ಪ್ರದರ್ಶನಗೊಂಡಿದ್ದು, ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ.
‘ನಾನು ನಿರ್ಮಿಸಿದ ಮೂರು ಚಿತ್ರಗಳಲ್ಲಿ ಅರ್ಪಿತಾ ನಟಿಯಾಗಿ ಅಭಿನಯಿಸಿದ್ದರು. ಆದರೆ, ನಾನು ಆಕೆಯೊಂದಿಗೆ ಸಂಪರ್ಕ ಇಟ್ಟುಕೊಂಡಿರಲಿಲ್ಲ. ಹನ್ನೆರಡು ವರ್ಷಗಳ ಬಳಿಕ ದೊಡ್ಡ ಸುದ್ದಿಯೊಂದಲ್ಲಿ ಆಕೆಯ ಬಗ್ಗೆ ಕೇಳುತ್ತಿದ್ದೇನೆ’ ಎಂದು ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಅನುಪ್ ಸೇನ್‌ಗುಪ್ತಾ ‘ದಿ ಪ್ರಿಂಟ್’ಗೆ ತಿಳಿಸಿದ್ದಾರೆ.
ಪಾರ್ಥ ಚಟರ್ಜಿ ಪರಿಚಯವಾದ ಬಳಿಕ ಅರ್ಪಿತಾ ಯಾವುದೇ ಸಿನಿಮಾಗಳಲ್ಲಿ ನಟಿಸಿಲ್ಲ.
ಉದ್ಯಮಿಯೊಂದಿಗೆ ವಿವಾಹ: ಅರ್ಪಿತಾ, ಕಾಲೇಜು ದಿನಗಳಲ್ಲಿ ಮಾಡೆಲಿಂಗ್‌ನಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ತಂದೆ ತೀರಿಕೊಂಡ ಬಳಿಕ ಜಾರ್‌ಗ್ರಾಮ್‌ನ ಉದ್ಯಮಿಯೊಬ್ಬರನ್ನು ವಿವಾಹವಾಗಿದ್ದರು. ಪತಿಯಿಂದ ವಿಚ್ಛೇದನ ಪಡೆದ ಬಳಿಕ ಅರ್ಪಿತಾ ಸಿನಿರಂಗದತ್ತ ಮುಖ ಮಾಡಿದ್ದರು ಎನ್ನಲಾಗಿದೆ.
ಪಾರ್ಥ ಚಟರ್ಜಿಯವರೊಂದಿಗೆ ಒಡನಾಟ:2016ರಿಂದ ಅರ್ಪಿತಾಗೆ ಬಂಗಾಳಿ ನಟರೊಬ್ಬರು ಪಾರ್ಥ ಚಟರ್ಜಿ ಅವರನ್ನು ಪರಿಚಯಿಸಿದ್ದರು. ಕೋಲ್ಕತ್ತದ ನಕ್ತಾಲಾ ಪ್ರದೇಶದ ದುರ್ಗಾಪೂಜಾ ಉತ್ಸವ ಸೇರಿದಂತೆ ಹಲವಾರು ಸಾರ್ವಜನಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಪಾರ್ಥ ಚಟರ್ಜಿಯವರೊಂದಿಗೆ ಅರ್ಪಿತಾ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದರು. 2021ರ ಬಂಗಾಳ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಚಟರ್ಜಿ ಪರ ಅರ್ಪಿತಾ ಪ್ರಚಾರ ನಡೆಸಿದ್ದರು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಪಾರ್ಥ ಚಟರ್ಜಿ ಭಾಗವಹಿಸುತ್ತಿದ್ದ ಹಲವು ರಾಜಕೀಯ ಕಾರ್ಯಕ್ರಮಗಳಲ್ಲಿ ಅರ್ಪಿತಾ ಕಾಣಿಸಿಕೊಂಡಿದ್ದಾರೆ.
ಸದ್ಯ ಬಂಧನಕ್ಕೊಳಗಾಗಿರುವ ಅರ್ಪಿತಾ ಅವರು ಟಿಎಂಸಿ ನಾಯಕರೊಂದಿಗೆ ಕಾಣಿಸಿಕೊಂಡಿರುವ ಹಲವು ಫೋಟೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಇದೇ ವಿಚಾರ ಬಿಜೆಪಿಗೆ ದೊಡ್ದ ಅಸ್ತ್ರವಾಗಿದೆ ಎಂದರೆ ತಪ್ಪಲ್ಲ.
ದುರ್ಗಾ ಪೂಜೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಂದಿಗೆ ಅರ್ಪಿತಾ ಕಾಣಿಸಿಕೊಂಡಿರುವ ಹಳೆಯ ಫೋಟೊಗಳನ್ನು ವಿಪಕ್ಷ ಬಿಜೆಪಿ ನಾಯಕ ಸುವೇಂಧು ಅಧಿಕಾರಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಪಾರ್ಥ ಚಟರ್ಜಿ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರಮುಖ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಸಿಪಿಐ(ಎಂ) ಆರೋಪಿಸಿದೆ.
ಐಷಾರಾಮಿ ಜೀವನ: ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿ, ಹಲವು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದರು ಸಹ ಅರ್ಪಿತಾ ದಕ್ಷಿಣ ಕೊಲ್ಕತ್ತದಲ್ಲಿ ಅಪಾರ್ಟ್‌ಮೆಂಟ್ ಹೊಂದಿದ್ದು, ಐಷಾರಾಮಿ ಜೀವನ ನಡೆಸುತ್ತಿದ್ದರು. ವಿದೇಶಗಳಲ್ಲಿ ನಡೆಯುತ್ತಿದ್ದ ಪಾರ್ಟಿಗಳಿಗೂ ಅರ್ಪಿತಾ ಮುಖರ್ಜಿ ಭಾಗವಹಿಸುತ್ತಿದ್ದರು ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯ: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿದ್ದ ಅರ್ಪಿತಾ ಇನ್‌ಸ್ಟಾಗ್ರಾಮ್‌ನಲ್ಲಿ 32 ಸಾವಿರ ಫಾಲೋವರ್ಸ್ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.