ADVERTISEMENT

ಕೇಜ್ರಿವಾಲ್‌ ಜೈಲಿನಲ್ಲಿಡಲು ವ್ಯವಸ್ಥೆಯ ಸಂಚು; ಇದುವೇ ತುರ್ತುಪರಿಸ್ಥಿತಿ: ಸುನೀತಾ

ಪಿಟಿಐ
Published 26 ಜೂನ್ 2024, 11:52 IST
Last Updated 26 ಜೂನ್ 2024, 11:52 IST
ಸುನೀತಾ ಕೇಜ್ರಿವಾಲ್ 
ಸುನೀತಾ ಕೇಜ್ರಿವಾಲ್    

ನವದೆಹಲಿ: ’ಸರ್ಕಾರದ ಇಡೀ ವ್ಯವಸ್ಥೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜೈಲಿನಲ್ಲೇ ಇರುವಂತೆ ನೋಡಿಕೊಳ್ಳಲು ಬಳಕೆಯಾಗುತ್ತಿದೆ. ಇದನ್ನೇ ಸರ್ವಾಧಿಕಾರ ಹಾಗೂ ತುರ್ತು ಪರಿಸ್ಥಿತಿ’ ಎಂದು ಕೇಜ್ರಿವಾಲ್ ಪತ್ನಿ ಸುನೀತಾ ಆರೋಪಿಸಿದ್ದಾರೆ.

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಸಿಬಿಐ ಬುಧವಾರ ಬಂಧಿಸಿದೆ. ಹೆಚ್ಚಿನ ತನಿಖೆಗಾಗಿ ಐದು ದಿನಗಳ  ಕಾಲ ವಶಕ್ಕೆ ಪಡೆದಿದೆ. ನಕಲಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿದ್ದರ ಹಿಂದೆ ಬಿಜೆಪಿ ಸಂಚು ಇದೆ ಎಂದು ಆಮ್ ಆದ್ಮಿ ಪಾರ್ಟಿ (ಎಎಪಿ) ಆರೋಪಿಸಿದೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸುನೀತಾ, ‘ತನ್ನ ಪತಿಗೆ ಜೂನ್ 20ರಂದು ಜಾಮೀನು ಮಂಜೂರಾಗಿತ್ತು. ಆದರೆ ಜಾರಿ ನಿರ್ದೇಶನಾಲಯ ಅದಕ್ಕೆ ತಕ್ಷಣವೇ ತಡೆ ತಂದಿತು. ಅದರ ಮರುದಿನವೇ ಅದೇ ಪ್ರಕರಣದಲ್ಲಿ ಸಿಬಿಐ ಆರೋಪ ಹೋರಿಸಿ, ಬುಧವಾರ ಬಂಧಿಸಿದೆ. ಕೇಜ್ರಿವಾಲ್ ಅವರು ಜೈಲಿನಿಂದ ಹೊರಗೆ ಬಾರದಂತೆ ಇಡೀ ವ್ಯವಸ್ಥೆಯೇ ಸಂಚು ರೂಪಿಸಿದೆ. ಇದು ನಿಜವಾಗಿಯೂ ನ್ಯಾಯವಲ್ಲ. ಇದು ಸರ್ವಾಧಿಕಾರ, ಇದುವೇ ತುರ್ತು ಪರಿಸ್ಥಿತಿ’ ಎಂದಿದ್ದಾರೆ.

ADVERTISEMENT

‘ಕ್ರೌರ್ಯದ ಎಲ್ಲಾ ಹಂತಗಳನ್ನೂ ಸರ್ವಾಧಿಕಾರಿ ದಾಟಿದ್ದಾರೆ. ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು ಸಿಗುವ ಎಲ್ಲಾ ಸಾಧ್ಯತೆಗಳೂ ಇಂದು ಹೆಚ್ಚಾಗಿದ್ದವು. ಇದರಿಂದ ತೀವ್ರವಾಗಿ ಭಯಗೊಂಡ ಬಿಜೆಪಿ, ಸಿಬಿಐ ಮೂಲಕ ನಕಲಿ ಪ್ರಕರಣದಲ್ಲಿ ಬಂಧಿಸಿದೆ. ಕೇಜ್ರಿವಾಲ್ ಅವರ ದೇಹದ ರಕ್ತದಲ್ಲಿನ ಸಕ್ಕರೆ ಅಂಶ ಕುಸಿದ ಸಂದರ್ಭದಲ್ಲೇ ಅವರನ್ನು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಸಿಬಿಐ ಕರೆದೊಯ್ಯಿತು. ನೀವು ಎಷ್ಟೇ ದಬ್ಬಾಳಿಕೆ ನಡೆಸಿ, ನಿಮ್ಮೆದುರು ಕೇಜ್ರಿವಾಲ್ ಎಂದಿಗೂ ತಲೆ ಬಾಗುವುದಿಲ್ಲ ಅಥವಾ ಸೋಲುವುದಿಲ್ಲ’ ಎಂದು ಎಎಪಿ ತನ್ನ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.

‘ಕೇಜ್ರಿವಾಲ್ ಯಾವುದೇ ಭಯೋತ್ಪಾದಕ ಕೃತ್ಯ ನಡೆಸಿಲ್ಲ. ಈ ಪ್ರಕರಣದಲ್ಲಿ ಸಿಬಿಐ ಈವರೆಗೂ ನಾಲ್ಕು ಬಾರಿ ಆರೋಪ ಪಟ್ಟಿ ಸಲ್ಲಿಸಿದೆ. ಅಲ್ಲಿ ಎಲ್ಲಿಯೂ ಕೇಜ್ರಿವಾಲ್ ಹೆಸರನ್ನು ಪ್ರಸ್ತಾಪಿಸಿಲ್ಲ. ಆದರೆ ಜಾಮೀನು ಸಿಗುವ ಹಂತದಲ್ಲಿ ಸಿಬಿಐಗೆ ಕೇಜ್ರಿವಾಲ್ ನೆನಪಾಗಿದೆ. ಇಲ್ಲಿ ಏನು ನಡೆಯುತ್ತಿದೆ ಎಂಬುದು ಇಡೀ ದೇಶಕ್ಕೇ ಗೊತ್ತಿದೆ. ಇಂಥ ಪರಿಸ್ಥಿತಿಗಿಂತ ದೊಡ್ಡ ತುರ್ತು ಪರಿಸ್ಥಿತಿ ಮತ್ತೊಂದಿಲ್ಲ’ ಎಂದು ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಆರೋಪಿಸಿದ್ದಾರೆ.

‘ಬಿಜೆಪಿ ಹಾಗೂ ಪ್ರಧಾನಿಗೆ ಒಂದು ವಿಷಯವನ್ನು ಹೇಳಬಯಸುತ್ತೇನೆ. ನೀವು ತುರ್ತು ಪರಿಸ್ಥಿತಿಯನ್ನು ಹೇರಿದ್ದೀರಿ. ಇಡೀ ದೇಶವೇ ಈ ನಿಮ್ಮ ಕೊಳಕು ರಾಜಕೀಯವನ್ನು ನೋಡುತ್ತಿದೆ. ಸಾರ್ವಜನಿಕವಾಗಿ ನಮ್ಮನ್ನು ಗುಂಡಿಕ್ಕಿ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ತಮ್ಮ ಮೇಲೆ ಬಂದಿರುವ ಎಲ್ಲಾ ಆರೋಪವನ್ನು ಕೇಜ್ರಿವಾಲ್ ಅವರು ಮನೀಶ್ ಸಿಸೋಡಿಯಾ ಮೇಲೆ ಹೋರಿಸಿದ್ದಾರೆ ಎಂದು ಸುದ್ದಿವಾಹಿನಿಯೊಂದು ವರದಿ ಮಾಡಿದೆ. ಆದರೆ ಇದನ್ನು ನಮ್ಮ ವಕೀಲರು ಹಾಗೂ ಕೇಜ್ರಿವಾಲ್ ಅವರು ನ್ಯಾಯಾಲಯದಲ್ಲಿ ನಿರಾಕರಿಸಿದ್ದಾರೆ. ತಾನು ಹಾಗೆ ಹೇಳಿಯೇ ಇಲ್ಲ ಎಂಬ ಕೇಜ್ರಿವಾಲ್ ಅವರ ಹೇಳಿಕೆಯನ್ನು ನ್ಯಾಯಾಧೀಶರು ನ್ಯಾಯಾಲಯದಲ್ಲಿ ಓದಿದ್ದಾರೆ’ ಎಂದಿದ್ದಾರೆ.

ದೆಹಲಿ ಅಬಕಾರಿ ನೀತಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅವರು ಸಿಬಿಐಗೆ ತನಿಖೆಗೆ ಶಿಫಾರಸು ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರು ಏ. 1ರಿಂದ ಬಂಧನದಲ್ಲಿದ್ದಾರೆ. ಮೇ 10ರಂದು ಸುಪ್ರೀಂ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಇದರಿಂದಾಗಿ ಅವರು ಲೋಕಸಭಾ ಚುನಾವಣೆಯಲ್ಲಿ 21 ದಿನ ಪ್ರಚಾರ ಕಾರ್ಯದಲ್ಲಿ ತೊಡಗಲು ಅವಕಾಶ ಮಾಡಿಕೊಡಲಾಗಿತ್ತು. ಜೂನ್ 2ರಂದು ಅವರು ಜೈಲಿಗೆ ಮರಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.