ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ನಡುವೆ ಸಂಬಂಧ ಇದೆಯೇ ಎಂಬ ವಿಚಾರದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ವಿದೇಶಿ ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ನೀಡಲು ಸಿಎಎ ಅವಕಾಶ ಮಾಡಿಕೊಡುತ್ತದೆ. ಭಾರತದ ನಾಗರಿಕರ ಪಟ್ಟಿಯನ್ನು ಸಿದ್ದಪಡಿಸುವ ಪ್ರಕ್ರಿಯೆಗೆ, ‘ರಾಷ್ಟ್ರೀಯ ಪೌರತ್ವ ನೋಂದಣಿ’ ಎನ್ನಲಾಗುತ್ತದೆ. ಸಿಎಎ ಈಗಾಗಲೇ ಕಾಯ್ದೆಯಾಗಿದೆ. ಆದರೆ, ಅದರ ಪ್ರಕ್ರಿಯೆಗಳನ್ನು ರೂಪಿಸಲಾಗಿಲ್ಲ. ದೇಶದಾದ್ಯಂತ ಎನ್‌ಆರ್‌ಸಿ ಜಾರಿಗೆ ತರಲು ಕೇಂದ್ರ ಸರ್ಕಾರವು ಈವರೆಗೆ ಅಧಿಸೂಚನೆ ಹೊರಡಿಸಿಲ್ಲ.
ಪೌರತ್ವ ಕಾಯ್ದೆ
*ಭಾರತದ ನೆರೆ ರಾಷ್ಟ್ರಗಳಾದ ಪಾಕಿಸ್ತಾನ, ಅಫ್ಗಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿರುವ ಮುಸ್ಲಿಮೇತರರಿಗೆ ಧರ್ಮದ ಆಧಾರದಲ್ಲಿ ಪೌರತ್ವ ನೀಡಲಾಗುತ್ತದೆ
*ಈ ದೇಶಗಳಿಂದ ಅಕ್ರಮವಾಗಿ ವಲಸೆ ಬಂದಿರುವ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ಧರ್ಮೀಯರಿಗೆ ಮಾತ್ರ ಇದರ ಅನುಕೂಲ ದೊರೆಯಲಿದೆ
*2014ರ ಡಿಸೆಂಬರ್ 31ಕ್ಕೂ ಮುನ್ನ ಅಕ್ರಮವಾಗಿ ವಲಸೆ ಬಂದವರಿಗಷ್ಟೇ ಪೌರತ್ವ ದೊರೆಯಲಿದೆ
*ಅಕ್ರಮ ವಲಸಿಗರ ವಿರುದ್ಧ ದಾಖಲಾಗಿರುವ ಪ್ರಕರಣಗಳು ರದ್ದಾಗುತ್ತವೆ
*ಯಾವುದೇ ಕಾರಣಕ್ಕೂ ಈ ಜನರ ಪೌರತ್ವ ಅರ್ಜಿಯನ್ನು ರದ್ದುಪಡಿಸುವಂತಿಲ್ಲ
*ಪೌರತ್ವಕ್ಕೆ ಅರ್ಜಿ ಸಲ್ಲಿಸಿದ ತಕ್ಷಣವೇ ಈ ಜನರಿಗೆ ಭಾರತದ ಪ್ರಜೆಗೆ ದೊರೆಯುವ ಎಲ್ಲಾ ಹಕ್ಕುಗಳು ಮತ್ತು ಸವಲತ್ತುಗಳು ದೊರೆಯುತ್ತವೆ
*ಈ ದೇಶಗಳಿಂದ ಅಕ್ರಮವಾಗಿ ವಲಸೆ ಬಂದಿರುವ ಮುಸ್ಲಿಮರಿಗೆ ಭಾರತದ ಪೌರತ್ವ ದೊರೆಯುವುದಿಲ್ಲ
*ಅಸ್ಸಾಂ ಎನ್‌ಆರ್‌ಸಿಯಿಂದ ಹೊರಗೆ ಇಡಲಾದ ಹಿಂದೂಗಳು, ಬೌದ್ಧ, ಕ್ರೈಸ್ತ, ಜೈನ ಧರ್ಮೀಯರಿಗೆ ಪೌರತ್ವ ದೊರೆಯಲಿದೆ
ಎನ್‌ಆರ್‌ಸಿ
ರಾಷ್ಟ್ರೀಯ ಪೌರತ್ವ ನೋಂದಣಿಯು (ಎನ್‌ಆರ್‌ಸಿ) ದೇಶದ ಎಲ್ಲಾ ನಾಗರಿಕರ ವಿವರವನ್ನು ಒಳಗೊಂಡ ಪಟ್ಟಿಯಾಗಿದೆ. 1955ರ ಪೌರತ್ವ ಕಾಯ್ದೆಯಲ್ಲೇ (18ನೇ ಸೆಕ್ಷನ್‌ನ 1 ಮತ್ತು 2ನೇ ಉಪಸೆಕ್ಷನ್‌ಗಳು) ಎನ್‌ಆರ್‌ಸಿ ರಚನೆ ಮತ್ತು ನಿರ್ವಹಣೆಗೆ ಅವಕಾಶ ಕಲ್ಪಿಸಲಾಗಿದೆ. ಈ ಪ್ರಕಾರ 2003ರಲ್ಲೇ ವಾಜಪೇಯಿ ಸರ್ಕಾರವು ‘ರಾಷ್ಟ್ರೀಯ ಪೌರತ್ವ ನೋಂದಣಿ ನಿಯಮಗಳನ್ನು’ ರೂಪಿಸಿದೆ. ಈ ನಿಯಮಗಳ ಪ್ರಕಾರವೇ ಅಸ್ಸಾಂನಲ್ಲಿ ಎನ್‌ಆರ್‌ಸಿ ಜಾರಿಗೆ ತರಲಾಯಿತು. ದೇಶದಾದ್ಯಂತ ಎನ್‌ಆರ್‌ಸಿ ಜಾರಿಗೆ ತಂದರೂ, ಈ ನಿಯಮಗಳನ್ನೇ ಅನುಸರಿಸಬೇಕಾಗುತ್ತದೆ. ಇಲ್ಲವೇ ಇವುಗಳಿಗೆ ತಿದ್ದುಪಡಿ ತಂದು, ನೂತನ ನಿಯಮ ರೂಪಿಸಬೇಕಾಗುತ್ತದೆ
ನೋಂದಣಿ ಪಟ್ಟಿಗಳು
(ಪೌರತ್ವ ನೋಂದಣಿ ನಿಯಮದ 3ನೇ ಸೆಕ್ಷನ್)
*ರಾಷ್ಟ್ರೀಯ ಪೌರತ್ವ ನೋಂದಣಿ ಪಟ್ಟಿ
*ರಾಜ್ಯ ಪೌರತ್ವ ನೋಂದಣಿ ಪಟ್ಟಿ
*ಜಿಲ್ಲಾ ಪೌರತ್ವ ನೋಂದಣಿ ಪಟ್ಟಿ
*ತಾಲ್ಲೂಕು ಪೌರತ್ವ ನೋಂದಣಿ ಪಟ್ಟಿ
*ಬ್ಲಾಕ್ ಮಟ್ಟದ ಪೌರತ್ವ ನೋಂದಣಿ ಪಟ್ಟಿ
ನೋಂದಣಿ ಪ್ರಕ್ರಿಯೆ
(ಪೌರತ್ವ ನೋಂದಣಿ ನಿಯಮದ 4 ಮತ್ತು7ನೇ ಸೆಕ್ಷನ್)
*ಪೌರತ್ವ ನೋಂದಣಿ ಪ್ರಕ್ರಿಯೆಗೆ ಸರ್ಕಾರವು ಅಧಿಸೂಚನೆ ಹೊರಡಿಸುತ್ತದೆ
*ಬ್ಲಾಕ್ ಮಟ್ಟದ ನೋಂದಣಿ ಕಚೇರಿಯಲ್ಲಿ ನಾಗರಿಕರು ತಮ್ಮ ಹೆಸರು ನೋಂದಾಯಿಸಲು ಅವಧಿಯನ್ನು ನಿಗದಿ ಮಾಡಲಾಗುತ್ತದೆ
*ಕುಟುಂಬದ ಮುಖ್ಯಸ್ಥನು ತನ್ನ ಮತ್ತು ತನ್ನ ಕುಟುಂಬದ ಸದಸ್ಯರ ಹೆಸರನ್ನು ನೋಂದಾಯಿಸಬೇಕು. ಕುಟುಂಬದ ಸದಸ್ಯರಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಬೇಕು
*ಬ್ಲಾಕ್ ಮಟ್ಟದ ನೋಂದಣಿ ಅಧಿಕಾರಿಯು ಎಲ್ಲಾ ಹೆಸರುಗಳು ಮತ್ತು ದಾಖಲೆಗಳನ್ನು ಪರಿಶೀಲಿಸಿ, ಪೌರತ್ವ ನೋಂದಣಿಯನ್ನು ಸಿದ್ಧಪಡಿಸಬೇಕು
ವಿಫಲ ಸಾಧ್ಯತೆಗಳು
(ಪೌರತ್ವ ನೋಂದಣಿ ನಿಯಮದ 10ನೇ ಸೆಕ್ಷನ್)
*ದಾಖಲೆ ವೇಳೆ ಪರಿಶೀಲನೆ ವೇಳೆ, ದಾಖಲೆಗಳು ನಕಲಿ ಎಂದು ಅನುಮಾನ ಬಂದರೆ
*ಕುಟುಂಬದ ಸದಸ್ಯರು ಅಥವಾ ವ್ಯಕ್ತಿಗಳು ಸಲ್ಲಿಸಿರುವ ದಾಖಲೆಗಳು ತಾಳೆಯಾಗದೇ ಇದ್ದರೆ
*ವ್ಯಕ್ತಿಗಳ ದಾಖಲೆಗಳು ಮತ್ತು ಸರ್ಕಾರದ ದಾಖಲೆಗಳು ತಾಳೆಯಾಗದೇ ಇದ್ದರೆ
ಪೌರತ್ವ ರದ್ದತಿ ಪ್ರಕ್ರಿಯೆ
(ಪೌರತ್ವ ನೋಂದಣಿ ನಿಯಮದ 10ನೇ ಸೆಕ್ಷನ್)
*ದಾಖಲೆಗಳು ತಾಳೆಯಾಗದೇ ಇರುವ ವ್ಯಕ್ತಿಗಳ ಪಟ್ಟಿಯನ್ನು ಬಿಡುಗಡೆ ಮಾಡಬೇಕು
*ಸಂಬಂಧಿತ ಕುಟುಂಬ ಮತ್ತು ವ್ಯಕ್ತಿಗೆ ಈ ಸಂಬಂಧ ಮಾಹಿತಿ ನೀಡಬೇಕು
*ದಾಖಲೆಗಳು ತಾಳೆಯಾಗದೇ ಇರುವುದಕ್ಕೆ ವಿವರಣೆ ಕೇಳಬೇಕು
*ವಿವರಣೆ ಸಮರ್ಪಕ ಆಗಿದ್ದರೆ, ಆ ವ್ಯಕ್ತಿ ಅಥವಾ ಕುಟುಂಬವನ್ನು ಪೌರತ್ವ ನೋಂದಣಿ ಪಟ್ಟಿಗೆ ಸೇರಿಸಬೇಕು
*ದಾಖಲೆಗಳು ಮತ್ತು ವಿವರಣೆ ಸಮರ್ಪಕ ಇರದೇ ಇದ್ದರೆ, ಅವರು ಭಾರತದ ನಾಗರಿಕರು ಎಂಬುದು ದೃಢಪಡದೇ ಇದ್ದರೆ ಅವರನ್ನು ಪೌರತ್ವ ನೋಂದಣಿಯಿಂದ ಕೈಬಿಡಬಹುದು
ಮೇಲ್ಮನವಿಗೆ ಅವಕಾಶ
(ಪೌರತ್ವ ನೋಂದಣಿ ನಿಯಮದ 10ನೇ ಸೆಕ್ಷನ್)
ಪೌರತ್ವ ಪಟ್ಟಿಯಿಂದ ಕೈಬಿಡಲಾದ ವ್ಯಕ್ತಿಗಳು ಬ್ಲಾಕ್ ಮಟ್ಟದಲ್ಲಿ ಇರುವ ‘ವಿದೇಶಿಯರ ನ್ಯಾಯಮಂಡಳಿ’ಗೆ ಅರ್ಜಿ ಸಲ್ಲಿಸಬೇಕು. ಅಲ್ಲಿ ಅವರು ಭಾರತದ ನಾಗರಿಕರು ಎಂದು ದೃಢಪಡದೇ ಇದ್ದರೆ ಅವರನ್ನು ವಿದೇಶಿಯರು ಎಂದು ಘೋಷಿಸಲಾಗುತ್ತದೆ. ಇದರ ವಿರುದ್ಧ ಆ ವ್ಯಕ್ತಿಗಳು ರಾಜ್ಯ ಹೈಕೋರ್ಟ್‌ಗೆ, ನಂತರ ಸುಪ್ರೀಂ ಕೋರ್ಟ್‌ಗೂ ಮೇಲ್ಮನವಿ ಸಲ್ಲಿಸಬಹುದು. ಸುಪ್ರೀಂ ಕೋರ್ಟ್‌ನಲ್ಲೂ ಅವರ ಪೌರತ್ವ ಸಾಬೀತು ಆಗದೇ ಇದ್ದರೆ, ಅವರ ಭಾರತದ ಪೌರತ್ವ ರದ್ದಾಗುತ್ತದೆ. ಅವರನ್ನು ಬಂಧನ ಕೇಂದ್ರಕ್ಕೆ ಕಳುಹಿಸಲಾಗುತ್ತದೆ.
*ದಾಖಲೆ ಮತ್ತು ಪೌರತ್ವ ಸಾಬೀತು ಮಾಡಲು ಸಾಧ್ಯವಾಗದ ಎಲ್ಲಾ ಧರ್ಮದ ಜನರ ಪೌರತ್ವ ರದ್ದಾಗುತ್ತದೆ
*ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಯಾವುದೇ ದಾಖಲೆ ಇಲ್ಲದಿದ್ದರೂ, ಪೌರತ್ವ ನೀಡಲು ಪೌರತ್ವ (ತಿದ್ದುಪಡಿ) ಕಾಯ್ದೆ ಅವಕಾಶ ಮಾಡಿಕೊಡುತ್ತದೆ. ಹೀಗಾಗಿಪೌರತ್ವ ರದ್ದಾದವರಲ್ಲಿ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ಧರ್ಮೀಯರು, ‘ನಾವು ಪಾಕಿಸ್ತಾನ, ಅಫ್ಗಾನಿಸ್ತಾನ, ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಅಕ್ರಮವಾಗಿ ವಲಸೆ ಬಂದವರು’ ಎಂದು ಸಾಬೀತು ಮಾಡಿದರೆ ಅವರಿಗೆ ‘ಸಿಎಎ’ ಅಡಿ ಪೌರತ್ವ ದೊರೆಯಲಿದೆ.ಆದರೆ ಇದಕ್ಕೆ ಸಂಬಂಧಿಸಿದಂತೆ ಸರ್ಕಾರವು ಯಾವುದೇ ಮಾರ್ಗಸೂಚಿಯನ್ನು ರಚಿಸಿಲ್ಲ
*ಆದರೆ ಪೌರತ್ವ ರದ್ದಾದವರಲ್ಲಿ ಮುಸ್ಲಿಮರು ಇದ್ದರೆ ಅವರಿಗೆ ಸಿಎಎಯಿಂದ ಯಾವುದೇ ಉಪಯೋಗವಿಲ್ಲ. ಅವರು ವಿದೇಶಿಯರು ಎನಿಸಿಕೊಳ್ಳಲಿದ್ದಾರೆ.
*ಶ್ರೀಲಂಕಾದಿಂದ ಅಕ್ರಮ ವಲಸೆ ಬಂದಿರುವ ತಮಿಳರು (ಇವರಲ್ಲಿ ಹಿಂದೂಗಳು, ಮುಸ್ಲಿಮರು, ಬೌದ್ಧ ಮತ್ತು ಕ್ರೈಸ್ತ ಧರ್ಮೀಯರು ಇದ್ದಾರೆ) ಸಹ ವಿದೇಶಿಯರು ಎನಿಸಿಕೊಳ್ಳಲಿದ್ದಾರೆ
*ವಿದೇಶಿಯರು ಅಥವಾ ಅಕ್ರಮ ವಲಸಿಗರು ಎನಿಸಿಕೊಂಡವರನ್ನು ಬಂಧನ ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಇಲ್ಲವೇ ಅವರ ಮೂಲ ದೇಶಕ್ಕೆ ಗಡಿಪಾರು ಮಾಡಲಾಗುತ್ತದೆ (ಅಸ್ಸಾಂ ಎನ್‌ಆರ್‌ಸಿಯಲ್ಲಿ ಹೊರಗಿಡಲಾದ 19 ಲಕ್ಷ ಜನರನ್ನು ಇಡಲು, ಆ ರಾಜ್ಯದಲ್ಲಿ ನೂತನವಾಗಿ 10 ಬಂಧನ ಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. 4 ಬಂಧನ ಕೇಂದ್ರಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ)
ಇದನ್ನೂ ಓದಿ: ಜನಸಂಖ್ಯಾ ನೋಂದಣಿಯ ಸುತ್ತ
ಆಧಾರ: ಪಿಟಿಐ, ರಾಯಿಟರ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.