ADVERTISEMENT

ಯಾತ್ರೆ ನಿಲ್ಲಿಸಲು ‘ಕೋವಿಡ್‌ ನಾಟಕ’: ಜೈರಾಂ ರಮೇಶ್‌

ಪಿಟಿಐ
Published 23 ಡಿಸೆಂಬರ್ 2022, 12:37 IST
Last Updated 23 ಡಿಸೆಂಬರ್ 2022, 12:37 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಫರೀದಾಬಾದ್‌: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ನೇತೃತ್ವದ ಭಾರತ ಜೋಡೊ ಯಾತ್ರೆಯನ್ನು ವಿಫಲಗೊಳಿಸಲು ಸರ್ಕಾರ ‘ಕೋವಿಡ್‌ ನಾಟಕ’ ಆರಂಭಿಸಿದೆ ಎಂದು ಪಕ್ಷದ ಹಿರಿಯ ನಾಯಕ ಜೈರಾಂ ರಮೇಶ್‌ ಅವರು ಶುಕ್ರವಾರ ಆರೋಪಿಸಿದರು.

ವೈಜ್ಞಾನಿಕ ಆಧಾರದಲ್ಲಿ ಸಾರ್ವತ್ರಿಕವಾಗಿ ಅನುಷ್ಠಾನಗೊಳಿಸುವ ಯಾವುದೇ ಮಾರ್ಗಸೂಚಿಯನ್ನು ಪಕ್ಷವು ಅನುಸರಿಸಲಿದೆ ಎಂದು ಹೇಳಿದರು.

ಪಖಲ್‌ ಗ್ರಾಮದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ಭಾರತ ಜೋಡೊ ಯಾತ್ರೆಯು ದೆಹಲಿ ಪ್ರವೇಶಿಸುವುದನ್ನು ವಿಫಲಗೊಳಿಸಲೆಂದೇ ಕಳೆದ ಎರಡು ದಿನಗಳಿಂದ ‘ಕೋವಿಡ್‌ ನಾಟಕ’ ನಡೆಯುತ್ತಿದೆ’ ಎಂದು ಹೇಳಿದರು.

ADVERTISEMENT

‘ಕೇವಲ 18 ದಿನಗಳಲ್ಲಿ ಕೋವಿಡ್‌ ಪರಿಸ್ಥಿತಿಯಿಂದ (2020ರಲ್ಲಿ) ಹೊರಬರಬಹುದು ಎಂದು ಸಲಹೆ ನೀಡಿದ ಪಕ್ಷ ನಮ್ಮದಲ್ಲ. ‘ಸಭ್ಯ’ರೊಬ್ಬರು ನಾವು ಕೇವಲ 18 ದಿನಗಳಲ್ಲಿ ಕೋವಿಡ್‌ ವಿರುದ್ಧ ಜಯ ಗಳಿಸಬಹುದು ಎಂದು ಹೇಳಿದ್ದರು. ಕೊರೊನಾ ವಿರುದ್ಧ ಹೋರಾಡಲು ಮನೆಯ ಬಾಲ್ಕನಿಯಲ್ಲಿ ದೀಪ ಹಚ್ಚಿ ಎಂದು ಕರೆ ಕೊಟ್ಟಿದ್ದರು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

‘ಪ್ರಧಾನಿ ಮೋದಿ ಅವರಿಗಿಂತ ಹೆಚ್ಚು ದಿನ ನಾನು ಮಾಸ್ಕ್‌ ಧರಿಸಿದ್ದೇನೆ, ಟಿ.ವಿಯಲ್ಲಿ ಕಾಣಿಸಿಕೊಳ್ಳಲು ಮಾತ್ರ ಅವರು ಗುರುವಾರ ಮಾಸ್ಕ್‌ ಧರಿಸಿದ್ದರು’ ಎಂದು ದೂರಿದರು.

ಯಾತ್ರೆಯು ಶನಿವಾರ ದೆಹಲಿಯನ್ನು ಪ್ರವೇಶಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.