ಚಂಡೀಗಢ: ನುಹ್ ಹಿಂಸಾಚಾರದ ನ್ಯಾಯಾಂಗ ತನಿಖೆಯಿಂದ ಹರಿಯಾಣ ಸರ್ಕಾರವು ಓಡಿಹೋಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಆರೋಪಿಸಿದ್ದು, ಜುಲೈ 31ರಂದು ಪ್ರಾರಂಭವಾದ ಕೋಮುಗಲಭೆಯ ಹಿಂದಿನ ಉದ್ದೇಶವನ್ನು ಪ್ರಶ್ನಿಸಿದ್ದಾರೆ.
ಘಟನೆ ಕುರಿತು ಬಿಜೆಪಿ–ಜೆಜೆಪಿ ಸರ್ಕಾರವು ಸರಿಯಾದ ಸಮಯದಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ. ಆದರೆ, ಈಗ ಘಟನೆಯ ನಂತರದ ನ್ಯಾಯಾಂಗ ತನಿಖೆಯಿಂದ ಸರ್ಕಾರವು ಏಕೆ ಓಡಿ ಹೋಗುತ್ತಿದೆ ಎಂದು ಹರಿಯಾಣ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಹೂಡಾ ಪ್ರಶ್ನಿಸಿದ್ದಾರೆ.
ರಾಜ್ಯ ವಿಧಾನಸಭೆಯ ಮುಂಬರುವ ಮುಂಗಾರು ಅಧಿವೇಶನದಲ್ಲಿ ತಮ್ಮ ಪಕ್ಷವು (ಕಾಂಗ್ರೆಸ್) ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಪ್ರವಾಹ ಸಮಸ್ಯೆಗಳ ಕುರಿತು ನಿಲುವಳಿ ಸೂಚನೆ ಮಂಡಿಸಲಿದೆ ಎಂದು ಹೂಡಾ ಹೇಳಿದರು.
ಹರಿಯಾಣ ವಿಧಾನಸಭೆಯ ಮುಂಗಾರು ಅಧಿವೇಶನ ಆಗಸ್ಟ್ 25ರಿಂದ ಪ್ರಾರಂಭವಾಗಲಿದೆ.
‘ಗೃಹ ಸಚಿವರ ಬಳಿ ಸಿಐಡಿ ಇಲಾಖೆ ಇಲ್ಲದಿರುವುದು ಅಚ್ಚರಿ ಮೂಡಿಸಿದೆ. ಸಿಐಡಿ ಇಲ್ಲದೆ ಗೃಹ ಇಲಾಖೆ ಕಣ್ಣು ಕಿವಿ ಇಲ್ಲದ ಸಚಿವಾಲಯವಾಗಿ ಮಾರ್ಪಟ್ಟಿದೆ. ಇದರಿಂದ ರಾಜ್ಯದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರದೊಳಗೆ ಸಮನ್ವಯದ ಕೊರತೆ ಇದೆ ಎಂದು ಹೂಡಾ ವಾಗ್ದಾಳಿ ನಡೆಸಿದ್ದಾರೆ.
ಜುಲೈ 31 ರಂದು ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆ ವೇಳೆ ಆರಂಭವಾದ ಕೋಮುಗಲಭೆ ತೀವ್ರ ಹಿಂಸಾಚಾರ ರೂಪಕ್ಕೆ ತಿರುಗಿತ್ತು. ಇದು ಪಕ್ಕದ ಗುರುಗ್ರಾಮ ಜಿಲ್ಲೆಗೂ ವ್ಯಾಪಿಸಿತ್ತು. ಘಟನೆಯಲ್ಲಿ ಕನಿಷ್ಠ 7 ಮಂದಿ ಸಾವಿಗೀಡಾಗಿ, 70ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.