ADVERTISEMENT

ಗುಂಪು ಹತ್ಯೆ ಪ್ರಕರಣ: ಸೀಮಿತ ಆಯ್ಕೆ ಏಕೆ– ‘ಸುಪ್ರೀಂ’ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 20:01 IST
Last Updated 16 ಏಪ್ರಿಲ್ 2024, 20:01 IST
.
.   

ನವದೆಹಲಿ: ಗುಂಪು ಹತ್ಯೆಗಳ ವಿಷಯವನ್ನು ಪ್ರಸ್ತಾಪಿಸಿ ಅರ್ಜಿ ಸಲ್ಲಿಸಿರುವ ‘ನ್ಯಾಷನಲ್‌ ಫೆಡರೇಷನ್‌ ಆಫ್‌ ಇಂಡಿಯನ್‌ ವುಮೆನ್‌’ (ಎನ್‌ಜಿಒ) ಅನ್ನು ಮಂಗಳವಾರ ಪ್ರಶ್ನಿಸಿರುವ ಸುಪ್ರೀಂ ಕೋರ್ಟ್‌, ಅರ್ಜಿಯಲ್ಲಿ ಕೆಲವೇ ಆಯ್ದ ವಿಷಯಗಳನ್ನು ಏಕೆ ಉಲ್ಲೇಖಿಸಲಾಗಿದೆ ಮತ್ತು ರಾಜಸ್ಥಾನದಲ್ಲಿ ಟೈಲರ್‌ನ ಕತ್ತು ಸೀಳಿದ ಘಟನೆಯನ್ನು ಏಕೆ ಸೇರಿಸಿಲ್ಲ ಎಂದು ಕೇಳಿದೆ.

ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ, ಅರವಿಂದ ಕುಮಾರ್ ಮತ್ತು ಸಂದೀಪ್‌ ಮೆಹ್ತಾ ಅವರ ಪೀಠವು, ‘ನಾವು ಧರ್ಮ ಅಥವಾ ಜಾತಿ ಆಧರಿಸಿ ಹೋಗಬಾರದು’ ಎಂದು ಹೇಳಿತು.

ಪ್ರವಾದಿ ಮೊಹಮ್ಮದ್‌ ಅವರ ಕುರಿತ ಬಿಜೆಪಿಯ ಮಾಜಿ ವಕ್ತಾರರಾದ ನೂಪುರ್‌ ಶರ್ಮಾ ಅವರ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಆರೋಪದಲ್ಲಿ 2022ರಲ್ಲಿ ಹತ್ಯೆಗೀಡಾದ ರಾಜಸ್ಥಾನದ ಟೈಲರ್‌ ಕನ್ಹಯ್ಯಾ ಲಾಲ್‌ ಅವರ ಪ್ರಕರಣದ ಕುರಿತು ಅರ್ಜಿದಾರರ ಪರ ಹಾಜರಿದ್ದ ವಕೀಲ ಮೊಹಮ್ಮದ್‌ ನಿಜಾಮುದ್ದೀನ್‌ ಪಾಷಾ ಅವರನ್ನು ಪೀಠ ಕೇಳಿತು.

ADVERTISEMENT

‘ಅದನ್ನು ಅರ್ಜಿಯಲ್ಲಿ ಸೇರಿಸಲಾಗಿಲ್ಲ’ ಎಂದು ವಕೀಲರು ತಿಳಿಸಿದರು.

ಈ ವಿಷಯದಲ್ಲಿ ನಿರ್ದಿಷ್ಟ ರಾಜ್ಯ ಸರ್ಕಾರವನ್ನು ಆರೋಪಿಸಿದ್ದರೆ, ಅರ್ಜಿಯು ಆಯ್ದ ವಿಷಯವನ್ನು ಆಧರಿಸಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಪೀಠ ತಿಳಿಸಿತು. 

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲರಾದ ಅರ್ಚನಾ ದವೆ ಪಾಠಕ್‌ ಅವರು, ಅಂತಹ ಪ್ರತಿ ಘಟನೆಗಳನ್ನು ಅರ್ಜಿ ಒಳಗೊಂಡಿರಬೇಕು. ಆದರೆ, ಇದು ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಷಾ ಅವರು, ‘ನಮ್ಮ ಅರ್ಜಿಯಲ್ಲಿ ಯಾವುದೇ ಧರ್ಮವನ್ನು ಉಲ್ಲೇಖಿಸಿಲ್ಲ. ಇತರ ವಕೀಲರು ಬೇರೆ ಪ್ರಕರಣವನ್ನು ತರಲು ಬಯಸಿದರೆ, ನ್ಯಾಯಾಲಯದ ಮುಂದೆ ಹೆಚ್ಚುವರಿ ವಿಷಯಗಳನ್ನು ಇರಿಸುವುದನ್ನು ಸ್ವಾಗತಿಸುತ್ತೇವೆ’ ಎಂದರು. 

ಇದನ್ನು ವಿಸ್ತೃತ ದೃಷ್ಟಿಯಿಂದ ನೋಡಬೇಕಿದೆ ಎಂದು ಪೀಠವು ಇದೇ ವೇಳೆ ತಿಳಿಸಿತು.

‘ಮುಸ್ಲಿಂ ಸಮುದಾಯದ ವಿರುದ್ಧ ಗುಂಪು ಹಿಂಸಾಚಾರ ಆತಂಕಕಾರಿ’ ಎಂದು ಅರ್ಜಿಯಲ್ಲಿ ಉಲ್ಲೇಖಿಸಿರುವುದನ್ನು ದವೆ ಪ್ರಶ್ನಿಸಿದರು.

‘ಇದು ವಾಸ್ತವ ಮತ್ತು ಸತ್ಯವಾಗಿದೆ’ ಎಂದು ಪಾಷಾ ವಾದಿಸಿದರು. ಇದಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ಪೀಠವು ದವೆ ಅವರಿಗೆ ತಿಳಿಸಿತು. ಪಿಐಎಲ್‌ ಅನ್ನು ನಿರ್ದಿಷ್ಟ ಸಮುದಾಯಕ್ಕೆ ಸೀಮಿತಗೊಳಿಸಬಾರದು ಎಂದು ದವೆ ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.