ನವದೆಹಲಿ: ಭಾರತ ಬೃಹತ್ ಲಸಿಕೆ ಅಭಿಯಾನಕ್ಕೆ ಸಜ್ಜಾಗಿದ್ದು, ಸರ್ಕಾರ ವಿತರಿಸುತ್ತಿರುವ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಲಸಿಕೆಗಳು, ಅವುಗಳ ವಿರೋಧಾಭಾಸಗಳು ಮತ್ತು ಲಸಿಕೆ (ಎಇಎಫ್‌ಐ) ಹಾಕಿಸಿಕೊಂಡ ಬಳಿಕ ಆಗುವ ಸಣ್ಣ ಪ್ರತಿಕೂಲ ಪರಿಣಾಮಕ್ಕೆ ಸಂಬಂಧಿಸಿದ ತುಲನಾತ್ಮಕ ಫ್ಯಾಕ್ಟ್ ಶೀಟ್ ಅನ್ನು ಗುರುವಾರ ಕೇಂದ್ರ ಆರೋಗ್ಯ ಸಚಿವಾಲಯವು ಬಿಡುಗಡೆ ಮಾಡಿದೆ.
ಕೋವಿಡ್ -19 ಲಸಿಕೆಗಳು ಮತ್ತು ಇತರ ಲಸಿಕೆಗಳನ್ನು ಒಟ್ಟಿಗೆ ಹಾಕಬಾರದು ಎಂದು ಮಾರ್ಗಸೂಚಿಗಳಲ್ಲಿ ಸರ್ಕಾರ ನಿರ್ದಿಷ್ಟವಾಗಿ ತಿಳಿಸಿದೆ. ಅಂದರೆ, ಒಂದು ಲಸಿಕೆ ಪಡೆದ ಬಳಿಕ ಮತ್ತೊಂದು ಲಸಿಕೆಗೆ ಕನಿಷ್ಠ 2 ವಾರಗಳ ಅಂತರ ಇರಬೇಕು.
ಅಲ್ಲದೆ, ಲಸಿಕೆ ಡೋಸೇಜ್ ಅನ್ನು ಪರಸ್ಪರ ಬದಲಾಯಿಸಲಾಗುವುದಿಲ್ಲ, ಅಂದರೆ, ಮೊದಲ ಮತ್ತು ಎರಡನೆಯ ಡೋಸ್ ಕೋವಿಶೀಲ್ಡ್ ಅಥವಾ ಕೊವಾಕ್ಸಿನ್ ಒಂದೇ ಲಸಿಕೆಯಾಗಿರಬೇಕು.ಉದಾಹರಣೆಗೆ ನೀವು ಮೊದಲ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದಿದ್ದರೆ ಎರಡನೇ ಡೋಸ್ ಸಹ ಕೋವಿಶೀಲ್ಡ್ ಲಸಿಕೆಯನ್ನು ಪಡೆಯಬೇಕು.
ಇಲ್ಲಿವೆ ಲಸಿಕೆ ಅಭಿಯಾನದ ಪ್ರಮುಖ ಅಂಶಗಳು:
ಕೋವಿಡ್ ಲಸಿಕೆಯನ್ನು ಯಾರು ಹಾಕಿಸಿಕೊಳ್ಳಬಾರದು?
1. 18 ವರ್ಷದೊಳಗಿನ ವ್ಯಕ್ತಿಗಳು ಲಸಿಕೆ ಹಾಕಿಸಿಕೊಳ್ಳಬಾರದು
2. ಗರ್ಭಿಣಿ ಮತ್ತು ಹಾಲುಣಿಸುತ್ತಿರುವ ಮಹಿಳೆಯರಿಗೆ ಕೋವಿಡ್ -19 ಲಸಿಕೆ ನೀಡಬಾರದು. ಏಕೆಂದರೆ, ಗರ್ಭಿಣಿಯರು, ಹಾಲುಣಿಸುವ ಅಥವಾ ಗರ್ಭಧಾರಣೆಯ ದೃಢೀಕರಣ ನಿರೀಕ್ಷೆಯಲ್ಲಿರುವ ಮಹಿಳೆಯರು ಯಾವುದೇ ಲಸಿಕೆ ಪ್ರಯೋಗಗಳ ಭಾಗವಾಗಿರುವುದಿಲ್ಲ.
3. ಕೋವಿಡ್ -19 ಲಸಿಕೆ (ಪ್ರಯೋಗಗಳ ಸಮಯದಲ್ಲಿ) ಪಡೆದ ಸಂದರ್ಭ ಅನಾಫಿಲ್ಯಾಕ್ಟಿಕ್ ಅಥವಾ ಅಲರ್ಜಿಯ ಪ್ರತಿಕ್ರಿಯೆ ಅನುಭವಿಸಿದವರು ಲಸಿಕೆಯನ್ನು ಸ್ವೀಕರಿಸಬಾರದು.
4.. ಲಸಿಕೆಗಳು ಅಥವಾ ಚುಚ್ಚುಮದ್ದಿನ ಚಿಕಿತ್ಸೆಗಳು, ಔಷಧೀಯ ಉತ್ಪನ್ನಗಳು ಅಥವಾ ಆಹಾರ ಪದಾರ್ಥಗಳಿಗೆ ತಕ್ಷಣದ ಅಥವಾ ವಿಳಂಬವಾದ ಅನಾಫಿಲ್ಯಾಕ್ಸಿಸ್ ಅಥವಾ ಅಲರ್ಜಿಯ ಪ್ರತಿಕ್ರಿಯೆ ಇತಿಹಾಸ ಹೊಂದಿರುವವರು ಲಸಿಕೆ ತೆಗೆದುಕೊಳ್ಳಬಾರದು.
5. ರೋಗಲಕ್ಷಣ ಇರುವ ಸಕ್ರಿಯ ಕೋವಿಡ್ 19 ರೋಗಲಕ್ಷಣ ಇರುವವರು ಸೋಂಕಿನಿಂದ ಚೇತರಿಸಿಕೊಂಡ 4–8 ವಾರಗಳ ಬಳಿಕವಷ್ಟೇ ಲಸಿಕೆ ಪಡೆಯಬಹುದು.
6. ಮೊನೊಕ್ಲೋನಲ್ ಪ್ರತಿಕಾಯಗಳು ಅಥವಾ ಚೇತರಿಸಿಕೊಳ್ಳುವ ಪ್ಲಾಸ್ಮಾ ಚಿಕಿತ್ಸೆಯನ್ನು ಪಡೆಯುತ್ತಿರುವ ರೋಗಿಗಳು ಚೇತರಿಸಿಕೊಂಡ ನಂತರ ಕನಿಷ್ಠ 4-8 ವಾರಗಳವರೆಗೆ ಲಸಿಕೆ ಪಡೆಯುವುದನ್ನು ಮುಂದೂಡಬೇಕು.
7. ತೀವ್ರ ಅನಾರೋಗ್ಯ ಮತ್ತು ಆಸ್ಪತ್ರೆಗೆ ದಾಖಲಾದ ಯಾರಾದರೂ (ಕೋವಿಡ್ -19 ಸಂಬಂಧಿಸಿದಲ್ಲದ ಕಾಯಿಲೆಗಳಿದ್ದರೂ ಸಹ) ಈಗ ಲಸಿಕೆ ತೆಗೆದುಕೊಳ್ಳಬಾರದು. ಸಂಪೂರ್ಣ ಚೇತರಿಕೆಯ ನಂತರ 4 ರಿಂದ 8 ವಾರಗಳ ಬಳಿಕ ಲಸಿಕೆ ತೆಗೆದುಕೊಳ್ಳಬಹುದು.
8. ಥ್ರಂಬೋಸೈಟೋಪೆನಿಯಾ (ಅಸಹಜವಾಗಿ ಕಡಿಮೆ ಪ್ಲೇಟ್‌ಲೆಟ್‌ಗಳು) ಇರುವವರಿಗೆ ಕೋವಿಶೀಲ್ಡ್ ಅನ್ನು ಎಚ್ಚರಿಕೆಯಿಂದ ನೀಡಬೇಕು.
ಈ ಕೆಳಕಂಡ ಆರೋಗ್ಯದ ಸ್ಥಿತಿ ಹೊಂದಿರುವವರಿಗೆ ಕೋವಿಡ್ ಲಸಿಕೆ ನಿರ್ಬಂಧವಿಲ್ಲ
1. ಈ ಹಿಂದೆ SARS-CoV-2 ಸೋಂಕಿನ ಇತಿಹಾಸ ಹೊಂದಿರುವ ವ್ಯಕ್ತಿಗಳು (ಸಿರೊ-ಪಾಸಿಟಿವಿಟಿ) ಅಥವಾ ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದವರು.
2. ದೀರ್ಘಕಾಲದ ಕಾಯಿಲೆಗಳು ಮತ್ತು ಅಸ್ವಸ್ಥತೆಗಳ ಇತಿಹಾಸ (ಹೃದಯ, ನರರೋಗ, ಶ್ವಾಸಕೋಶ ಸಮಸ್ಯೆ, ಚಯಾಪಚಯ ಸಮಸ್ಯೆ, ಮೂತ್ರಪಿಂಡ ಇತ್ಯಾದಿ) ಹೊಂದಿರುವವರು.
3. ರೋಗನಿರೋಧಕಶಕ್ತಿ-ಕೊರತೆ, ಎಚ್‌ಐವಿ, ಯಾವುದೇ ಸ್ಥಿತಿಯ ಕಾರಣದಿಂದಾಗಿ ರೋಗನಿರೋಧಕ-ನಿಗ್ರಹದ ರೋಗಿಗಳು (ಇವರಲ್ಲಿ ಕೋವಿಡ್ -19 ಲಸಿಕೆಯ ಪ್ರತಿಕ್ರಿಯೆ ಈ ವ್ಯಕ್ತಿಗಳಲ್ಲಿ ಕಡಿಮೆ ಇರಬಹುದು)
ಅಡ್ಡಪರಿಣಾಮಗಳು
1. ಕೋವಿಶೀಲ್ಡ್ ಲಸಿಕೆ ಪಡೆದ ಬಳಿಕ ಸಂಭವನೀಯ ಸಣ್ಣ ಪ್ರಮಾಣದ ಅಡ್ಡಪರಿಣಾಮಗಳು – ಇಂಜೆಕ್ಷನ್ ಪಡೆದ ಜಾಗದಲ್ಲಿ ಮೃದುತ್ವ ಮತ್ತು ನೋವು, ತಲೆನೋವು, ಆಯಾಸ, ಸ್ನಾಯುಗಳ ನೋವು, ಅಸ್ವಸ್ಥತೆ, ಜ್ವರ, ಶೀತ ಮತ್ತು ವಾಕರಿಕೆ ಕಂಡುಬರಬಹುದು.
ಲಸಿಕೆ ಪಡೆದ ನಂತರ ಡಿಮೈಲೀನೇಟಿಂಗ್ ಅಸ್ವಸ್ಥತೆ (ನಿಮ್ಮ ಮೆದುಳು, ಆಪ್ಟಿಕ್ ನರಗಳು ಮತ್ತು ಬೆನ್ನುಹುರಿಯಲ್ಲಿನ ನರಗಳನ್ನು ಸುತ್ತುವರೆದಿರುವ ರಕ್ಷಣಾತ್ಮಕ ಹೊದಿಕೆಗೆ (ಮೈಲಿನ್ ಪೊರೆ) ಹಾನಿಯಾಗುವ ಸ್ಥಿತಿ)ಗಳ ಅತ್ಯಂತ ವಿರಳ ಘಟನೆಗಳು ವರದಿಯಾಗಿವೆ.
2. ಕೊವ್ಯಾಕ್ಸಿನ್ ಲಸಿಕೆ ಪಡೆದ ನಂತರ ಚುಚ್ಚುಮದ್ದು ಪಡೆದ ಜಾಗದಲ್ಲಿ ನೋವು, ತಲೆನೋವು, ಆಯಾಸ, ಜ್ವರ, ಮೈಕೈ ನೋವು, ಹೊಟ್ಟೆ ನೋವು, ವಾಕರಿಕೆ ಮತ್ತು ವಾಂತಿ, ತಲೆತಿರುಗುವಿಕೆ, ನಡುಕ, ಬೆವರುವುದು, ಶೀತ, ಕೆಮ್ಮು ಲಕ್ಷಣ ಕಂಡುಬರಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.