ನವದೆಹಲಿ: ಉತ್ತರ ದೆಹಲಿಯ ಬುರಾರಿಯಲ್ಲಿ ಒಂದೇ ಕುಟುಂಬದ 11 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿ ಸುದ್ದಿವಾಹಿನಿಗಳು ಹರಡುತ್ತಿರುವ ವೈಭವೀಕರಿಸಿದ ವದಂತಿಗಳಿಗೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದೆ.
ಘಟನೆ ಕುರಿತು ಸುದ್ದಿವಾಹಿನಿಗಳು ಮಾಡುತ್ತಿರುವ ವಿಶ್ಲೇಷಣೆಗಳು, ವೈಭವೀಕರಣ ಮತ್ತು ಇದಕ್ಕಾಗಿ ಮಾಡುವ ಸಂದರ್ಶನಗಳಿಂದ ಕಿರಿಕಿರಿ ಅನುಭವಿಸುತ್ತಿರುವುದಾಗಿ ಬುರಾರಿ ನಿವಾಸಿಗಳು ದೂರಿದ್ದಾರೆ ಎಂದು ದಿ ಕ್ವಿಂಟ್ ಜಾಲತಾಣ ವರದಿ ಮಾಡಿದೆ.
ಕುಟುಂಬದ ಚಟುವಟಿಕೆಗಳು ದಾಖಲಾಗಿರುವ 11 ಡೈರಿಗಳು ಸ್ಥಳದಲ್ಲಿ ಪತ್ತೆಯಾಗಿದ್ದವು. ಅದರಲ್ಲಿರುವ ಅಂಶಗಳ ಆಧಾರದಲ್ಲಿ ‘ಎಬಿಪಿ’ ಸುದ್ದಿವಾಹಿನಿ ತನ್ನ ‘ಸನ್‌ಸನೀ’ ಕಾರ್ಯಕ್ರಮದಲ್ಲಿ ಇಡೀ ಪ್ರಕರಣವನ್ನೇ ಮರುಸೃಷ್ಟಿ ಮಾಡಿ ವೈಭವೀಕರಿಸಿ ತೋರಿಸಿತ್ತು. ಇತರ ಸುದ್ದಿವಾಹಿನಿಗಳೂ ಬೂತ–ಪ್ರೇತಗಳ ವಿಷಯಗಳನ್ನೊಳಗೊಂಡ, ಮೂಢನಂಬಿಕೆಗೆ ಪ್ರಚೋದನೆ ನೀಡುವಂತಹ ಅನೇಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದ್ದವು.
ಮಾಧ್ಯಮದವರಿಂದ ದೂರ: ಆತ್ಮಹತ್ಯೆ ಪ್ರಕರಣದ ನಂತರದ ಬೆಳವಣಿಗೆಗಳಿಂದಾಗಿ ಬುರಾರಿ ನಿವಾಸಿಗಳು ಮಾಧ್ಯಮದವರಿಂದ ದೂರ ಉಳಿಯುತ್ತಿದ್ದಾರೆ. ಒಬ್ಬ ಮಹಿಳೆಯನ್ನು ಮಾತನಾಡಿಸಲು ಮುಂದಾದಾಗ ಆಕೆ ಅದಕ್ಕೆ ಅವಕಾಶ ನೀಡದೆ ಮನೆಯೊಳಕ್ಕೆ ತೆರಳಿ ಬಾಗಿಲು ಹಾಕಿಕೊಂಡರು. ದೇಗುಲದ ಅರ್ಚಕರೊಬ್ಬರು ಭೇಟಿಯಾಗಲು ಸಿಕ್ಕಿದರೂ ಸಂಭಾಷಣೆ ಆರಂಭಿಸುವ ಮುನ್ನವೇ ನಿರ್ಗಮಿಸಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಕೆಲವರು ಮಾಧ್ಯಮಗಳಿಗೆ ಬಹಿಷ್ಕಾರ ಹಾಕಲು ನಿರ್ಧರಿಸಿದ್ದಾರೆ. ‘ಭಾಟಿಯಾ ಕುಟುಂಬದವರು ಆತ್ಮಹತ್ಯೆ ಮಾಡಿಕೊಂಡ ಮನೆಯ ತಾರಸಿಯ ಮೇಲೆ ತೊಳೆದ ಬಟ್ಟೆಗಳು ಹೇಗೆ ಬಂದವು? ಮೃತರ ಪ್ರೇತಗಳು ಬಂದು ತೊಳೆದು ಹೋಗಿರಬಹುದೇ ಎಂಬ ಊಹಾಪೋಹದ ಬಗ್ಗೆ ಪ್ರಶ್ನಿಸಿದರು. ನಮಗೇ ಅಂತಹ ಘಟನೆ ಕಾಣಿಸದಿರುವಾಗ ಅವರಿಗೆ ಹೇಗೆ ಕಂಡವು?’ ಎಂದು ಮಹಿಳೆಯೊಬ್ಬರು ಪತ್ರಕರ್ತರು ಕೇಳುತ್ತಿರುವ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಘಟನೆಯ ನಂತರ ದೆವ್ವಗಳ ಕಾಟಕ್ಕೆ ಹೆದರಿ ಬುರಾರಿ ನಿವಾಸಿಗಳು ಮನೆ ಮಾರಾಟ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ಬಿಸಲಾಗುತ್ತಿದೆ. ಆದರೆ, ನಾವು ಇನ್ನೂ ಇಲ್ಲೇ ವಾಸವಿದ್ದೇವೆ. ಯಾರೊಬ್ಬರೂ ಮನೆ ಮಾರಾಟ ಮಾಡಿಲ್ಲ. ಇದೆಲ್ಲ ಮಾಧ್ಯಮದವರ ಸೃಷ್ಟಿ ಎಂದು ವಿಮಲಾ ಸೋನಿ ಎಂಬುವವರು ಆರೋಪಿಸಿದ್ದಾರೆ.
ಹದಿಹರೆಯದವರು, ಮಕ್ಕಳೂ ಸಹ ಭೀತಿಗೊಳಗಾಗಿಲ್ಲ. ಆದರೆ, ಮಾಧ್ಯಮಗಳು ಆತಂಕ ಸೃಷ್ಟಿಸುವಂತಹ ವರದಿಗಳನ್ನು ಪ್ರಸಾರ ಮಾಡುತ್ತಿವೆ ಎಂದು ಸ್ಥಳೀಯರು ಆರೋಪಿಸಿರುವುದನ್ನು ದಿ ಕ್ವಿಂಟ್ ಉಲ್ಲೇಖಿಸಿದೆ.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.