ನವದೆಹಲಿ:‘ಭಾರತದಲ್ಲಿ ಬಂಧಿಯಾಗಿದ್ದ ಜೈಷ್ ಎ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ಪಾಕಿಸ್ತಾನಕ್ಕೆ ಕರೆದೊಯ್ದು ಬಿಟ್ಟು ಬಂದ ಬಿಜೆಪಿ ಉಗ್ರರೊಂದಿಗೆ ರಾಜಿ ಮಾಡಿಕೊಂಡಿದೆ. ಯುಪಿಎ ಅವಧಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆದಿಲ್ಲ ಎನ್ನುವ ಮೂಲಕ ಮೋದಿ ಸೇನೆಯನ್ನು ಅಪಮಾನಿಸಿದ್ದಾರೆ,‘ ಎಂದು ರಾಹುಲ್ ಗಾಂಧಿ ಅವರು ಆರೋಪಿಸಿದ್ದಾರೆ.
ಇಂದು ನವದೆಹಲಿಯಲ್ಲಿ ಸುದ್ದಗೋಷ್ಠಿ ನಡೆಸಿದ ಅವರು ನರೇಂದ್ರ ಮೋದಿ ಅವರ ವಿರುದ್ಧ ಕಿಡಿ ಕಾರಿದರು. ಮಸೂದ್ ಅಜರ್‌ನನ್ನು ಜಾಗತಿಕ ಉಗ್ರನ ಪಟ್ಟಿಗೆ ಸೇರಿದ ಬಗ್ಗೆ ದೇಶದಲ್ಲಿ ಸದ್ಯ ಚರ್ಚೆಗಳಾಗುತ್ತಿರುವಾಗಲೇ, ಮಸೂದ್‌ನನ್ನು ಬಿಡುಗಡೆ ಮಾಡಿದ್ದು ಯಾರು ಎಂಬ ಪ್ರಶ್ನೆಯನ್ನೂ ರಾಹುಲ್ ಎತ್ತಿದ್ದಾರೆ. ’ಮಸೂದ್ ಅಜರ್‌ನನ್ನು ಪಾಕಿಸ್ತಾನಕ್ಕೆ ಬಿಟ್ಟು ಬಂದಿದ್ದು ಯಾರು. ಕಾಂಗ್ರೆಸ್ ಬಿಟ್ಟು ಬಂತೇ, ಭಯೋತ್ಪಾದಕರೊಂದಿಗೆ ರಾಜಿ ಮಾಡಿಕೊಂಡಿದ್ದು ಯಾರು, ಕಾಂಗ್ರೆಸ್ ಪಕ್ಷವೇನು ಮಸೂದ್‌ನನ್ನು ಬಿಡುಗಡೆ ಮಾಡಲಿಲ್ಲ. ಭಯೋತ್ಪಾದಕರ ಜತೆಗೆ ಬಿಜೆಪಿ ರಾಜಿಗಿಳಿದಿದೆ ಎಂಬುದು ಸತ್ಯ ಸಂಗತಿ,‘ ಎಂದು ರಾಹುಲ್ ಗಾಂಧಿ ತೀವ್ರ ಟೀಕಾ ಪ್ರಹಾರ ನಡೆಸಿದರು.
ಯುಪಿಎ ಸರ್ಕಾರ ತನ್ನ ಅವಧಿಯಲ್ಲಿ ನಡೆಸಿರುವ ಸರ್ಜಿಕಲ್ ಸ್ಟ್ರೈಕ್‌ಗಳು ಕೇವಲ ‘ವಿಡಿಯೋ ಗೇಮ್‌ಗಳು‘ ಎಂಬ ಮೋದಿ ಮಾತಿಗೆ ರಾಹುಲ್ ಆಕ್ಷೇಪ ವ್ಯಕ್ತಪಡಿಸಿದರು. ‘ಸೇನೆಯನ್ನು ನಾವು ರಾಜಕೀಯಕ್ಕೆ ಬಳಸಿಕೊಳ್ಳುವುದಿಲ್ಲ. ಭಾರತೀಯ ಸೇನೆ ಮೋದಿಯ ವೈಯಕ್ತಿಕ ಅಸ್ತಿಯಲ್ಲ. ಯುಪಿಎ ಅವಧಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆದಿಲ್ಲ ಎಂದು ಮೋದಿ ಹೇಳುವುದೇ ಆದರೆ, ಅದು ಸೇನೆಗೆ ಮಾಡಿದ ಅಪಮಾನ,’ ಎಂದು ಅವರು ಗುಡುಗಿದರು.
ಚೌಕಿದಾರನೇ ಕಳ್ಳ ಎಂಬ ನನ್ನ ಮಾತಿಗೆ ನಾನು ಈಗಲೂ ಬದ್ಧ ಎಂದು ರಾಹುಲ್ ಗಾಂಧಿ ಅವರು ಸ್ಪಷ್ಪಪಡಿಸಿದರು. ‘ಚೌಕಿದಾರನೇ ಚೋರ ಎಂದು ಕೋರ್ಟ್ ಹೇಳಿದೆ ಎಂದು ನಾನು ಹೇಳಿದ್ದೆ. ನಾನು ಆ ವಿಚಾರವಾಗಿ ಸುಪ್ರೀಂ ಕೋರ್ಟ್ ಅನ್ನು ಕ್ಷಮೆ ಕೋರುತ್ತೇನೆ. ಆದರೆ, ಬಿಜೆಪಿಗಾಗಲಿ ಮೋದಿಗಾಗಲಿ ನಾನು ಕ್ಷಮೆ ಕೋರುವುದಿಲ್ಲ. ಚೌಕಿದಾರನೇ ಕಳ್ಳ ಎಂಬುದು ಮುಂದೆಯೂ ನಮ್ಮ ಘೋಷಣೆಯಾಗಿಯೇ ಉಳಿಯಲಿದೆ. ಚೌಕಿದಾರನೇ ಕಳ್ಳ ಎಂಬುದೇ ವಾಸ್ತವ‘ ಎಂದು ಅವರು ಸ್ಪಷ್ಟಪಡಿಸಿದರು.
ಚರ್ಚೆಗೆ ಎಲ್ಲಿಗೆ ಬರುವಂತೆ ಹೇಳುತ್ತಾರೋ ನಾನು ಅಲ್ಲಿಗೆ ಹೋಗಲು ಸಿದ್ಧ. ಆದರೆ, ಅನಿಲ್ ಅಂಬಾನಿ ಮನೆಗೆ ನಾನು ಬರಲಾರೆ ಎಂದು ಅವರು ಕುಹಕವಾಡಿದರು.
ಇದೇ ವೇಳೆ ವಿಷಯಾಧಾರಿತ ಟೀಕೆಗಳನ್ನೂ ಮೋದಿ ವಿರುದ್ಧ ರಾಹುಲ್ ಗಾಂಧಿ ಅವರು ಪ್ರಯೋಗಿಸಿದರು. ನಿರುದ್ಯೋಗ,ಕೃಷಿ ಬಿಕ್ಕಟ್ಟು ಮತ್ತು ಸೇನೆಯ ವಿಚಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ಮೋದಿ ವಿರುದ್ಧ ರಾಹುಲ್ ವಾಗ್ದಾಳಿ ನಡೆಸಿದರು. ನಿರುದ್ಯೋಗ, ಕೃಷಿ ಮತ್ತು ಸಾಮಾನ್ಯರ ಬವಣೆಗಳ ಬಗ್ಗೆ ಮೋದಿ ಮಾತನಾಡುವುದೇ ಇಲ್ಲ ಎಂದು ಅವರು ಟೀಕಿಸಿದರು. ಈ ಮೂಲಭೂತ ಸಂಗತಿಗಳ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ರಾಹುಲ್ ಗಾಂಧಿ ಮೋದಿಗೆ ಸವಾಲೆಸೆದರು.
ಲೋಕಸಭೆ ಚುನಾವಣೆ ಅರ್ಧ ಮುಗಿದಿದೆ. ತಮ್ಮ ನೆಲೆ ಕುಸಿಯುತ್ತಿರುವ ಬಗ್ಗೆ ಮೋದಿಗೆ ಈಗ ಅರಿವಾಗಿದೆ. ನಮ್ಮ ಲೆಕ್ಕಾಚಾರಗಳೂ ಅದನ್ನೇ ಹೇಳುತ್ತಿವೆ. ಬಿಜೆಪಿ ಈ ಬಾರಿ ಸೋಲಲಿದೆ ಎಂಬುದು ಸತ್ಯ. ಅದು ಮೋದಿ ಅವರ ಮುಖದಲ್ಲೂ ಅದು ಕಾಣುತ್ತಿದೆ ಎಂದು ರಾಹುಲ್ ಗೇಲಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.